ಅಮೆರಿಕ ಅಧ್ಯಕ್ಷರಾಗಿ ಬೈಡೆನ್‌ ಪದಗ್ರಹಣ

ಅಮೆರಿಕದ 45ನೇ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೆಮಾಕ್ರೆಟ್‌ ಪಕ್ಷದ ಜೋ ಬೈಡೆನ್‌ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್‌ ಜ.20ರಂದು ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಈ ವರ್ಷ ಸರಳವಾಗಿ ಸಮಾರಂಭ ಆಯೋಜಿಸಲಾಗಿದೆ. ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಬೈಡೆನ್‌ ಸೋಲಿಸಿದ್ದರು. ಅಮೆರಿಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತೀಯ ಮೂಲದವರಿಗೆ ಉಪಾಧ್ಯಕ್ಷ ಪಟ್ಟಒಲಿದಿದೆ. ಹೀಗಾಗಿ ಈ ಬಾರಿಯ ಚುನಾವಣೆ ಭಾರತೀಯರ ಗಮನ ಸೆಳೆದಿತ್ತು.

ಕ್ಯೂಬಾದಲ್ಲಿ ಕ್ಯಾಸ್ಟ್ರೋ ಸೋದರರ ಯುಗಾಂತ್ಯ

ಕಮ್ಯುನಿಸ್ಟ್‌ ದೇಶ ಕ್ಯೂಬಾವನ್ನು ಬರೋಬ್ಬರಿ 62 ವರ್ಷಗಳ ಕಾಲ ಆಳಿದ ಕ್ಯಾಸ್ಟೊ್ರೕ ಸೋದರರ ಆಡಳಿತ ಈ ವರ್ಷ ಅಂತ್ಯವಾಗಲಿದೆ. ಸರ್ಕಾರವನ್ನು ನಡೆಸುತ್ತಿರುವ ಕಮ್ಯುನಿಸ್ಟ್‌ ಪಕ್ಷದ ಮೊದಲ ಕಾರ್ಯದರ್ಶಿ ಮತ್ತು ಪ್ರಧಾನಿ ಹುದ್ದೆಯಿಂದ 2021ರ ಏ.19ರಂದು ಕೆಳಗಿಳಿಯುವುದಾಗಿ ರೌಲ್‌ ಕ್ಯಾಸ್ಟೊ್ರೕ ಪ್ರಕಟಿಸಿದ್ದಾರೆ. ಇದಕ್ಕೂ ಮೊದಲು ರೌಲ್‌ ಅವರ ಸೋದರ ಫಿಡೆಲ್‌ ಕ್ಯಾಸ್ಟೊ್ರೕ 1961-2011ರ ವರೆಗೆ ದೇಶವನ್ನು ಆಳಿದ್ದರು. ನಂತರ ರೌಲ್‌ ಅಧಿಕಾರ ವಹಿಸಿಕೊಂಡಿದ್ದರು.

Fact Check: ಅದಾನಿ ಗ್ರೂಪ್‌ಗೆ ರೈಲ್ವೆ ಮಾರಾಟ! 

ಫಿಫಾ ಕಿರಿಯರ ವಿಶ್ವಕಪ್‌

ಫಿಫಾ ಆಯೋಜಿಸುವ 20 ವರ್ಷದೊಳಗಿನವರ ಕಿರಿಯರ ಫುಟ್ಬಾಲ್‌ ವಿಶ್ವಕಪ್‌ ಮೇ 20ರಿಂದ ಜೂನ್‌ 12ರವರೆಗೆ ಇಂಡೋನೇಷ್ಯಾದಲ್ಲಿ ನಡೆಯಲಿದೆ. ದೇಶದ 6 ನಗರಗಳ 6 ಕ್ರೀಡಾಂಗಣದಲ್ಲಿ ನಡೆಯುವ ಈ 23ನೇ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ 24 ದೇಶಗಳು ಪಾಲ್ಗೊಳ್ಳಲಿವೆ.

