ಬೆಂಗಳೂರು (ಆ. 23): ಕನ್ನಡ ನಾಡಿನಲ್ಲಿ ಕನ್ನಡ ಹಾಗೂ ಕನ್ನಡಿಗರೇ ಸಾರ್ವಭೌಮ. ಆದರೆ ರಾಜ್ಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ಅನ್ಯಭಾಷಿಕರ ದಾಳಿ, ಕನ್ನಡಿಗರ ಉದ್ಯೋಗ ಕಸಿಯುವ ಪ್ರಯತ್ನ, ಇದಕ್ಕೆ ಪೂರಕ ವಾತಾವರಣ ಸೃಷ್ಟಿಸುತ್ತಿರುವ ರಾಜ್ಯ ಸರ್ಕಾರಗಳ ಧೋರಣೆಯಿಂದಾಗಿ ಕನ್ನಡಿಗರ ಜೀವಿಸುವ ಹಕ್ಕು ಕರುನಾಡಿನಲ್ಲೇ ವಂಚನೆಗೆ ಒಳಗಾಗಿದೆ.

ಕನ್ನಡಿಗರ ಪಾಲಿನ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕನ್ನಡ ಹಾಗೂ ಕನ್ನಡ ವಿರೋಧಿ ಶಕ್ತಿಗಳ ವಿರುದ್ಧವಾಗಿ ‘ಕನ್ನಡಪ್ರಭ’ ಪತ್ರಿಕೆ 15 ದಿನಗಳ ಕಾಲ ನಿರಂತರವಾಗಿ ಪ್ರಕಟಿಸಿರುವ ‘ಕನ್ನಡಪ್ರಭ ಹಕ್ಕೊತ್ತಾಯ’ ವರದಿಗಳಿಗೆ ರಾಜ್ಯಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಕರ್ನಾಟಕದಲ್ಲಿ ಉದ್ಯೋಗದ ಜೊತೆ ಉದ್ದಿಮೆಯೂ ಪರಭಾಷಿಕರ ಪಾಲು!

ಅಲ್ಲದೆ, ಸರ್ಕಾರವೂ ಸರಣಿ ವರದಿಗಳ ಕನ್ನಡಿಗರ ಪರ ಕನ್ನಡಪ್ರಭ ಹಕ್ಕೊತ್ತಾಯಕ್ಕೆ ಪೂರಕವಾಗಿ ಸ್ಪಂದಿಸಿದೆ. ರಾಜ್ಯದ ಉದ್ಯೋಗಗಳು ಕನ್ನಡಿಗರಿಗೇ ಸಿಗಬೇಕು ಎಂಬ ನಿಲುವಿಗೆ ತಾವೂ ಬದ್ಧ ಎಂದು ಪ್ರಕಟಿಸಿದೆ.

ಕನ್ನಡಿಗರ ನ್ಯಾಯಯುತ ಬೇಡಿಕೆ ಹಾಗೂ ಹಕ್ಕುಗಳ ಪ್ರತಿಪಾದಿಸಿದ ಕನ್ನಡಪ್ರಭ ಪ್ರಯತ್ನವನ್ನು ನೆಟ್ಟಿಗರು ಮಾತ್ರವಲ್ಲದೆ ಕನ್ನಡಪರ ಹೋರಾಟಗಾರರು, ಸಾಹಿತಿಗಳು ಹಾಗೂ ಚಿಂತಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೆ, ಹೋರಾಟವನ್ನು ಮುಂದಿನ ಹಂತಕ್ಕೂ ಕೊಂಡೊಯ್ಯುವಂತೆ ಮನವಿ ಮಾಡಿದ್ದಾರೆ.

‘ಕನ್ನಡಪ್ರಭ’ ಹಕ್ಕೊತ್ತಾಯದ ವರದಿಗಳನ್ನು ಸಾವಿರಾರು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಫೇಸ್ಬುಕ್‌, ಟ್ವೀಟರ್‌ ಸೇರಿದಂತೆ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿ ಪ್ರತಿಕ್ರಿಯಿಸುವ ಮೂಲಕ ಕನ್ನಡದ ಬಗೆಗಿನ ತಮ್ಮ ಕೆಚ್ಚನ್ನು ಹೊರಗೆಡವಿದ್ದಾರೆ.  ತಮ್ಮಲ್ಲಿನ ಮಾತೃಭಾಷೆ ಅಭಿಮಾನ ಹಾಗೂ ಕಣ್ಣೆದುರು ಕನ್ನಡಿಗರಿಗೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಲು ಕನ್ನಡಪ್ರಭ ಹಕ್ಕೊತ್ತಾಯವನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ.

