Asianet Suvarna News Asianet Suvarna News

ರಾಜ್ಯದ ಎಲ್ಲ ಉದ್ಯೋಗಕ್ಕೂ ಪರಭಾಷಿಕರ ಲಗ್ಗೆ

ಕರ್ನಾಟಕದಲ್ಲಿ ಸಣ್ಣಪುಟ್ಟ ಪಟ್ಟಣಗಳಲ್ಲೂ ಅನ್ಯ ರಾಜ್ಯದವರ ಪಾರಮ್ಯ | ಆಟೋ ಚಾಲಕ, ಕೃಷಿ ಕಾರ್ಮಿಕ ಹುದ್ದೆಗಷ್ಟೇ ಕನ್ನಡಿಗರು ಈಗ ಸೀಮಿತ!  ಜನಸಂಖ್ಯೆ ನಿಯಂತ್ರಿಸಿ ಉದ್ಯೋಗ ಸೃಷ್ಟಿಸಿದ ಕರ್ನಾಟಕ | ಆರ್ಥಿಕ ಶಿಸ್ತಿರುವ ಕರುನಾಡಿನ ಅವಕಾಶಗಳ ಮೇಲೆ ಪರಭಾಷಿಕರ ದಾಳಿ

Non Kannadigas Snatching Jobs From Locals Across The State
Author
Bengaluru, First Published Aug 20, 2019, 4:18 PM IST

ಬೆಂಗಳೂರು (ಆ. 20):  ಜನಸಂಖ್ಯೆ ನಿಯಂತ್ರಣ, ಶಿಕ್ಷಣ, ಉದ್ಯೋಗ ಸೃಷ್ಟಿಹಾಗೂ ಆರ್ಥಿಕತೆಯಲ್ಲಿ ಇಡೀ ದೇಶಕ್ಕೆ ಕರ್ನಾಟಕ ಮಾದರಿ ಸ್ಥಾನದಲ್ಲಿದೆ. ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ದೇಶದ ಪ್ರಥಮ ಮೂರು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಆದರೆ, ರಾಜ್ಯದ ಎಲ್ಲಾ ಕ್ಷೇತ್ರದ ಉದ್ಯೋಗಗಳಲ್ಲೂ ಪರಭಾಷಿಕರ ಹಾವಳಿಯಿಂದ ಕನ್ನಡಿಗರು ನಲುಗುವಂತಾಗಿದ್ದು, ಸ್ಥಳೀಯರು ಕೃಷಿ ಕಾರ್ಮಿಕ ಹಾಗೂ ಆಟೋ ಚಾಲಕ ವೃತ್ತಿಗಷ್ಟೇ ಸೀಮಿತವಾಗಿದ್ದಾರೆ.

ಹೌದು, ಕರ್ನಾಟಕದಲ್ಲಿ ದಶಕಗಳ ಶ್ರಮದ ಫಲವಾಗಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳು ಪರ ಭಾಷಿಕರ ಪಾಲಾಗುತ್ತಿವೆ. ರಾಜ್ಯದಲ್ಲಿ ಪರಭಾಷಿಕರ ಲಾಬಿ ದಿನದಿಂದ ದಿನಕ್ಕೆ ಪ್ರಬಲವಾಗಿ ಬೇರು ಬಿಡುತ್ತಿದೆ. ಇತ್ತೀಚೆಗೆ ಉತ್ತರ ಭಾರತದ ಹಿಂದಿವಾಲಾಗಳ ಕಪಿಮುಷ್ಟಿಯಿಂದ ಕನ್ನಡಿಗರು ಪಾರಾಗುವುದೇ ಕಷ್ಟಎಂಬಂತಹ ಪರಿಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಕನ್ನಡಿಗರಿಗಿಂತ ಕನ್ನಡೇತರರು ಉದ್ಯೋಗ ಗಿಟ್ಟಿಸುವುದು ಬಹಳ ಸುಲಭವಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಿಗರ ಉದ್ಯೋಗಗಳನ್ನು ಕಸಿದುಕೊಂಡಿದ್ದಾರೆ.

ಸ್ಥಳೀಯರಿಗಿಲ್ಲ ನೌಕರಿ; ಕ್ರಮ ಕೈಗೊಳ್ಳುವ ಅಧಿಕಾರ ಕನ್ನಡ ಪ್ರಾಧಿಕಾರಕ್ಕಿಲ್ಲ!