ಶತಮಾನದ ಅತಿ ಅಲ್ಪಾವಧಿ ಚಂದ್ರಗ್ರಹಣ

ಮೇ 26ರಂದು ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣದ ಅವಧಿ ಕೇವಲ 14 ನಿಮಿಷ 30 ಸೆಕೆಂಡ್‌ ಇರಲಿದೆ. ಹೀಗಾಗಿ ಇದು 21ನೇ ಶತಮಾನದ ಅತಿ ಅಲ್ಪಾವಧಿ ಚಂದ್ರಗ್ರಹಣ ಎಂಬ ದಾಖಲೆಗೆ ಪಾತ್ರವಾಗಲಿದೆ.

ಟೋಕಿಯೋ ಬೇಸಿಗೆ ಒಲಿಂಪಿಕ್ಸ್‌

ಕೋವಿಡ್‌ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಬೇಸಿಗೆ ಒಲಿಂಪಿಕ್ಸ್‌ ಜುಲೈ 23ರಿಂದ ಆ.8ರವರೆಗೆ ಜಪಾನ್‌ನಲ್ಲಿ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ 206 ದೇಶಗಳ 11000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿಯಾಗುವ ನಿರೀಕ್ಷೆ ಇದೆ. ಈ ಹಿಂದೆ 1964ರಲ್ಲೊಮ್ಮೆ ಕೂಡ ಜಪಾನ್‌ ಒಲಿಂಪಿಕ್ಸ್‌ ಆಯೋಜಿಸಿದ ಹಿರಿಮೆ ಹೊಂದಿದೆ. 2016ರ ಒಲಿಂಪಿಕ್ಸ್‌ ಬ್ರೆಜಿಲ್‌ನಲ್ಲಿ ನಡೆದಿತ್ತು. 2024ರ ಒಲಿಂಪಿಕ್ಸ್‌ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಿಗದಿಯಾಗಿದೆ.

2021ಕ್ಕೆ ಹನ್ನೊಂದು ವಿಶೇಷ ಅಹವಾಲು

ಹಬಲ್‌ ಟೆಲಿಸ್ಕೋಪ್‌ಗೊಂದು ಸಂಗಾತಿ

1990ರಲ್ಲಿ ಅಮೆರಿಕ ಹಾರಿಬಿಟ್ಟಿದ್ದ 11110 ಕೆಜಿ ತೂಕದ ಹಬಲ್‌ ಟೆಲಿಸ್ಕೋಪ್‌ ಇಂದಿಗೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇದೀಗ ನಾಸಾ, ಯುರೋಪಿಯನ್‌ ಏಜೆನ್ಸಿ, ಕೆನೆಡಿಯನ್‌ ಸ್ಪೇಸ್‌ ಏಜೆನ್ಸಿ ಮತ್ತು ಸ್ಪೇಸ್‌ ಟೆಲಿಸ್ಕೋಪ್‌ ಸೈನ್ಸ್‌ ಇನ್ಸಿಟಿಟ್ಯೂಟ್‌ ಸಹಯೋಗದಲ್ಲಿ ಅ.31ರಂದು ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ಉಡ್ಡಯನಕ್ಕೆ ನಿರ್ಧರಿಸಲಾಗಿದೆ. ಇದರ ಕಾರ್ಯಾವಧಿ 10 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಟೆಲಿಸ್ಕೋಪ್‌ 6500 ಕೆಜಿ ತೂಕವಿರಲಿದೆ. ಯೋಜನಾ ವೆಚ್ಚ ಈಗಾಗಲೇ 75000 ಕೋಟಿ ರು. ದಾಟಿದೆ.

ಅಮೆರಿಕದ ಮಾನವ ಸಹಿತ ಚಂದ್ರಯಾನ

ನವೆಂಬರ್‌ ತಿಂಗಳಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆರ್ತಿಮಿಸ್‌ ಹೆಸರಿನಲ್ಲಿ ಮೊಟ್ಟಮೊದಲ ಸಂಯೋಜಿತ ಮಾನವ ಸಹಿತ ಚಂದ್ರಯಾನಕ್ಕೆ ಉದ್ದೇಶಿಸಿದೆ. ಈ ಯೋಜನೆಯ ಸಂಭವನೀಯ ಯಾನಿಗಳಲ್ಲಿ ಭಾರತೀಯ ಮೂಲದ ರಾಜಾ ಚಾರಿ ಸ್ಥಾನ ಪಡೆದುಕೊಂಡಿದ್ದಾರೆ.