ಹಕ್ಕೊತ್ತಾಯವು ರಾಜ್ಯಾದ್ಯಂತ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಲು ಯಶಸ್ವಿಯಾಗಿದೆ. ಡಾ.ಸರೋಜಿನಿ ಮಹಿಷಿ ವರದಿ ಆಧರಿಸಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸಲು ಸ್ಪಷ್ಟಕಾಯಿದೆ ರೂಪಿಸಬೇಕು. ಈ ಕುರಿತು ರಾಜ್ಯ ಸರ್ಕಾರ ಬದ್ಧತೆ ಪ್ರದರ್ಶಿಸಬೇಕು ಎಂಬ ಒತ್ತಾಯ ವ್ಯಾಪಕವಾಗುತ್ತಿದೆ.

ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಕನ್ನಡಿಗರ ಎದೆಯಲ್ಲಿ ನೋವು, ಕೆಚ್ಚು, ಆಕ್ರೋಶ ಎಲ್ಲವೂ ಅಡಗಿದೆ. ಅವರ ಧ್ವನಿಯಾಗಲು ಮಾಧ್ಯಮ ವರ್ಗದಿಂದ ಒಂದು ಪ್ರಬಲ ಕೂಗು ಬೇಕಾಗಿತ್ತು. ಇದನ್ನು ಕನ್ನಡಪ್ರಭ ಸಾಕಾರಗೊಳಿಸಿದೆ ಎಂದು ಸಾರಸ್ವತ ಲೋಕದ ಗಣ್ಯರೂ ಬೆನ್ನುತಟ್ಟಿದ್ದಾರೆ. ಕನ್ನಡ ಪ್ರಭ ಹಕ್ಕೋತ್ತಾಯಕ್ಕೆ ಸಮಾಜದ ಗಣ್ಯರು ನೀಡಿದ ಪ್ರತಿಕ್ರಿಯೆ ಹಾಗೂ ಶ್ಲಾಘನೆ ಇಲ್ಲಿದೆ.

ಕನ್ನಡ ಪರ ಕನ್ನಡಪ್ರಭದಿಂದ ಧರ್ಮಯುದ್ಧ

ರಾಜ್ಯದ ಇಡೀ ರಾಜಕೀಯ ವಾತಾವರಣ ಪ್ರಕ್ಷುಬ್ಧವಾಗಿರುವ ಸಂದರ್ಭದ ನಡುವೆಯೂ ‘ಕನ್ನಡಪ್ರಭ’ ಪತ್ರಿಕೆ ‘ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ’ ವಿಚಾರವನ್ನು ಒಂದು ಧರ್ಮಯುದ್ಧದ ರೀತಿಯಲ್ಲಿ ತೆಗೆದುಕೊಂಡು, ಅದರ ಆಮೂಲಾಗ್ರ ಶೋಧಕ್ಕೆ ತೊಡಗಿ ತನ್ನ ಜನಪರವಾದ ಬದ್ಧತೆಯನ್ನು ಮೆರೆದಿದೆ.

ಸರ್ವ ಕನ್ನಡಿಗರು ಪತ್ರಿಕೆಯ ಈ ಪರಿಯ ಹೋರಾಟಕ್ಕೆ ಪ್ರತಿಸ್ಪಧಿಸುವ ಮುಖೇನ ತಮ್ಮ ಜಾಗೃತಿ ತೋರುವ ಅಗತ್ಯವಿದೆ. ಮಾಧ್ಯಮಗಳನ್ನು ನೇತ್ಯಾತ್ಮಕವಾಗಿ ನೋಡುವುದನ್ನು ರೂಢಿ ಮಾಡಿಕೊಂಡಿರುವ ಈಗಿನ ವಾತಾವರಣದಲ್ಲಿ ಕನ್ನಡಪ್ರಭದ ಈ ಹೆಜ್ಜೆ ಅಭಿನಂದನೀಯವಾದುದು.