ಜನಸಂಖ್ಯಾ ನಿಯಂತ್ರಣದಲ್ಲಿ ರಾಜ್ಯವು ದೇಶಕ್ಕೆ ಮಾದರಿ ಸ್ಥಾನದಲ್ಲಿದೆ. ದೇಶದ ಜನಸಂಖ್ಯೆ ಉತ್ಪಾದನೆ (ಟಿಎಫ್‌ಆರ್‌) ದರ 2.1 ರಷ್ಟಿದ್ದರೆ, ರಾಜ್ಯದ ಟಿಎಫ್‌ಆರ್‌ ದರ 1.8 ರಷ್ಟುಮಾತ್ರ ಇದೆ. ಈ ಮೂಲಕ ರಾಜ್ಯವು ಜನಸಂಖ್ಯೆ ಉತ್ಪಾದನೆ ಆಧಾರದ ಮೇಲೆ ಉದ್ಯೋಗ ಸೃಷ್ಟಿಮಾಡಿ, ಆರ್ಥಿಕ ಶಿಸ್ತು, ಎಸ್‌ಡಿಜಿಪಿಯಲ್ಲಿ ಪ್ರಗತಿ ಕಾಯ್ದುಕೊಂಡು ಬಹುತೇಕ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಶಕ್ತಿ ಪಡೆದುಕೊಂಡಿದೆ.

ಆದರೆ, ಜನಸಂಖ್ಯೆ ನಿಯಂತ್ರಣದಲ್ಲಿ ಸೋತಿರುವ, ಸಾಮಾಜಿಕ ಜಾಗೃತಿ ಇಲ್ಲದೆ ಬೇಕಾಬಿಟ್ಟಿಜನಸಂಖ್ಯೆ ವೃದ್ಧಿಸಿಕೊಳ್ಳುತ್ತಿರುವ ಉತ್ತರ ಭಾರತೀಯರು ಉದ್ಯೋಗ ಸೃಷ್ಟಿಸಿಕೊಳ್ಳಲಾಗದೆ ಎಲ್ಲದರಲ್ಲೂ ಶಿಸ್ತು ಕಾಯ್ದುಕೊಂಡಿರುವ ಕರ್ನಾಟಕದಂತಹ ರಾಜ್ಯದ ಮೇಲೆ ಎರಗಿದ್ದಾರೆ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.

ಕನ್ನಡಿಗರಿಗೆ ಸಿಗಬೇಕಿದ್ದ ಲಕ್ಷಾಂತರ ಉದ್ಯೋಗ ಹೊರಗಿನವರ ಪಾಲು

ರಾಜ್ಯದಲ್ಲಿ ಹೋಟೆಲ್‌, ಬೇಕರಿ ಕೇರಳದವರಿಗೆ, ವ್ಯಾಪಾರಗಳು ಉತ್ತರ ಕರ್ನಾಟಕದ ಮಾರ್ವಾಡಿಗಳಿಗೆ, ವ್ಯವಹಾರಗಳನ್ನು ರಾಜಸ್ಥಾನದವರಿಗೆ ಗುತ್ತಿಗೆಗೆ ಕೊಟ್ಟಂತಾಗಿದೆ. ಎರಡು ದಶಕದ ಹಿಂದೆ ಕೇವಲ ಎ ಹಾಗೂ ಬಿ ದರ್ಜೆ ಖಾಸಗಿ ಉದ್ಯೋಗಗಳಿಗಾಗಿ ಮಾತ್ರ ಹಿಂದಿ ಭಾಷಿಕರು ವಲಸೆ ಬರುತ್ತಿದ್ದರು. ಇದೀಗ ಎಲ್ಲಾ ವರ್ಗದ ಉದ್ಯೋಗಗಳನ್ನೂ ಪರ ಭಾಷಿಕರು ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಐಟಿ-ಬಿಟಿ ಕಂಪನಿಗಳ ಶೇ.60-80 ರಷ್ಟುಉದ್ಯೋಗಗಳು ಅನ್ಯ ಭಾಷಿಕರ ಪಾಲಾಗಿವೆ. ಐಟಿ-ಕಂಪನಿಗಳಲ್ಲಿ ಎಷ್ಟುಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ ಎಂದು ಪರಿಶೀಲಿಸಲೂ ರಾಜ್ಯ ಕಾರ್ಮಿಕ ಇಲಾಖೆ ಕಾಯಿದೆಯಲ್ಲಿ ಅವಕಾಶವಿಲ್ಲ. ಹೀಗಾಗಿ ಬಹುತೇಕ ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ. ಐಟಿ-ಬಿಟಿ ಕಂಪನಿಗಳಲ್ಲಿ ಪರ ಭಾಷಿಕರು ಬೇರುಬಿಟ್ಟಿರುವುದರಿಂದ ಅಲ್ಲಿನ ಸಿ ಹಾಗೂ ಡಿ ದರ್ಜೆ ಉದ್ಯೋಗಗಳೂ ಕನ್ನಡಿಗರಿಗೆ ದೊರೆಯುತ್ತಿಲ್ಲ.