ನಿಮಿಷಕ್ಕೆ 4100 ಫುಡ್ ಆರ್ಡರ್: ಝೊಮೆಟೋ CEO ಶಾಕ್ 

ಮಂಗಳನ ಮೇಲಿಳಿಯಲಿದೆ ಅಮೆರಿಕ ನೌಕೆ

ಮಂಗಳ ಗ್ರಹದ ಅಧ್ಯಯನಕ್ಕೆಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 2020ರ ಜುಲೈನಲ್ಲಿ ಹಾರಿಬಿಟ್ಟಿದ್ದ ನೌಕೆಯ ಭಾಗವಾಗಿದ್ದ ಪರ್‌ಸಿವಿರೆನ್ಸ್‌ ಹೆಸರಿನ ರೋವರ್‌ 2021ರ ಫೆಬ್ರವರಿ ತಿಂಗಳಲ್ಲಿ ಮಂಗಳ ಗ್ರಹದ ಜೆಜೆರೋ ಎಂಬ ಗುಂಡಿಯ ಮೇಲೆ ಇಳಿದು ಅಲ್ಲಿನ ಕಲ್ಲು, ಮಣ್ಣು ಸಂಗ್ರಹಿಸಿ ಭೂಮಿಗೆ ಮರಳಲಿದೆ. 49 ಕಿ.ಮೀ ಸುತ್ತಳತೆಯ ಈ ಗುಂಡಿಯಲ್ಲಿ ಒಂದೊಮ್ಮೆ ನೀರಿತ್ತು ಎಂಬುದು ವಿಜ್ಞಾನಿಗಳ ನಂಬಿಕೆ. ಅದು ಹೌದಾದಲ್ಲಿ ಅಲ್ಲೇನಾದರೂ ಜೀವಿಗಳ ಕುರುಹು ಸಿಗಬಹುದು ಎಂಬುದು ವಿಜ್ಞಾನಿಗಳ ಕುತೂಹಲದ ಒಂದು ಭಾಗ.

ಪುರುಷರ ಗರ್ಭನಿರೋಧಕ ಮಾತ್ರೆ ಮಾರುಕಟ್ಟೆಗೆ

ಕೆಲ ವರ್ಷಗಳ ಹಿಂದೆಯೇ ಪುರುಷರಿಗೂ ಗರ್ಭ ನಿರೋಧಕ ಮಾತ್ರೆಗಳು ಮಾರುಕಟ್ಟೆಗೆ ಬಂದಿದ್ದವು. ಆದರೆ ಅಡ್ಡಪರಿಣಾಮಗಳು ಹೆಚ್ಚಿದ್ದ ಕಾರಣ ಅವು ಜನಪ್ರಿಯವಾಗಿದ್ದು ಕಡಿಮೆ. ಹೀಗಾಗಿ ದೇಹದ ಮೇಲೆ ಅಡ್ಡ ಪರಿಣಾಮಗಳಿರದ ವಿಧಾನವೊಂದನ್ನು ಅಮೆರಿಕ ವಿಜ್ಞಾನಿಗಳು ಕಂಡುಹಿಡಿದಿದ್ದರು. ಪುರುಷರ ಜನನಾಂಗವನ್ನೇ ಗುರಿಯಾಗಿಸಿ ಜೆಕ್ಯು1 ಎಂಬ ಕಾಂಪೌಂಡ್‌ ಬಳಸಿದ ಪರಿಣಾಮ ದೇಹದ ಮೇಲೆ ಅಡ್ಡ ಪರಿಣಾಮಗಳು ಕಂಡುಬಂದಿರಲಿಲ್ಲ. ಈ ಸಂಯುಕ್ತವನ್ನು ಒಳಗೊಂಡ ಮಾತ್ರೆ ಈ ವರ್ಷ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಪ್ರವೇಶಿಸುವ ಸಾಧ್ಯತೆ ಇದೆ.