ಸರ್ಕಾರಗಳು ಇಂತಹ ಸತ್ಯಶೋಧದದ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಿ ಕನ್ನಡಿಗರ ಉದ್ಯೋಗದ ಹಕ್ಕು ರಕ್ಷಿಸುವ ಮೂಲಕ ಪ್ರಜಾಪ್ರಭುತ್ವದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಸಂರಕ್ಷಿಸುವ ಕೆಲಸ ಮಾಡಬೇಕು.

-ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ

ಇಂತಹ ಒಂದು ಕೂಗು ಬೇಕಾಗಿತ್ತು

‘ಕನ್ನಡಪ್ರಭ’ ನಡೆಸಿದ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಅಭಿಯಾನ ಅರ್ಥಪೂರ್ಣ ಹಾಗೂ ಅಭಿನಂದನೀಯವಾದುದು. ಇಂತಹ ಒಂದು ಕೂಗು ಬೇಕಾಗಿತ್ತು. ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕ ರಾಜ್ಯಗಳ ಸ್ವಾಯತ್ತತೆ ಸಂರಕ್ಷಿಸಿಕೊಳ್ಳುವೆಡೆಗೆ ಈ ಕೂಗು ತಿರುವು ಪಡೆಯಬೇಕಾಗಿದೆ. ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ಮೊದಲ ಹಂತವಾಗಿ ರಾಜ್ಯ ಸರ್ಕಾರ ಐಟಿ ಬಿಟಿ, ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಎಲ್ಲ ಖಾಸಗಿ ಉದ್ದಿಮೆಗಳಲ್ಲೂ ಸ್ಥಳೀಯರಿಗೆ ಇಂತಿಷ್ಟುಆದ್ಯತೆ ಮೇಲೆ ಉದ್ಯೋಗ ಮೀಸಲಾತಿ ನೀಡಬೇಕೆಂಬ ಕಾಯ್ದೆಯನ್ನು ಸಾಂವಿಧಾನಾತ್ಮಕವಾಗಿ ಜಾರಿಗೆ ತರಬೇಕು. ಇದರಿಂದ ಹೊಸ ಉದ್ದಿಮೆಗಳೂ ರಾಜ್ಯಕ್ಕೆ ಬರಲು ಹಿಂದೇಟು ಹಾಕುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಹೋರಾಟವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದು ಎಲ್ಲ ರಾಜ್ಯಗಳ ಹೋರಾಟವಾಗಿ ರೂಪಿಸಬೇಕಾಗುತ್ತದೆ.

ರಾಜ್ಯದ ಎಲ್ಲ ಉದ್ಯೋಗಕ್ಕೂ ಪರಭಾಷಿಕರ ಲಗ್ಗೆ

ಸಂಪೂರ್ಣ ಖಾಸಗೀಕರಣದ ಹಾಗೂ ಬಹುರಾಷ್ಟ್ರೀಯ ಕಂಪನಿಗಳೇ ಹೆಚ್ಚಿರುವ ಹಾಗೂ ಅವುಗಳು ಹೇಳಿದಂತೆ ಸರ್ಕಾರಗಳು ಕೇಳುವಂತಹ ಸ್ಥಿತಿ ಇರುವ ಈ ಕಾಲದಲ್ಲಿ ಕೇಂದ್ರ ಸರ್ಕಾರವೇ ಎಲ್ಲ ರಾಜ್ಯಗಳಲ್ಲೂ ಆಯಾ ರಾಜ್ಯಗಳ ಖಾಸಗಿ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ನಿರ್ಧಿಷ್ಟಉದ್ಯೋಗ ಮೀಸಲಾತಿ ನೀಡಬೇಕೆಂಬ ರಾಷ್ಟ್ರೀಯ ನೀತಿ ರೂಪಿಸಬೇಕು. ಆಗಷ್ಟೇ ಸಮಸ್ಯೆಗೆ ಅಂತಿಮ ಪರಿಹಾರ ಸಿಗುತ್ತದೆ.