ಡೆಲಿವರಿ ಬಾಯ್‌ ಹುದ್ದೆಗೂ ಕುತ್ತು:

ಐಟಿ-ಬಿಟಿ, ಕೈಗಾರಿಕೆ, ಜವಳಿ ಕಾರ್ಖಾನೆ, ಸೇವಾ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಒಂದು ದಶಕದಿಂದ ಪರ ಭಾಷಿಕರು ಆವರಿಸಿಕೊಳ್ಳುತ್ತಿದ್ದಾರೆ. ಪರಿಣಾಮ ನಗರ ಭಾಗದಲ್ಲಿ ಕನ್ನಡಿಗರಿಗೆ ಆಟೋ, ಓಲಾ-ಊಬರ್‌ ಕ್ಯಾಬ್‌ ಚಾಲಕ, ಡೆಲಿವರಿ ಬಾಯ್‌, ಕೊರಿಯರ್‌, ಮನೆಕೆಲಸದಂತಹ ಉದ್ಯೋಗಗಳು ಮಾತ್ರ ಸೀಮಿತ ಎಂಬಂತಾಗಿತ್ತು.  ಇದೀಗ ಆಟೋ ಹೊರತುಪಡಿಸಿ ಓಲಾ-ಊಬರ್‌, ಡೆಲಿವರಿ ಬಾಯ್‌ ಉದ್ಯೋಗಗಳಿಗೂ ಪರ ಭಾಷಿಕ ಯುವಕರು ಕೈ ಹಾಕಿದ್ದಾರೆ ಎಂದು ಬನವಾಸಿ ಬಳಗದ ಸಂಚಾಲಕ ಅರುಣ್‌ ಜಾವಗಲ್‌ ಹೇಳುತ್ತಾರೆ.

ಉಳಿದಂತೆ ಕಟ್ಟಡ ನಿರ್ಮಾಣ ಕಾಮಗಾರಿ, ಕಾರ್ಪೆಂಟರ್‌, ಪೇಂಟರ್‌, ಹೌಸ್‌ಕೀಪಿಂಗ್‌, ಕ್ಷೌರಿಕ, ಕಮ್ಮಾರ, ಕಾರ್ಯಕ್ರಮ ಆಯೋಜನೆ ಕೆಲಸ, ಎಲೆಕ್ಟ್ರಿಕಲ್‌ ಕೆಲಸ, ಅಕ್ಕಸಾಲಿಗ ವೃತ್ತಿ ಸೇರಿದಂತೆ ಬಹುತೇಕ ಕಸುಬು ಹಾಗೂ ಕುಲ ಕಸುಬುಗಳಿಗೆ ಉತ್ತರ ಭಾರತೀಯರು ದಾಂಗುಡಿ ಇಟ್ಟಿದ್ದಾರೆ. ಉತ್ತರ ಕರ್ನಾಟಕದ ವ್ಯಾಪಾರಿಗಳು ರಾಜ್ಯದ ಪ್ರತಿ ಸಣ್ಣ ಪಟ್ಟಣಕ್ಕೂ ಕಾಲಿಟ್ಟಿದ್ದಾರೆ.