ಇನ್ನು ಮೂರು ತಿಂಗಳು ಸಣ್ಣ ಉಳಿತಾಯಗಳ ಬಡ್ಡಿ ದರ ಇಳಿಕೆಯಿಲ್ಲ 

ವಿಶ್ವದ ಮೊದಲ ಕೃತಕ ಕಿಡ್ನಿ ಬಳಕೆ

ಇತ್ತೀಚಿನ ವರ್ಷಗಳಲ್ಲಿ ಮೂತ್ರಜನಕಾಂಗ ಸಮಸ್ಯೆಯಿಂದ ಬಳಲುತ್ತಿರುವವರ ಸಮಸ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಆದರೆ ದಾನಿಗಳ ಕೊರತೆಯಿಂದಾಗಿ ಸಮಸ್ಯೆ ಎದುರಿಸುತ್ತಿರುವವರಿಗೆ ಸೂಕ್ತ ಚಿಕಿತ್ಸೆ ಸಾಧ್ಯವಾಗುತ್ತಿಲ್ಲ. ಇಂಥವರಿಗೆ ನೆರವಾಗಲೆಂದೇ ಕ್ಯಾಲಿಫೋರ್ನಿಯಾ ವಿವಿಯ ವಿಜ್ಞಾನಿಗಳು ಕೃತಕ ಕಿಡ್ನಿ ಅಭಿವೃದ್ಧಿಪಡಿಸಿದ್ದಾರೆ. 2017ರಿಂದಲೇ ಇದರ ಕ್ಲಿನಿಕಲ್‌ ಪ್ರಯೋಗಗಳು ಆರಂಭವಾಗಿದ್ದು, ಈ ವರ್ಷ ಸಾರ್ವಜನಿಕರ ಬಳಕೆಗೆ ಮುಕ್ತವಾಗಿ ಲಭ್ಯವಾಗುವ ನಿರೀಕ್ಷೆ ಇದೆ.

ಹಾರುವ ಕಾರಿನ ಕನಸು ನನಸು

ಬೇಕೆಂದಾಗ ರಸ್ತೆಯಲ್ಲಿ ಚಲಿಸುವ, ಮನಸ್ಸಾದಾಗ ಆಕಾಶದಲ್ಲಿ ಹಾರಬಹುದಾದ ವಾಹನ ಮನುಷ್ಯನ ಬಹು ದಶಕಗಳ ಕನಸು. ಇಂಥ ಕನಸಿನ ನನಸಿಗಾಗಿ ಹಲವು ದಶಕಗಳಿಂದ ಪ್ರಯತ್ನ ನಡೆಯುತ್ತಲೇ ಇದೆ. ಇದರ ಫಲವಾಗಿ 2021ರ ಅಂತ್ಯಭಾಗದಲ್ಲಿ ಟೆರ್ರಾಫ್ಯುಜಿಯಾ ಟಿಎಫ್‌-ಎಕ್ಸ್‌ ಹಾರುವ ಕಾರು ಮಾರುಕಟ್ಟೆಬರಲಿದೆ. ಒಮ್ಮೆ ರೀಚಾಜ್‌ರ್‍ ಮಾಡಿದರೆ ಆಗಸದಲ್ಲಿ 500 ಮೈಲು ದೂರ ಇದು ಚಲಿಸಬಲ್ಲದು. ಸದ್ಯಕ್ಕೆ ಇದಕ್ಕೆ 2 ಕೋಟಿ ರು. ದರ ನಿಗದಿಪಡಿಸಲಾಗಿದೆ.

ಭಾರತದ ಮೊದಲ ಗಗನಯಾನ ಪ್ರಯೋಗ

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ 2020ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನದ ಪೂರ್ವ ಪ್ರಯೋಗ ಮತ್ತು 2021ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಯೋಜಿಸಿತ್ತು. ಆದರೆ ಕೊರೋನಾ ಕಾರಣ ಯೋಜನೆಯನ್ನು 1 ವರ್ಷ ಮುಂದೂಡಲಾಗಿದೆ. ಅದರನ್ವಯ 2020ರ ಡಿಸೆಂಬರ್‌ನಲ್ಲಿ ಗಗನಯಾನ ನಡೆಸುವ ಕ್ಯಾಪ್ಯೂಲ್‌ ತನ್ನ ಮೊದಲ ಕಕ್ಷೆ ಹಾರಾಟ ಪ್ರಯೋಗ ನಡೆಸಲಿದೆ. 2ನೇ ಕಕ್ಷೆ ಪ್ರಯೋಗ 2022ರ ಜುಲೈನಲ್ಲಿ ಮತ್ತು 2022ರ ಡಿಸೆಂಬರ್‌ನಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಉದ್ದೇಶಿಸಿದೆ.

