ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ, ಭಾರಿ ಜಿದ್ದಾಜಿದ್ದಿನಿಂದ ಕೂಡಿದ ಚುನಾವಣೆ ಹೈಕೋರ್ಟ್ ವರೆಗೂ ತಲುಪಿತ್ತು. ಇಂದು ನಡೆದ ಮತದಾನದಲ್ಲಿ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಗೆಲುವು ಕಂಡಿದ್ದಾರೆ.

ಬೆಂಗಳೂರು (ಡಿ.07) ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಚುನಾವಣೆ ದೇಶದ ಗಮನಸೆಳೆದಿತ್ತು. ಒಂದೆಡೆ ಮಾಜಿ ದಿಗ್ಗಜ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಬಣ ಮತ್ತೊಂದೆಡೆ ಕೆಎನ್ ಶಾಂತಕುಮಾರ್ ಬಣ. ನಾಮಪತ್ರ ತಿರಸ್ಕೃತ, ಹೈಕೋರ್ಟ್‌ನಲ್ಲಿ ಪ್ರಕರಣ ಸೇರಿದಂತೆ ಹಲವು ಕಾರಣಗಳಿಂದ ಕೆಎಸ್‌ಸಿಎ ಚುನಾವಣೆ ಭಾರಿ ಪೈಪೋಟಿ ಎದುರಿಸಿತ್ತು. ಇಂದು (ಡಿ.07) ನಡೆದ ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್ ಬಣ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಗೆ ವೆಂಕಟೇಶ್ ಪ್ರಸಾದ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ್ ಆಯ್ಕೆಯಾಗಿದ್ದಾರೆ.

ವೆಂಕಟೇಶ್ ಪ್ರಸಾದ್ ಜಯಭೇರಿ

20 ಸುತ್ತುಗಳ ಮತದಾನ ಎಣಿಕೆ ಪ್ರಕ್ರಿಯೆಯಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ 749 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕೆಎಸ್‌ಸಿಎ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಕೆಎನ್ ಶಾಂತಕುಮಾರ್ 558 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. 191 ಮತಗಳಿಂದ ವೆಂಕಟೇಶ್ ಪ್ರಸಾದ್ ಗೆಲುವು ಸಾಧಿಸಿದ್ದಾರೆ. ವಂಕಟೇಶ್ ಪ್ರಸಾದ್ ಬಣ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡಿದೆ. ಉಪಾಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ್ ಆಯ್ಕೆಯಾಗಿದ್ದಾರೆ. ಜನರಲ್ ಸೆಕ್ರೆಟರಿಯಾಗಿ ಸಂತೋಷ್ ಮೆನನ್ ಆಯ್ಕೆಯಾಗಿದ್ದಾರೆ.

ಬ್ರಿಜೇಶ್ ಪಟೇಲ್ ಬಣದ ವಿರುದ್ಧ ಗೆಲುವು

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಯಲ್ಲಿ ಅನಿನಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಬೆಂಬಲಿತ ಅಭ್ಯರ್ಥಿ ವೆಂಕಟೇಶ್ ಪ್ರಸಾದ್ ಆ್ಯಂಡ್ ಟೀಂ ಭರ್ಜರಿ ಗೆಲುವು ದಾಖಲಿಸಿದೆ. ಕೆಎಸ್‌ಸಿಎ ಮಾಜಿ ಆಡಳಿತಗಾರ ಬ್ರಜೇಶ್ ಪಟೇಲ್ ತಂಡದ ವಿರುದ್ಧ ವೆಂಕಟೇಶ್ ಪ್ರಸಾದ್ ತಂಡ ಗೆಲುವು ದಾಖಲಿಸಿದೆ. ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ಬಣದ ಸುಜಿತ್ ಸೋಮಸುಂದರ್ ಆಯ್ಕೆಯಾದರೆ, ವೆಂಕಟೇಶ್ ಪ್ರಸಾದ್ ಬಣದಿಂದ ಖಜಾಂಜಿ ಸ್ಥಾನಕ್ಕೆ ಮಧುಕರ್ ಆಯ್ಕೆಯಾಗಿದ್ದಾರೆ.

ಕೆಎಸ್‌‌ಸಿಎ ಇತಿಹಾಸದಲ್ಲಿ ಎರಡನೇ ದಾಖಲೆ ಮತದಾನ

ಈ ಬಾರಿಯ ಕೆಎಸ್‌ಸಿಎ ಚುನಾವಣೆ ತೀವ್ರ ಕೋಲೋಹಾಲ ಸಷ್ಟಿಸಿತ್ತು. ಚುನಾವಣೆ ಹೈಕೋರ್ಟ್ ಮೆಟ್ಟಿಲೇರಿದ್ದ ಕಾರಣ ಪೈಪೋಟಿ ಹೆಚ್ಚಾಗಿತ್ತು. ಇಷ್ಟೇ ಅಲ್ಲ ಚುನಾವಣಾ ಪ್ರಚಾರಗಳು ಭರ್ಜರಿಯಾಗಿ ನಡೆದಿತ್ತು. ಬೆಳಗ್ಗೆಯಿಂದ ಸಂಜೆ 7 ಗಂಟೆ ವರೆಗೆ ಮತದಾನ ಪ್ರಕ್ರಿಯೆ ನಡೆದಿತ್ತು. ಇದರ ಪರಿಣಾಮ ಈ ಬಾರಿ ಕರ್ನಾಟಕ ರಾಜ್ಯ ಸಂಸ್ಥೆ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದೆ. ಈ ಬಾರಿ 1315 ಮತ ಚಲಾವಣೆಯಾಗಿದೆ. ಇದು ಇದುವರೆಗಿನ ಎರಡನೇ ಗರಿಷ್ಠ ಮತದಾನವಾಗಿದೆ. ಇದಕ್ಕೂ ಮೊದಲು 2013ರಲ್ಲಿ 1351 ಮತದಾನವಾಗಿತ್ತು.