ಬಟ್ಟೆ ಅಂಗಡಿ, ಮೊಬೈಲ್‌ ಅಂಗಡಿ, ಪಡಿತರ ಅಂಗಡಿ ಸೇರಿದಂತೆ ಪ್ರತಿ ಅಂಗಡಿಗಳಲ್ಲೂ ಅಧಿಪತ್ಯ ಸಾಧಿಸಿದ್ದಾರೆ. ಈ ಮೂಲಕ ಸ್ಥಳೀಯ ವ್ಯಾಪಾರಿಗಳ ಬೆನ್ನು ಮೂಳೆ ಮುರಿದಿದ್ದಾರೆ. ಖಾಸಗಿ ಲೇವಾದೇವಿದಾರರು (ಪಾನ್‌ ಬ್ರೋಕ​ರ್‍ಸ್) ಹಾಗೂ ಗಿರವಿದಾರರು ಕನ್ನಡಿಗರನ್ನು ಆರ್ಥಿಕವಾಗಿ ಶೋಷಣೆ ಮಾಡುತ್ತಿದ್ದಾರೆ ಎಂದು ಕನ್ನಡ ಪರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರಿಗೆ ಕೆಲಸ ಕೊಡದಿರಲು ಕಂಪನಿಗಳ ತಂತ್ರ!

ಜತೆಗೆ ಭಾಷೆಯ ಕೊಲೆ:

ಅಚ್ಚರಿ ಎಂದರೆ, ಕನ್ನಡಿಗರು ಮಾತ್ರ ಕೆಲಸ ಮಾಡಬಲ್ಲ ಕನ್ನಡ ಭಾಷಾಂತರ ಕ್ಷೇತ್ರಗಳಿಗೂ ಹಿಂದಿವಾಲಾಗಳು ಕಾಲಿಟ್ಟಿದ್ದಾರೆ. ಕನ್ನಡ ಬಾರದಿದ್ದರೂ ಇಂಗ್ಲೀಷ್‌ ಭಾಷೆಯಲ್ಲಿನ ಬರಹಗಳನ್ನು ಗೂಗಲ್‌ ಟ್ರಾನ್ಸ್‌ಲೇಟ್‌ನಂತಹ ಆನ್‌ಲೈನ್‌ ಆಯ್ಕೆಗಳನ್ನು ಬಳಸಿ ಭಾಷಾಂತರ ಉದ್ಯೋಗಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ.

ಈ ಮೂಲಕ ಕನ್ನಡಿಗರ ಉದ್ಯೋಗ ಕಸಿಯುವುದು ಮಾತ್ರವಲ್ಲ ಕನ್ನಡ ಭಾಷೆಯನ್ನೂ ಕೊಲೆ ಮಾಡುತ್ತಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಬಹುತೇಕ ಕನ್ನಡಿಗರೇ ತೊಡಗಿಸಿಕೊಂಡಿರುವ ಉದ್ಯೋಗಗಳು ಎಂದರೆ ಕೃಷಿ ಕೂಲಿ ಹಾಗೂ ಆಟೋ ಚಾಲನೆ ಮಾತ್ರ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಉತ್ತರ ಭಾರತದಲ್ಲಿ ಜನಸಂಖ್ಯಾ ಸ್ಫೋಟ!

ವಿಶ್ವಸಂಸ್ಥೆಯ ಅಂದಾಜು ಪ್ರಕಾರ, 2024ರ ವೇಳೆಗೆ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ. ಕೇಂದ್ರ ಸರ್ಕಾರದ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಇಲಾಖೆ ಮತ್ತು ಭಾರತದ ನೀತಿ ಆಯೋಗದ ಪ್ರಕಾರ ಅತಿ ಹೆಚ್ಚು ಜನಸಂಖ್ಯೆ ಉತ್ಪಾದನೆ ಮಾಡುತ್ತಿರುವ ಏಳು ರಾಜ್ಯಗಳೂ ಉತ್ತರ ಭಾರತಕ್ಕೆ ಸೇರಿದವು. ವಿಶ್ವದಲ್ಲೇ ಮೊದಲ ಬಾರಿಗೆ 1952ರಲ್ಲೇ ದೇಶದಲ್ಲಿ ರಾಷ್ಟ್ರೀಯ ಕುಟುಂಬ ನಿಯಂತ್ರಣ ಕಾರ್ಯಕ್ರಮ ಜಾರಿಗೆ ಬಂದಿದೆ.