5 ರಾಜ್ಯಗಳ ವಿಧಾನಸಭಾ ಚುನಾವಣೆ

ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಗೆ 2021ರ ಏಪ್ರಿಲ್‌ - ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹಾಲಿ ಅಸ್ಸಾಂನಲ್ಲಿ ಬಿಜೆಪಿ, ಕೇರಳದಲ್ಲಿ ಎಲ್‌ಡಿಎಫ್‌, ಪುದುಚೇರಿಯಲ್ಲಿ ಕಾಂಗ್ರೆಸ್‌, ತಮಿಳುನಾಡಿನಲ್ಲಿ ಎಐಎಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರ ನಡೆಸುತ್ತಿವೆ.

16ನೇ ಜನಗಣತಿಗೆ ಚಾಲನೆ

ಭಾರತದ 16ನೇ ಜನಗಣತಿ ಈ ವರ್ಷ ನಡೆಯಲಿದೆ. ದೇಶದ ಒಟ್ಟು ಜನಸಂಖ್ಯೆ, ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ, ಜಾತಿಯ ಸ್ಥಿತಿಗತಿ ಅರಿಯಲು ಈ ಜನಗಣತಿ ನಡೆಸಲಾಗುತ್ತಿದೆ. 2020ರಲ್ಲಿ ಈ ಗಣತಿಯ ಪ್ರಾಥಮಿಕ ಕೆಲಸಗಳು ಆರಂಭವಾಗಿದ್ದು, ಈ ವರ್ಷ ಪೂರ್ಣ ಗಣತಿ ಕಾರ್ಯ ನಡೆಯಲಿದೆ. ಇದರಲ್ಲಿ 3 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಲಿದ್ದಾರೆ.

ಐಸಿಸಿ ಪುರುಷರ ಟಿ20 ವಿಶ್ವಕಪ್‌ ಕ್ರಿಕೆಟ್‌

ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಐಸಿಸಿ ಟಿ20 ಪುರುಷರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ 2021ರ ಅಕ್ಟೋಬರ್‌- ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿದೆ. ಭಾರತ ಸೇರಿ 16 ತಂಡಗಳು ಭಾಗಿಯಾಗಲಿದ್ದು, ಒಟ್ಟು 45 ಪಂದ್ಯಗಳು ನಡೆಯಲಿವೆ

ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡಿಗರ ವಾರ್ಷಿಕ ಸಾಹಿತ್ಯದ ಹಬ್ಬವಾದ ಕನ್ನಡ ಸಾಹಿತ್ಯ ಸಮ್ಮೇಳನ 2021ರ ಫೆ.26ರಿಂದ 28ರವರೆಗೆ ಹಾವೇರಿಯಲ್ಲಿ ನಡೆಯಲಿದೆ. ಇದು 86ನೇ ಕನ್ನಡ ಸಾಹಿತ್ಯ ಸಮ್ಮೇಳನವಾಗಿರಲಿದೆ.

ಚೆಕ್‌ ಪಾವತಿಗೆ ಪಾಸಿಟಿವ್‌ ಪೇ ವ್ಯವಸ್ಥೆ

ಚೆಕ್‌ ಮೂಲಕ ಹಣ ಪಾವತಿಯನ್ನು ಇನ್ನಷ್ಟುಸುರಕ್ಷಿತಗೊಳಿಸಲು ಆರ್‌ಬಿಐ ಹೊಸ ವರ್ಷದಿಂದ ಪಾಸಿಟಿವ್‌ ಪೇ ಎಂಬ ವ್ಯವಸ್ಥೆ ಜಾರಿಗೆ ತರಲಿದೆ. ಇದರನ್ವಯ 50000 ರು.ಗಿಂತ ಹೆಚ್ಚಿನ ಹಣ ಪಾವತಿ ನೀಡಿದ ವೇಳೆ ಚೆಕ್‌ ನೀಡಿದ ವ್ಯಕ್ತಿ ಹೆಚ್ಚುವರಿ ಮಾಹಿತಿ ನೀಡುವುದು ಅಗತ್ಯ. ಅಂದರೆ ಚೆಕ್‌ ನಗದಿಗೆ ಬಂದಾಗ ಚೆಕ್‌ ನೀಡಿದ ವ್ಯಕ್ತಿ ಹಣದ ಮೌಲ್ಯ, ಚೆಕ್‌ ನಂಬರ್‌, ಖಾತೆ ಸಂಖ್ಯೆ ಮತ್ತಿತರೆ ಮಾಹಿತಿ ಖಚಿತ ಪಡಿಸಬೇಕು. ಆದರೆ ಇದು ಐಚ್ಛಿಕ.

