ಶ್ರೀನಗರ (ಆ. 23): ಜಮ್ಮು- ಕಾಶ್ಮೀರಕ್ಕೆ ವಿಶೇಷಾಧಿಕಾರ ರದ್ದುಗೊಂಡ ಬಳಿಕ ಅಲ್ಲಿನ ಜನರಿಗೆ ಹೊಸದೊಂದು ಸಮಸ್ಯೆ ತಲೆದೋರಿದೆ. ಅದೇನೆಂದರೆ, ಕ್ಷೌರ ಮಾಡಲು ಕ್ಷೌರಿಕರೇ ಇಲ್ಲದೇ ಸ್ವತಃ ಅವರೇ ಕ್ಷೌರ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆಯಂತೆ.

370ನೇ ವಿಧಿ ರದ್ದಾದ ಬಳಿಕ ಕಾಶ್ಮೀರದಲ್ಲಿ ಮೊದಲ ಉಗ್ರನ ಹತ್ಯೆ!

ಹೌದು, ಆಗಸ್ಟ್‌ 5 ರಂದು 370 ನೇ ವಿಧಿ ರದ್ದು ಬಳಿಕ ಕಣಿವೆ ರಾಜ್ಯದಲ್ಲಿ ಉಂಟಾದ ಬಿಕ್ಕಟ್ಟಿನಿಂದ ಉತ್ತರಪ್ರದೇಶದ ಬಿಜನೋರ್‌ ಮೂಲದ 20 ಸಾವಿರಕ್ಕೂ ಅಧಿಕ ಕ್ಷೌರಿಕರು ಜಮ್ಮು- ಕಾಶ್ಮೀರ ತೊರೆದಿದ್ದಾರೆ. ಇದರಿಂದ 17 ದಿನಗಳಿಂದ ಕ್ಷೌರ ಅಂಗಡಿಗಳು ಬಾಗಿಲು ಹಾಕಿವೆ. ತಲೆಕೂದಲು ಮತ್ತು ಗಡ್ಡ ಕತ್ತರಿಸಲು ಕ್ಷೌರಿಕರೇ ಇಲ್ಲದೇ ಅಲ್ಲಿನ ಜನರು ಪರದಾಡುವಂತಾಗಿದೆ. ಇನ್ನೂ ಕೆಲವರು ಅನಿವಾರ್ಯವಾಗಿ ಒಬ್ಬರಿಗೊಬ್ಬರು ಕ್ಷೌರ ಮಾಡಿಕೊಳ್ಳುತ್ತಿದ್ದಾರೆ.

25 ವರ್ಷಗಳ ಹಿಂದಿನಿಂದ ಉತ್ತರಪ್ರದೇಶದ ಬಿಜನೋರ್‌ ಮೂಲದ ಕ್ಷೌರಿಕರು ಕಾಶ್ಮೀರದ ಕ್ಷೌರ ವ್ಯವಹಾರದಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಹೀಗಾಗಿ ಈ ಸಮಸ್ಯೆ ಎದುರಾಗಿದೆ. ಈ ನಡುವೆ, ಬಿಜನೋರ್‌ ಪ್ರಾಬಲ್ಯದ ನಡುವೆ ಕೆಲ ಕಾಶ್ಮೀರಿ ಮೂಲದ ಜನರು ಕ್ಷೌರಿಕ ವೃತ್ತಿಯನ್ನು ಮುಂದುವರಿಸಿದ್ದರು. ಇದೀಗ ಅವರಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.

ನಿರೀಕ್ಷೆಗೂ ಮೀರಿದ ಸಾಧನೆ: ಬಿಜೆಪಿಗೆ 3.8 ಕೋಟಿ ಹೊಸ ಸದಸ್ಯರು!

ಬಕ್ರೀದ್‌ಗೆ 10 ದಿನಗಳಿರುವಾಗ ಬಹುತೇಕ ಕಾಶ್ಮೀರಿಗಳು ಹೇರ್‌ ಕಟ್‌, ಶೇವಿಂಗ್‌ ಅಥವಾ ಗಡ್ಡ ಟ್ರಿಮ್‌ ಮಾಡಿಸಿಕೊಳ್ಳುವುದಿಲ್ಲ. ಅದಕ್ಕೆ ಧಾರ್ಮಿಕ ಕಾರಣಗಳಿವೆ. ಇದೀಗ ಹಬ್ಬ ಮುಗಿದಿರುವ ಹಿನ್ನೆಲೆಯಲ್ಲಿ ಗ್ರಾಹಕರ ಸಂಖ್ಯೆ ದಿಢೀರ್‌ ಹೆಚ್ಚಾಗಿದೆ. ಬೆಳಗಾಗುತ್ತಿದ್ದಂತೆ ಜನ ಮನೆಗೆ ಬರುತ್ತಿದ್ದಾರೆ ಎಂದು ಅಹಮದ್‌ ಎಂಬ ಸ್ಥಳೀಯ ಕ್ಷೌರಿಕರು ಮಾಹಿತಿ ನೀಡಿದ್ದಾರೆ.

370 ನೇ ವಿಧಿ ರದ್ದು ಬಳಿಕ ಸುಮಾರು 3 ಲಕ್ಷದಷ್ಟುಕೌಶಲ್ಯ ಹಾಗೂ ಕೌಶಲ್ಯರಹಿತ ನೌಕರರು ಕಣಿವೆ ರಾಜ್ಯ ತೊರೆದಿದ್ದಾರೆ ಎಂದು ಹೇಳಲಾಗಿದೆ.