ಆದರೆ, ಕುಟುಂಬ ನಿಯಂತ್ರಣ ಕಾರ್ಯಕ್ರಮಗಳನ್ನು ಕರ್ನಾಟಕದಂತಹ ದಕ್ಷಿಣ ಭಾರತದ ರಾಜ್ಯಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಿವೆಯೇ ಹೊರತು ಉತ್ತರ ಭಾರತದ ರಾಜ್ಯಗಳು ಮಾಡಿಲ್ಲ. ದೇಶದ ಸರಾಸರಿ ಟಿಎಫ್‌ಆರ್‌ (ಟೋಟಲ್‌ ಫರ್ಟಲಿಟಿ ರೇಟ್‌) 2.1 ರಷ್ಟಿದ್ದರೆ, ಕರ್ನಾಟಕರ ಟಿಎಫ್‌ಆರ್‌ ಕೇವಲ 1.8 ರಷ್ಟಿದೆ. ರಾಜ್ಯದಲ್ಲಿರುವ ಶಿಕ್ಷಣ, ಜಾಗೃತಿ ಹಾಗೂ ಸರ್ಕಾರದ ಕಾರ್ಯಕ್ರಮಗಳಿಂದಾಗಿ ಕನ್ನಡಿಗರು ಜನಸಂಖ್ಯೆ ನಿಯಂತ್ರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಆದರೆ, ಉತ್ತರ ಭಾರತದಲ್ಲಿ ಬರೋಬ್ಬರಿ 22 ಕೋಟಿ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ಟಿಎಫ್‌ಆರ್‌ 3.1 ರಷ್ಟಿದೆ. ಅಂದರೆ, 15 ವರ್ಷದಿಂದ 49 ವರ್ಷದ ವಯಸ್ಸಿನ ಪ್ರತಿ ಮಹಿಳೆಗೆ ಸರಾಸರಿ 3.1 ರಷ್ಟುಮಕ್ಕಳಿದ್ದಾರೆ. 2001ರಲ್ಲಿ ಉತ್ತರ ಪ್ರದೇಶದಲ್ಲಿ ಈ ಪ್ರಮಾಣ 4.7 ರಷ್ಟಿತ್ತು. ಉಳಿದಂತೆ ಬಿಹಾರ 3.3, ಮಧ್ಯಪ್ರದೇಶ 2.8, ರಾಜಸ್ಥಾನ 2.7 ರಷ್ಟುಟಿಎಫ್‌ಆರ್‌ ದರ ಹೊಂದಿದೆ.

ವಲಸಿಗರೇ ಬಹುಸಂಖ್ಯಾತರಾಗ್ತಾರೆ ಎಚ್ಚರ:

ರಾಜ್ಯಕ್ಕೆ ಉತ್ತರ ಭಾರತದಿಂದ ವಲಸೆ ಬರುತ್ತಿರುವ ಬಹುತೇಕರು ಈ ಮೇಲಿನ ರಾಜ್ಯಗಳಿಂದಲೇ ಬರುತ್ತಿರುವವರು. ಉತ್ತರ ಪ್ರದೇಶದಲ್ಲಿ 22 ಕೋಟಿ ಜನಸಂಖ್ಯೆ ಇದ್ದರೂ, ಉದ್ಯೋಗ ಸೃಷ್ಟಿಯಲ್ಲಿ ಘೋರ ವೈಫಲ್ಯ ಹೊಂದಿದೆ. ಹೀಗಾಗಿ ಇವರೆಲ್ಲರೂ ಕರ್ನಾಟಕಕ್ಕೆ ವಲಸೆ ಬರುತ್ತಿದ್ದಾರೆ.

ಇಲ್ಲೂ ಇದೇ ದರದಲ್ಲಿ ಜನಸಂಖ್ಯೆ ಉತ್ಪಾದನೆಯಲ್ಲಿ ತೊಡಗಿರುವುದರಿಂದ ವರ್ಷದಿಂದ ವರ್ಷಕ್ಕೆ ಉತ್ತರ ಭಾರತೀಯರ ಜನಸಂಖ್ಯೆ ಹೆಚ್ಚಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸ್ಥಳೀಯರಿಗಿಂತ ವಲಸಿಗರ ಜನಸಂಖ್ಯೆಯೇ ಹೆಚ್ಚಾಗಲಿದೆ. ಇದು ನೀತಿ ಆಯೋಗದ ಅಂಕಿ-ಅಂಶಗಳಲ್ಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ ಎನ್ನುತ್ತಾರೆ ತಜ್ಞರು.