ಕಾಂಟ್ಯಾಕ್ಟ್ಲೆಸ್‌ ಕಾರ್ಡ್‌ ಮಿತಿ ಹೆಚ್ಚಳ

ಕಾರ್ಡ್‌ ಅನ್ನು ಸ್ವೈಪ್‌ ಮಾಡದೆ ಬಳಸಲು ಅವಕಾಶ ಮಾಡಿಕೊಡುವ ಈ ವ್ಯವಸ್ಥೆಯಲ್ಲಿನ ಪಾವತಿ ಮಿತಿಯನ್ನು 2000 ರು.ನಿಂದ 5000 ರು.ಗೆ ಹೆಚ್ಚಿಸಲಾಗುವುದು. ಇದು ಕೂಡಾ ಗ್ರಾಹಕರ ಸಮ್ಮತಿಗೆ ಒಳಪಟ್ಟಿರುತ್ತದೆ.

ವರ್ಷಕ್ಕೆ 4 ಬಾರಿ ಜಿಎಸ್‌ಟಿ ಮಾಹಿತಿ

ವಾರ್ಷಿಕ 5 ಕೋಟಿ ರು.ಗಿಂತ ಕಡಿಮೆ ವಹಿವಾಟು ನಡೆಸುವ ಕಂಪನಿಗಳು ಇನ್ನು ಮುಂದೆ 3 ತಿಂಗಳಿಗೆ ಒಂದರಂತೆ ವರ್ಷಕ್ಕೆ ನಾಲ್ಕು ಬಾರಿ ಮಾತ್ರ ಜಿಎಸ್‌ಟಿ ವಿವರ ಸಲ್ಲಿಕೆ ಮಾಡಿದರೆ ಸಾಕು. ಹಾಲಿ ವ್ಯವಸ್ಥೆಯಲ್ಲಿ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಬಾರಿ ಮಾಹಿತಿ ಸಲ್ಲಿಸಬೇಕಿತ್ತು.

ಲ್ಯಾಂಡ್‌ಲೈನ್‌ಗೆ ಕರೆ ಮಾಡುವ ಮುನ್ನ 0 ಸೇರಿಸಿ

2021ರ ಜ.15ರಿಂದ ಯಾವುದೇ ಲ್ಯಾಂಡ್‌ಲೈನ್‌ಗೆ ಕರೆ ಮಾಡುವ ಮುನ್ನ 0 ಒತ್ತುವುದು ಅನಿವಾರ್ಯ. ಈ ಸಂಬಂಧ ಸೂಕ್ತ ತಿದ್ದುಪಡಿ ಮಾಡಿಕೊಳ್ಳುವಂತೆ ದೂರಸಂಪರ್ಕ ನಿಯಂತ್ರಣ ಸಂಸ್ಥೆಯಾದ ಟ್ರಾಯ್‌ ಈಗಾಗಲೇ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.

ಕೆಲ ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್‌ ಸಿಗಲ್ಲ

ವಿಶ್ವದ ಅತ್ಯಂತ ಜನಪ್ರಿಯ ಆ್ಯಪ್‌ಗಳ ಪೈಕಿ ಒಂದಾದ ವಾಟ್ಸ್‌ಆ್ಯಪ್‌ ಜ.1ರಿಂದ ಕೆಲ ಆಯ್ದ ಮೊಬೈಲ್‌ಗಳಲ್ಲಿ ಲಭ್ಯವಿರುವುದಿಲ್ಲ. ಹಳೆಯ ಮಾದರಿ ಮೊಬೈಲ್‌ಗಳಿಗೆ ಇದು ಅನ್ವಯವಾಗಲಿದೆ.