- ಡಾ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

ಬದ್ಧತೆ ಪ್ರಮಾಣಿಕತೆ ತೋರಲಿ

ರಾಜ್ಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಿಗಬೇಕೆಂಬ ಬಗ್ಗೆ ‘ಕನ್ನಡಪ್ರಭ’ ಸಮಗ್ರ ಚರ್ಚೆಯನ್ನು ಜನರ ಮುಂದಿಟ್ಟಿದ್ದು ಬಹಳ ಒಳ್ಳೆಯ ಕಾರ್ಯ. ತನ್ಮೂಲಕ ಕನ್ನಡಪ್ರಭ ಜನರಲ್ಲಿ ಹೊಸ ಪ್ರಜ್ಞೆ ಮೂಡಿಸುವ, ಎಚ್ಚರಗೊಳಿಸುವ ಕೆಲಸ ಮಾಡಿರುವುದಕ್ಕೆ ಸಮಗ್ರ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಉದ್ಯೋಗ ಮೀಸಲಾತಿ ಸಿಗುವವರೆಗೂ ನಿರಂತರ ಹೋರಾಟ, ಇಂತಹ ಅಭಿಯಾನ ನಡೆಯಬೇಕು.

ಸರೋಜಿನಿ ಮಹಿಷಿ ವರದಿಯನ್ನು ಎಲ್ಲ ಸರ್ಕಾರಗಳೂ ಮೂಲೆಗುಂಪು ಮಾಡಿಕೊಂಡು ಬಂದಿವೆ. ಅಧಿಕಾರದಿಂದ ಇಳಿದ ಮೇಲೆ ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದು ಮಾತನಾಡುತ್ತಿದ್ದಾರೆ. ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಕೂಡಲೇ ಹಿಂದೂಗಳ ಮೇಲಿನ ಕೇಸುಗಳನ್ನು ವಾಪಸ್‌ ಪಡೆಯುವ, ಟಿಪ್ಪು ಸುಲ್ತಾನ್‌ ಜಯಂತಿ ರದ್ದುಪಡಿಸುವ ಬದಲು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಘೋಷಿಸಿದ್ದರೆ ಖುಷಿ ಪಡಬಹುದಿತ್ತು. ಈಗಲಾದರೂ ಅಂತಹ ಬದ್ಧತೆ, ಪ್ರಮಾಣಿಕತೆ ತೋರಲಿ ಎಂದು ಆಗ್ರಹಿಸುತ್ತೇನೆ.

- ವಾಟಾಳ್‌ ನಾಗರಾಜ್‌, ಕನ್ನಡ ಒಕ್ಕೂಟದ ಅಧ್ಯಕ್ಷ

ಉದ್ಯೋಗ ಮೀಸಲಿಗೆ ಸುಗ್ರೀವಾಜ್ಞೆ ತರಲಿ

ಕನ್ನಡಿಗರ ಬದುಕಾದ ಉದ್ಯೋಗದ ವಿಚಾರವಾಗಿ ‘ಕನ್ನಡಪ್ರಭ’ ಪ್ರತಿದಿನ ಜಾಗೃತಿ ಗೊಳಿಸುವ, ಕನ್ನಡದ ಮನಸ್ಸುಗಳನ್ನು ಎಚ್ಚರಗೊಳಿಸುವ, ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಅಮೂಲ್ಯವಾದ ಕೆಲಸ ಮಾಡುತ್ತಿರುವುದಕ್ಕೆ ವಿಶೇಷವಾಗಿ ಅಭಿನಂದಿಸುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಕನ್ನಡಿಗರ ನಾಡಿಮಿಡಿತ ಅರ್ಥ ಮಾಡಿಕೊಂಡು, ಎಚ್ಚೆತ್ತು ಕೆಲಸ ಮಾಡಿದರೆ ಎಲ್ಲ ಕಾಲಕ್ಕೂ ಬೆಂಬಲ ಸಿಗುತ್ತದೆ. ದೀರ್ಘ ಕಾಲದ ರಾಜಕಾರಣ ಮಾಡುವ ಕಳಕಳಿ ಇದ್ದರೆ ಕಾವೇರಿ ವಿಚಾರದಲ್ಲಿ ಬಂಗಾರಪ್ಪ ಅವರು ಸುಗ್ರೀವಾಜ್ಞೆ ಹೊರಡಿಸಿದಂತೆ ಉದ್ಯೋಗ ಮೀಸಲಾತಿ ಕಲ್ಪಿಸಲು ಯಡಿಯುರಪ್ಪ ಅವರು ಸುಗ್ರೀವಾಜ್ಞೆಯ ದಿಟ್ಟತನದ ನಿರ್ಧಾರ ತಗೆದುಕೊಳ್ಳಬೇಕು. ಭಾಷಾ ಅಲ್ಪಸಂಖ್ಯಾತರ ಓಲೈಕೆಗೆ ಕನ್ನಡಿಗರನ್ನು ನಿರ್ಲಕ್ಷಿಸಿದರೆ ಸರ್ಕಾರ ಹೆಚ್ಚು ದಿನ ಉಳಿಯುವುದು ಕಷ್ಟವಿದೆ.

