ಬೆಂಗಳೂರು[ಜು. 06] ಅದು ಜುಲೈ 6 ಬೆಳಗ್ಗೆ 11 ಗಂಟೆ .ಒಬ್ಬರಾದ ಮೇಲೆ ಒಬ್ಬರು ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರು ವಿಧಾನಸೌಧದ ಸ್ಪೀಕರ್ ಕೊಠಡಿ ಬಾಗಿಲು ಬಡಿದಿದ್ದರು. ಅವರೆಲ್ಲ ಅಲ್ಲಿ ಸೇರಿದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು!

ಆದರೆ ರಾಜೀನಾಮೆ ಸ್ವೀಕಾರ ಮಾಡಲು ಅಲ್ಲಿ ಸ್ಪೀಕರ್ ರಮೇಶ್ ಕುಮಾರ್ ಇರಲೇ ಇಲ್ಲ.  ಹಾಗಾದರೆ  ಇನ್ನೇನು ಮಾಡುವುದು. ವಿಧಾನಸಭೆ  ಕಾರ್ಯದರ್ಶಿ ವಿಶಾಲಾಕ್ಷಿ ಕೈಗೆ ರಾಜೀನಾಮೆ ನೀಡಲು 13 ಜನ ಅತೃಪ್ತ ಶಾಸಕರು ತೀರ್ಮಾನ ಮಾಡಿದರು. ಕೆಲ ಹೊತ್ತು ಅಲ್ಲೆ ಕಾಯುವ ನಿರ್ಧಾರಕ್ಕೆ ಬಂದರು.

ಬಳ್ಳಾರಿ ವಿಜಯನಗರದ ಶಾಸಕ ಆನಂದ್ ಸಿಂಗ್  ರಾಜೀನಾಮೆ ನೀಡಿ ಬಹಳ ಕಾಲವೇ ಆಗಿತ್ತು. ಎಲ್ಲದಕ್ಕಿಂತ ಮೊದಲು ಕಾಂಗ್ರೆಸ್ ಪಾಳಯ ತೊರೆದಿದ್ದು ಉಮೇಶ್ ಜಾಧವ್.  ಅಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಉಮೇಶ್ ಜಾಧವ್ ಇಂದು ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸೊಲಿಸಿದ ಸಂಸದ.

ರಾಜೀನಾಮೆ ಕೊಟ್ಟವರಿಗೆ ಮಂತ್ರಿಗಿರಿ, ಸ್ಥಾನ ತೊರೆಯಲಿದ್ದಾರೆ 10 ಸಚಿವರು!

ಗೋಕಾಕಿನ ಸಾಹುಕಾರ, ಬೆಳಗಾವಿಯ ಸಾಹುಕಾರ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಲೇ ಬಂದಿದ್ದರು. ಅದು ಖಾತ್ರಿಯಾಗಲು ಶನಿವಾರ ಜುಲೈ 6 ಬರಬೇಕಾಯಿತು.  ಮಾಧ್ಯಮಗಳು ಮತ್ತು ರಾಜಕೀಯ ಪಂಡಿತರ ಲೆಕ್ಕಾಚಾರದಲ್ಲಿ ಅತೃಪ್ತರು ಎಂದು ಗುರುತಿಸಿಕೊಂಡು ಆಗಾಗ ಹೇಳಿಕೆ ಕೊಡುತ್ತಲೇ ಇದ್ದ ಹಿರೇಕೆರೂರಿನ ಬಿಸಿ ಪಾಟೀಲ್, ನಾನವನಲ್ಲ ನಾನವನಲ್ಲ ಎನ್ನುತ್ತಿದ್ದ  ಅಥಣಿಯ ಮಹೇಶ್ ಕುಮಟಳ್ಳಿ,  ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ಯಲ್ಲಾಪುರದ ಶಿವರಾಮ ಹೆಬ್ಬಾರ್ ರಾಜೀನಾಮೆ ಪತ್ರ ಹಿಡಿದು ಬಂದಾಗಲೂ ಅಚ್ಚರಿ ಆಗಲಿಲ್ಲ.

