ಉಡುಪಿ [ ಆ.09]: ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳು ಪ್ರವಾಹದಿಂದ ತತ್ತರಿಸುತ್ತಿವೆ. ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

ಉಡುಪಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಸುಷ್ಮಾ ಸ್ವರಾಜ್ ನಿಧನದಿಂದ ಸದ್ಯ ಮುಂದೂಡಿಕೆಯಾಗಿದೆ. ಹೈ ಕಮಾಂಡ್ ಒಪ್ಪಿಗೆ ದೊರೆತ ತಕ್ಷಣ ಮಂತ್ರಿಮಂಡಲ ವಿಸ್ತರಣೆ ಮಾಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದೆ.  ನೆರೆ ಪರಿಹಾರ ನಮ್ಮ ಮೊದಲ ಆದ್ಯತೆಯಾಗಿದೆ. ಸದ್ಯ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎನ್ನುವ ಲೆಕ್ಕ ಸಿಕ್ಕಿಲ್ಲ. ನಷ್ಟದ ಪ್ರಮಾಣದ ಬಗ್ಗೆ ಮಾಹಿತಿ ಕಲೆಹಾಕಿ ಕೇಂದ್ರಕ್ಕೆ ನೆರವಿಗಾಗಿ ಪತ್ರ ಬರೆಯಲಾಗುತ್ತದೆ ಎಂದರು. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ವೇಳೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಶೋಭಾ ಕರಂದ್ಲಾಜೆ, ಅಧಿಕಾರ ಕಳೆದುಕೊಂಡು ಅವರು ಅಸಹನೆಗೆ ಒಳಗಾಗಿದ್ದಾರೆ.  ಅಧಿಕಾರ ಇಲ್ಲದೇ ಬೇಸತ್ತು ಮಾತುಗಳನ್ನಾಡುತ್ತಿದ್ದಾರೆ. ಕುಮಾರಸ್ವಾಮಿ ಸಿಟ್ಟಿನಲ್ಲಿದ್ದಾರೆ. ಭ್ರಮನಿರಸನವಾದವರ ಬಗ್ಗೆ ನಾವು ಮಾತನಾಡಲ್ಲ ಎಂದರು.