- ಟಿ.ಎ.ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷ

ಸರ್ಕಾರ ಈ ಬೇಡಿಕೆಗಳನ್ನು ಒಪ್ಪಿಕೊಳ್ಳಲಿ

ರಾಜ್ಯದ ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಸ್ಥಳೀಯ ಮೀಸಲಾತಿಗೆ ಹಕ್ಕೊತ್ತಾಯ ಮಾಡಿ ‘ಕನ್ನಡಪ್ರಭ’ ಸರಣಿ ಲೇಖನಗಳನ್ನು ಪ್ರಕಟಿಸಿದ್ದು ಒಳ್ಳೆಯ ಕಾರ್ಯ. ಸಮಗ್ರ ಕನ್ನಡಿಗರ ಪರವಾದ ಈ ಹಕ್ಕೊತ್ತಾಯವನ್ನು ಸರ್ಕಾರ ಮಾನ್ಯ ಮಾಡಬೇಕು. ಸರೋಜಿನಿ ಮಹಿಷಿ ವರದಿ ಜಾರಿ ಮೂಲಕ ಹಕ್ಕೊತ್ತಾಯಕ್ಕೆ ಮಾನ್ಯತೆ ನೀಡಬೇಕು.

- ಡಾ.ಚಂದ್ರಶೇಖರ ಕಂಬಾರ, ಜ್ಞಾನಪೀಠ ಪುರಸ್ಕೃತ ಸಾಹಿತಿ

ಸರ್ಕಾರ ಕರ್ತವ್ಯ ಮೆರೆಯಲಿ

ಕನ್ನಡಿಗರ ಉದ್ಯೋಗದ ಹಕ್ಕಿನ ಮೀಸಲಾತಿ ಬಗ್ಗೆ ‘ಕನ್ನಡಪ್ರಭ’ ನಾಡಿನ ಸಾಹಿತಿಗಳು, ಹೋರಾಟಗಾರರು ಹಾಗೂ ಇನ್ನಿತರ ಧುರಣೀರ ಅಭಿಪ್ರಾಯವನ್ನು ಕಳೆದ 15 ದಿನಗಳಿಂದ ಪ್ರಕಟಿಸುತ್ತಾ ಬಂದಿದ್ದು ಅತ್ಯುತ್ತಮವಾದ ಕನ್ನಡದ ಸೇವೆ ಎಂದೇ ನಾನು ಭಾವಿಸುತ್ತೇನೆ.

ಸರ್ಕಾರ ಕಡ್ಡಾಯವಾಗಿ ಕನ್ನಡಿಗರಿಗೆ ಉದ್ಯೋಗದಲ್ಲಿ ಸ್ಥಳೀಯ ಮೀಸಲಾತಿ ಜಾರಿಗೆ ತರಲು ಸಂವಿಧಾನಾತ್ಮಕವಾಗಿ ತೀವ್ರ ಕ್ರಮ ಕೈಗೊಳ್ಳಬೇಕೆಂದು ಹಕ್ಕೊತ್ತಾಯ ಮಾಡುತ್ತೇನೆ. ಆ ಮೂಲಕ ಸರ್ಕಾರ ತನ್ನ ಕರ್ತವ್ಯ ಮೆರೆಯಬೇಕು.

- ಡಾ.ಮನು ವಿ. ಬಳಿಗಾರ್‌, ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು

ಸರ್ಕಾರದಿಂದ ಪೂರಕ ಸ್ಪಂದನೆ

ಕನ್ನಡಪ್ರಭ ಸರಣಿ ವರದಿಗಳಿಗೆ ಸ್ಪಂದಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ಸಹ ಸರ್ಕಾರದ ಪರವಾಗಿ ಕನ್ನಡಿಗರಿಗೆ ನಾಡಿನಲ್ಲಿ ಉದ್ಯೋಗಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲೂ ವಿಷಯವನ್ನು ಪ್ರಸ್ತಾಪಿಸಿ ಈ ನಿಟ್ಟಿನಲ್ಲಿ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ.