ಮಾಜಿ ಸಿಎಂ ಸಿದ್ದರಾಮಯ್ಯ ಪರಮಾಪ್ತರು ಎಂದು ಗುರುತಿಸಿಕೊಂಡಿದ್ದ ಬೆಂಗಳೂರು ವ್ಯಾಪ್ತಿಯ ಶಾಸಕರು ರಾಜೀನಾಮೆ ಕೊಡಲು ಬಂದಿದ್ದು ಕ್ಯಾಮರಾಗಳನ್ನು ಹಿಂದೆ ಮುಂದೆ ತಿರುಗಿಸುವಂಥಹ  ಸ್ಥಿತಿ ತಂದಿತ್ತು. ಇವರಿಗೆ ಜೆಡಿಎಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ಎಚ್.ವಿಶ್ವನಾಥ್ ಅಂಥ ಮುತ್ಸದ್ಧಿ ರಾಜಕಾರಣಿಯೂ ಜತೆಯಿದ್ದರು.

ದೋಸ್ತಿ ಖತಂ.. ಅಮೆರಿಕದಿಂದ ಬಂದ ತಕ್ಷಣ ಸಿಎಂ ಕುಮಾರಸ್ವಾಮಿ ರಾಜೀನಾಮೆ?

ಆರ್ ಆರ್ ನಗರದ ಮುನಿರತ್ನ, ಯಶವಂತಪುರದ  ಎಸ್.ಟಿ.ಸೋಮಶೇಖರ್, ಕೆ.ಆರ್ ಪುರದ ಭೈರತಿ ಬಸವರಾಜ್, ಮಹಾಲಕ್ಷ್ಮೀ ಲೇಔಟ್ ನ ಗೋಪಾಲಯ್ಯ, ಹೆಸರೇ ಇರದ ಕೆಆರ್ ಪೇಟೆಯ ನಾರಾಯಣ ಗೌಡ ಸಹ ರಾಜೀನಾಮೆ ನೀಡಲು ಬಂದಿದ್ದರು.

ಅತಿ ಸರಳತೆಯಿಂದ ರಾಜೀನಾಮೆ ನೀಡಲು ಹೋಗುತ್ತಿದ್ದೇನೆ ಎಂದು ಹೇಳಿದ್ದು  ಬಿಟಿಎಂ ಲೇಔಟ್  ಶಾಸಕ ರಾಮಲಿಂಗಾ ರೆಡ್ಡಿ, ಕಾರಣ ಕೇಳಿದರೆ ಅಂದೇ ಹೇಳಿದ್ದೇನಲ್ಲ ಎಂದು ಸಾವಧಾನದಿಂದಲೇ ಉತ್ತರಿಸಿದವರು ರೆಡ್ಡಿ. ಮಗಳು ಸೌಮ್ಯಾ ಅವರ ತೀರ್ಮಾನ ನೀವೇ ಕೇಳಿಕೊಳ್ಳಿ ಎಂದರು.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಎದ್ದನೋ ಬಿದ್ದನೋ ಎಂದು ದೌಡಾಯಿಸಿದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಮನವೊಲಿಕೆ ಯತ್ನ ಮಾಡಿದರು ಅವರಿಗೆ ಸಿಕ್ಕಿದ್ದು ಖಾರ ಉತ್ತರ. ಅದೆ ಸಿಟ್ಟಿನಲ್ಲಿ ಮುನಿರತ್ನ ರಾಜೀನಾಮೆ ನೀಡಿದ್ದ ವೇಳೆ ಸಿಕ್ಕಿದ್ದ ಸ್ವೀಕೃತಿ ಪತ್ರವನ್ನು ಡಿಕೆಶಿ ಹರಿದು ಹಾಕಿ ಸುದ್ದಿ ಮಾಡಿಕೊಂಡರು. ಬಂದ ದಾರಿಗೆ ಸುಂಕ ಇಲ್ಲ ಎಂದರಿತ ಡಿಕೆಶಿ ಅಂತೂ ಇಂತೂ ರಾಜೀನಾಮೆ ಕೊಟ್ಟ ರಾಮಲಿಂಗಾರೆಡ್ಡಿ ಅವರನ್ನು ತಮ್ಮದೇ ಕಾರಿನಲ್ಲಿ ಕುಳ್ಳಿರಿಸಿಕೊಂಡು ಮಾತುಕತೆಗೆಂದು ಕರೆದೊಯ್ದರು.