ರಾಜ್ಯದಲ್ಲಿ ಆರ್ಥಿಕ ಉತ್ಪಾದನೆ ಉತ್ತಮವಾಗಿದೆ. ಹೀಗಾಗಿ ರಾಜ್ಯವು ಭಾರಿ ಪ್ರಮಾಣದಲ್ಲಿ ಕೇಂದ್ರ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತದೆ. ಬಹುತೇಕ ದಕ್ಷಿಣ ಭಾರತದ ರಾಜ್ಯಗಳು ಪಾವತಿಸುವ ತೆರಿಗೆ ಹಣವನ್ನು ಕೇಂದ್ರ ಸರ್ಕಾರಗಳು ಉತ್ತರ ಭಾರತದ ರಾಜ್ಯಗಳಿಗೆ ಹಂಚಿಕೆ ಮಾಡುತ್ತವೆ.

ಆದರೆ, ನಾವು ತೆರಿಗೆ ಪಾವತಿಸುವಷ್ಟರ ಪ್ರಮಾಣದಲ್ಲಿ ನಮಗೆ ಅನುದಾನ ನೀಡುವುದಿಲ್ಲ. ಎಲ್ಲಾ ಸರ್ಕಾರಗಳಲ್ಲೂ ಈ ತಾರತಮ್ಯ ಮುಂದುವರೆಯುತ್ತಲೇ ಇದೆ. ಈವರೆಗೂ ಹಣಕಾಸು ಒಯ್ಯುತ್ತಿದ್ದ ಉತ್ತರ ಭಾರತೀಯ ರಾಜ್ಯಗಳು ಇದೀಗ ದಕ್ಷಿಣ ಭಾರತದ ಉದ್ಯೋಗಗಳನ್ನೂ ಪಡೆದುಕೊಳ್ಳುತ್ತಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್‌. ಜಿ. ಸಿದ್ದರಾಮಯ್ಯ ಹೇಳುತ್ತಾರೆ.

ನಮ್ಮವರು ನಿರುದ್ಯೋಗಿಗಳು

ಬಹುತೇಕ ಎಲ್ಲಾ ಕ್ಷೇತ್ರಗಳ ಉದ್ಯೋಗದಲ್ಲೂ ಅನ್ಯ ಭಾಷಿಕರು ಕೈ ಹಾಕಿದ್ದಾರೆ. ಕನ್ನಡಿಗರು ಮಾತ್ರವೇ ಉದ್ಯೋಗದಲ್ಲಿರುವ ಕೆಲಸಗಳೇ ಇಲ್ಲದಂತಾಗಿವೆ. ಸ್ಥಳೀಯವಾಗಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳನ್ನು ವಲಸಿಗರಿಗೆ ಬಿಟ್ಟುಕೊಟ್ಟು, ನಮ್ಮವರು ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಬಗ್ಗೆ ತಕ್ಷಣವೇ ಸರ್ಕಾರ ಸ್ಪಂದಿಸಿ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಲು ಕಾನೂನು ರೂಪಿಸಬೇಕು.

- ಡಾ. ಸಿದ್ದಲಿಂಗಯ್ಯ, ಹಿರಿಯ ಸಾಹಿತಿ

ರಾಜ್ಯದ ಉದ್ಯೋಗ ಪರರ ಪಾಲು

ಹಲವು ರಾಜ್ಯಗಳಲ್ಲಿ ಆಯಾ ಸರ್ಕಾರಗಳು ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುತ್ತಿವೆ. ನಮ್ಮಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಬದ್ಧತೆ ಇಲ್ಲದೆ ರಾಜ್ಯದ ಉದ್ಯೋಗಗಳು ಪರ ರಾಜ್ಯದವರ ಪಾಲಾಗುತ್ತಿವೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಅನ್ಯ ರಾಜ್ಯದವರೇ ಉದ್ಯೋಗ ಗಿಟ್ಟಿಸುವಂತಾಗಿದೆ.

- ಟಿ.ಎ. ನಾರಾಯಣಗೌಡ, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ.

 

- ಶ್ರೀಕಾಂತ ಎನ್‌. ಗೌಡಸಂದ್ರ 

Follow Us:
Download App:
  • android
  • ios