ಆದರೆ, ಕನ್ನಡಿಗರ ಹೋರಾಟ ಹಾಗೂ ಅದಕ್ಕೆ ಧ್ವನಿಯಾಗಿ ನಿಂತಿರುವ ಕನ್ನಡಪ್ರಭ ಹಕ್ಕೊತ್ತಾಯಕ್ಕೆ ಸ್ಪಂದಿಸಿ ಪ್ರತಿಕ್ರಿಯಿಸಿದ್ದಾರೆಯೇ ಹೊರತು ಗಟ್ಟಿನಿರ್ಧಾರ ತೆಗೆದುಕೊಳ್ಳಲು ಮುಂದಾಗಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಪ್ರತಿ ಸರ್ಕಾರಗಳೂ ಭರವಸೆಗಳನ್ನು ನೀಡಿವೆಯೇ ಹೊರತು ಅದನ್ನು ಕಾರ್ಯರೂಪಕ್ಕೆ ತಂದಿಲ್ಲ. ಹೀಗಾಗಿ ಕನ್ನಡಿಗರು ವಿಶ್ರಾಂತಿ ಪಡೆಯುವ ಸಮಯ ಇನ್ನೂ ಬಂದಿಲ್ಲ.

ಕನ್ನಡಿಗರಿಗೆ ಕೆಲಸ ಕೊಡದಿರಲು ಕಂಪನಿಗಳ ತಂತ್ರ!

ಸಂಘಟಿತ ಹೋರಾಟ ಅಗತ್ಯ

ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆ ಸಂರಕ್ಷಿಸಿಕೊಳ್ಳುವೆಡೆಗೆ ಈ ಕೂಗು ತಿರುಗಬೇಕು. ಹಿಂದಿ ಹೇರಿಕೆ, ಉದ್ಯೋಗದ ಅವಕಾಶ ಅರ್ಥಪೂರ್ಣ ಬೇಡಿಕೆಗಳು. ಅಂತಿಮವಾಗಿ ರಾಜ್ಯಗಳಿಗೆ ಇನ್ನಷ್ಟುಅಧಿಕಾರ ಬೇಕು. ಸ್ವಾಯತ್ತತೆಯ ಹೋರಾಟವೂ ಬಹಳ ಮುಖ್ಯ. ಉದ್ಯೋಗಕ್ಕೆ ಸಂಬಂಧಿಸಿದ ಹೋರಾಟ ಮತ್ತಷ್ಟುಸಂಘಟಿತ ಆಗಬೇಕು. ಈ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಾರರು ಮಾತ್ರವಲ್ಲದೆ ಪ್ರತಿಯೊಬ್ಬ ಕನ್ನಡಿಗರೂ ಮುಂದೆ ಬರಬೇಕು ಎಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಕರೆ ನೀಡಿದ್ದಾರೆ.

ಜಾಲತಾಣದಲ್ಲಿ ವ್ಯಾಪಕ ವೈರಲ್‌

ಕನ್ನಡಪ್ರಭ ಆ.8ರಿಂದ ಆ.22ರವರೆಗೆ ಕನ್ನಡಿಗರ ಪರ 15 ದಿನ ವಿಶೇಷ ವರದಿಗಳನ್ನು ಪ್ರಕಟಿಸುವ ಮೂಲಕ ಹಕ್ಕೊತ್ತಾಯ ಮಂಡಿಸಿದೆ. 15 ದಿನವೂ ಕನ್ನಡಿಗರು ವಿವಿಧ ರಂಗಗಳಲ್ಲಿ ಅನುಭವಿಸುತ್ತಿರುವ ಸಮಸ್ಯೆ, ಶೋಷಣೆಯನ್ನು ಕನ್ನಡಿಗರು ಹಾಗೂ ಕನ್ನಡಿಗರ ನೋವಿಗೆ ಮುಲಾಮು ಹಚ್ಚಬೇಕಿರುವ ಸರ್ಕಾರಕ್ಕೆ ಕಣ್ಣಿಗೆ ಕಾಣಿಸುವಂತೆ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ಈ ಪ್ರಯತ್ನಕ್ಕೆ ರಾಜ್ಯಾದ್ಯಂತ ನೆಟ್ಟಿಗರು, ವಿದ್ಯಾರ್ಥಿಗಳು, ಕನ್ನಡಪರ ಹೋರಾಟಗಾರರು, ಸಾಹಿತಿಗಳು, ಚಿಂತಕರು, ಸಂಶೋಧಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರತಿಯೊಂದು ವರದಿಯನ್ನೂ ಸಾವಿರಾರು ಮಂದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪೂರಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ‘ಕನ್ನಡಪ್ರಭ’ ಹಕ್ಕೊತ್ತಾಯ ಅಭಿಯಾನವನ್ನು ವ್ಯಾಪಕವಾಗಿ ಬೆಂಬಲಿಸಿದ್ದಾರೆ.