ಇಲ್ಲಿ ಶಾಸಕರು ರಾಜೀನಾಮೆ ಕೊಟ್ಟರೆ ದೂರದಲ್ಲಿ ಎಲ್ಲೋ ಇದ್ದ ಸ್ಪೀಕರ್ ರಮೇಶ್ ಕುಮಾರ್ ಮಂಗಳವಾರ ಅಂದರೆ ಜುಲೈ 9 ರಂದು 13 ಶಾಸಕರ ರಾಜೀನಾಮೆ ಪರಿಶೀಲನೆ ಎಂದ್ರು.. ಅವರ ಬಳಿ ಆನಂದ್ ಸಿಂಗ್ ರಾಜೀನಾಮೆ ಹಾಗೆ ಇದೆ.

ಇಷ್ಟು ಸಾಲದು ಎಂದರಿತ ರಾಜೀನಾಮೆ ಕೊಟ್ಟ ಶಾಸಕರು ಮಧ್ಯಾಹ್ನದ ವೇಳೆಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ರಾಜೀನಾಮೆ ಕೊಟ್ಟಿದ್ದೇವೆ ಎಂದು ಹೇಳಿ ಬಂದರು. ಅಲ್ಲಿಂದ ನೇರವಾಗಿ ಮುಂಬೈ ವಿಮಾನ ಏರಿದರು.

ಮಧ್ಯಾಹ್ನದ ಮೇಲೆ ಅದೆಲ್ಲಿಂದಲೋ ದೌಡಾಯಿಸಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಿರಿಯ ನಾಯಕರೊಂದಿಗೆ ಸಭೆ ಮಾಡಿ ಪರಿಹಾರ ಕ್ರಮದ ಚರ್ಚೆ ಮಾಡಿದರು. ವೇಣು ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ ಜಟಾಪಟಿ ಮಾಡಿಕೊಂಡರು ಎಂಬ ಸುದ್ದಿಯೂ ಬಂತು. ಒಟ್ಟು ಅವರ ಮೇಲೆ ಇವರು ಇವರ ಮೇಲೆ ಅವರು ಆರೋಪ ಮಾಡಿದ್ದೆ ಬಂತು ಬಿಟ್ಟರೆ ಸಭೆಯಲ್ಲಿ ಪರಿಹಾರ ಸಿಗಲಿಲ್ಲ.

ಈಗ 10 ಜನ ಶಾಸಕರು ಮುಂಬೈನಲ್ಲಿ ಠಿಕಾಣಿ ಹೂಡಿದ್ದಾರೆ. ದೇಶದಲ್ಲಿ ಇರದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸಿಎಂ ಕುಮಾರಸ್ವಾಮಿ ವಾಯು ವೇಗದಲ್ಲಿ ಧಾವಿಸುತ್ತಿದ್ದಾರೆ. ಇತ್ತ ಬಿಜೆಪಿ ಸರಕಾರ ರಚನೆಗೆ  ಹೋಗಲ್ಲ ಎಂದು ಹೇಳುತ್ತಿದ್ದರೂ ಮತ್ತೊಂದು ಕಡೆಯಿಂದ ಕಸರತ್ತು ಆರಂಭಿಸಿದೆ. ಇನ್ನು ಒಂದು ನಾಲ್ಕು ದಿನ ರಾಜಕೀಯ ರೋಚಕತೆ ವಿಶ್ವಕಪ್ ಸೆಮಿಫೈನಲ್ ಅನ್ನು ಹಿಂದೆ ಹಾಕಲಿದೆ.