ಬಾರಾಮುಲ್ಲಾ[ಆ.22]: ಜಮ್ಮು- ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆಯ ಮಧ್ಯೆ ಮಂಗಳವಾರ ರಾತ್ರಿ ಗುಂಡಿನ ಚಕಮಕಿ ಏರ್ಪಟ್ಟಿದ್ದು, ಉಗ್ರನೊಬ್ಬನನ್ನು ಹೊಡೆದುರುಳಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಜಮ್ಮು- ಕಾಶ್ಮೀರದ ವಿಶೇಷ ಪೊಲೀಸ್‌ ಅಧಿಕಾರಿ ಬಿಲ್ಲಾಳ್‌ ಎನ್ನುವವರು ಹುತಾತ್ಮರಾಗಿದ್ದಾರೆ.

ಎಸ್‌ಐ ಅಮರದೀಪ್‌ ಪರಿಹಾರ್‌ ಎನ್ನುವವರು ಗಾಯಗೊಂಡಿದ್ದು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಉಗ್ರರೊಂದಿಗೆ ನಡೆದ ಮೊದಲ ಎನ್‌ಕೌಂಟರ್‌ ಇದಾಗಿದೆ.

ಹಳೆಯ ಬಾರಾಮುಲ್ಲಾ ಜಿಲ್ಲೆಯಲ್ಲಿ ಮಂಗಳವಾರ ಸಂಜೆ 5 ಗಂಟೆಯ ವೇಳೆಗೆ ಎನ್‌ಕೌಂಟರ್‌ ಆರಂಭವಾಗಿದ್ದು, ಬುಧವಾರ ಮುಂಜಾನೆ 5.30ರ ವೇಳೆಗೆ ಕಾರ್ಯಾಚರಣೆ ಮುಕ್ತಾಯಗೊಂಡಿದೆ.