ಕನ್ನಡಪ್ರಭ ಮಂಡಿಸಿದ ಹಕ್ಕೊತ್ತಾಯಗಳೇನು?

- ಸ್ಥಳೀಯ ಉದ್ಯೋಗಗಳು ಅನ್ಯಭಾಷಿಕರ ಪಾಲಾಗುತ್ತಿರುವುದರ ವಿರುದ್ಧ ಹಾಗೂ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಮೀಸಲಾಗಬೇಕು ಎಂಬ ಹಕ್ಕೊತ್ತಾಯದೊಂದಿಗೆ ಕನ್ನಡಪ್ರಭ ವಿಶೇಷ ವರದಿಗಳ ಸರಣಿ ಪ್ರಾರಂಭವಾಯಿತು.

- ಆಂಧ್ರಪ್ರದೇಶದಲ್ಲಿ ಕಳೆದ ತಿಂಗಳು ಖಾಸಗಿ ವಲಯದ ಎಲ್ಲಾ ವರ್ಗಗಳ ಉದ್ಯೋಗದಲ್ಲೂ ಶೇ.75 ರಷ್ಟುಸ್ಥಳೀಯರಿಗೆ ಮೀಸಲಾತಿ ಕಲ್ಪಿಸಿ ಕಾಯಿದೆ ಅಂಗೀಕರಿಸಿದೆ. ಇದೇ ರೀತಿ ರಾಜ್ಯದಲ್ಲೂ ಡಾ. ಸರೋಜಿನಿ ಮಹಿಷಿ ವರದಿ ಆಧರಿಸಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸಬೇಕು.

- ಪ್ರಸ್ತುತ ರಾಜ್ಯ ಸರ್ಕಾರ ಫೆಬ್ರುವರಿ ತಿಂಗಳಲ್ಲಿ ತೆಗೆದುಕೊಂಡಿರುವ ಸಂಪುಟ ನಿರ್ಧಾರದಂತೆ ಸಿ ಹಾಗೂ ಡಿ ಗ್ರೂಪ್‌ ಖಾಸಗಿ ಉದ್ಯೋಗಗಳಲ್ಲೂ ಸ್ಥಳೀಯರಿಗೆ ಉದ್ಯೋಗ ಸಿಗುವ ಖಾತ್ರಿ ಇಲ್ಲ. ಸಂಪುಟ ನಿರ್ಧಾರದಲ್ಲಿ ಮೀಸಲಾತಿ ಬದಲಿಗೆ ಆದ್ಯತೆ ಪದ ಬಳಕೆ ಮಾಡಲಾಗಿದೆ. ಇದನ್ನು ಬದಲಿಸಿ ಸೂಕ್ತ ಕಾಯಿದೆ ರೂಪಿಸಿ ಆಂಧ್ರಪ್ರದೇಶದ ಮಾದರಿಯಲ್ಲೇ ಮೀಸಲಾತಿ ಕಲ್ಪಿಸಬೇಕು. ಅಲ್ಲದೆ, ಅದನ್ನು ಎ ಹಾಗೂ ಬಿ ವರ್ಗಕ್ಕೂ ವಿಸ್ತರಿಸಬೇಕು.

- ಸರೋಜಿನಿ ಮಹಿಷಿ ವರದಿಯಲ್ಲಿ ಐಟಿ-ಬಿಟಿ, ಬಿಪಿಒ-ಕೆಪಿಒ, ಸ್ಟಾರ್ಟ್‌ ಕಂಪೆನಿಗಳನ್ನು ಸೇರಿಸಿಕೊಳ್ಳಬೇಕು ಎಂದು ಹಿಂದಿನ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ವರದಿ ನೀಡಿದ್ದರೂ ಅವುಗಳನ್ನು ಕೈಬಿಡಲಾಗಿದೆ. ಅಲ್ಲದೆ, ಕಾರ್ಮಿಕ ಇಲಾಖೆ ನೀತಿಯಿಂದಲೂ ಕೈಬಿಟ್ಟು ಕಂಪೆನಿಗಳ ಮೇಲೆ ಹಕ್ಕಿಲ್ಲದಂತೆ ಮಾಡಲಾಗಿದೆ. ಇದರಿಂದ ಕನ್ನಡಿಗರು ಉದ್ಯೋಗ ಗಿಟ್ಟಿಸಲು, ಕನ್ನಡಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಲು ಕಷ್ಟವಾಗುತ್ತಿದೆ ಎಂಬುದನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಲಾಗಿದೆ.

- ಕೇವಲ ಉದ್ಯೋಗ, ವ್ಯಾಪಾರ ಮಾತ್ರವಲ್ಲದೆ ಪ್ರತಿ ರಂಗ ಹಾಗೂ ಪ್ರತಿ ಹಂತದ ಉದ್ಯೋಗಗಳಲ್ಲೂ ಅನ್ಯ ರಾಜ್ಯದವರ ಪ್ರವೇಶ ಆಗಿದೆ. ಯಾವ ಕಂಪನಿಯಲ್ಲಿ ಎಷ್ಟುಮಂದಿ ಕನ್ನಡಿಗರಿಗೆ ಉದ್ಯೋಗ ನೀಡಿದ್ದಾರೆಂದು ಪರಿಶೀಲಿಸಲು ಸಹ ರಾಜ್ಯ ಸರ್ಕಾರಕ್ಕೆ ಹಕ್ಕಿಲ್ಲದಂತಾಗಿದೆ. ಈ ಪರಿಶೀಲನೆಗಾಗಿಯೇ ಇರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೂ ಕಾನೂನು ಬಲವಿಲ್ಲ. ಹೀಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಕ್ತ ಕಾನೂನು ಬಲ ತುಂಬಬೇಕು ಎಂದು ಕನ್ನಡಪ್ರಭ ಹಕ್ಕೊತ್ತಾಯ ಮಂಡಿಸಿದೆ.

- ರಾಜ್ಯದಲ್ಲಿ 15 ವರ್ಷ ನೆಲೆಸಿದವರನ್ನು ಸ್ಥಳೀಯ ಎಂದು ಪರಿಗಣಿಸಬೇಕು ಎಂಬ ನಿಯಮವನ್ನು ತಿದ್ದುಪಡಿ ಮಾಡಿ 10 ವರ್ಷ ವಾಸವಿದ್ದರೂ ಸ್ಥಳೀಯ ಎಂದು ಪರಿಗಣಿಸಲು ನಿಯಮಗಳಲ್ಲಿ ತಿದ್ದುಪಡಿ ತಂದು ಮೂರು ತಿಂಗಳ ಹಿಂದೆ ಆದೇಶ ಮಾಡಲಾಗಿದೆ. ಈ ವಿವಾದಾತ್ಮಕ ನಿರ್ಧಾರವನ್ನೂ ಹಿಂಪಡೆಯುವಂತೆ ಒತ್ತಾಯ ಮಾಡಲಾಗಿದೆ.

- ರಾಜ್ಯದ ವ್ಯಾಪಾರ ಕ್ಷೇತ್ರದಲ್ಲಿ ಉತ್ತರ ಭಾರತೀಯರು ಹೇಗೆ ಏಕಸ್ವಾಮ್ಯ ಸಾಧಿಸುತ್ತಿದ್ದಾರೆ. ಕನ್ನಡಿಗರು ವ್ಯಾಪಾರ, ಉದ್ದಿಮೆ ಸ್ಥಾಪಿಸಲು ಎಷ್ಟುಸಂಕಷ್ಟಎದುರಿಸುತ್ತಿದ್ದಾರೆ. ಒಟ್ಟಾರೆ ಉದ್ದಿಮೆಗಳೂ ಸಹ ಪರಭಾಷಿಕರ ಪಾಲು ಹೇಗಾಗುತ್ತಿವೆ. ಇದಕ್ಕೆ ಸರ್ಕಾರ ಏನು ಮಾಡಬೇಕೆಂಬ ಕುರಿತು ಸಮಗ್ರವಾಗಿ ವರದಿಯನ್ನು ಪ್ರಕಟಿಸಿದೆ.