ಕಾರು, ಬೈಕ್‌ಗಳ ಬೆಲೆ ಏರಿಕೆ

ಕೊರೋನಾ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ದರ ಏರಿಕೆ ಮಾಡದೆ, ಭಾರಿ ಡಿಸ್ಕೌಂಟ್‌ ಘೋಷಿಸಿದ್ದ ವಿವಿಧ ಆಟೋಮೊಬೈಲ್‌ ಕಂಪನಿಗಳು ಜ.1ರಿಂದ ಬಹುತೇಕ ಎಲ್ಲಾ ಮಾದರಿಯ ಕಾರುಗಳ ದರ ಏರಿಕೆಯ ಘೋಷಣೆ ಮಾಡಿವೆ. ಹೀಗಾಗಿ ಕಾರು ಮತ್ತು ಬೈಕ್‌ಗಳ ದರ ಗಮನಾರ್ಹ ಪ್ರಮಾಣದಲ್ಲಿ ಏರುವ ನಿರೀಕ್ಷೆ ಇದೆ.

ಬ್ರೆಕ್ಸಿಟ್‌ ಪ್ರಕ್ರಿಯೆ ಪೂರ್ಣ

2019ರ ಜ.31ರಂದು ಯುರೋಪಿಯನ್‌ ಒಕ್ಕೂಟದಿಂದ ಬಹುತೇಕ ಸಂಬಂಧ ಕಡಿದುಕೊಂಡಿದ್ದ ಬ್ರಿಟನ್‌ 2021 ಜ.1ರಿಂದ ಶೇ.100ರಷ್ಟುಪ್ರಮಾಣದಲ್ಲಿ ಹೊರಬರಲಿದೆ. ಇತರೆ ಕೆಲ ಸಂಬಂಧ ಕಡಿದುಕೊಂಡಿದ್ದರೂ, ಬ್ರೆಕ್ಸಿಟ್‌ ನಂತರದ ಮುಕ್ತ ವಹಿವಾಟಿಗೆ ಸಂಬಂಧಿಸಿದಂತೆ ಯುರೋಪಿಯನ್‌ ಒಕ್ಕೂಟಗಳ ಜೊತೆ ಬ್ರಿಟನ್‌ ಸಂಬಂಧ ಉಳಿದುಕೊಂಡಿತ್ತು.

ಭಾರತದಲ್ಲಿ ಬಿಡುಗಡೆಯಾಗಲಿದೆ ಕೊರೋನಾ ಲಸಿಕೆ

ಹೊಸ ವರ್ಷದಲ್ಲಿ ಭಾರತದಲ್ಲೂ ಕೊರೋನಾ ಲಸಿಕೆ ಬಿಡುಗಡೆಯಾಗಲಿದೆ. ಭಾರತದಲ್ಲಿ ಇದುವರೆಗೆ 1 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿ ಸುಮಾರು 1.50 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಭಾರತ ಸರ್ಕಾರ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡಲು ಎಲ್ಲಾ ಸಿದ್ಧತೆಗಳನ್ನು ನಡೆಸಿದೆ.

ವಿಶ್ವದ ಬಹುತೇಕ ದೇಶಗಳಿಗೂ ಲಸಿಕೆ

ವಿಶ್ವದ ಕೆಲ ಕಂಪನಿಗಳು ಬಿಡುಗಡೆ ಮಾಡಿರುವ ಕೊರೋನಾ ಲಸಿಕೆ 2020ರ ಅಂತ್ಯದ ವೇಳೆ ವಿಶ್ವದ 10ಕ್ಕಿಂತ ಕಡಿಮೆ ದೇಶಗಳಲ್ಲಿ ಮಾತ್ರವೇ ಲಭ್ಯವಾಗಿದೆ. ಉತ್ಪಾದನೆ ಹೆಚ್ಚಿದಂತೆ ಸೋಂಕು ಕಾಣಿಸಿಕೊಂಡಿರುವ ವಿಶ್ವದ 200ಕ್ಕೂ ಹೆಚ್ಚು ದೇಶಗಳ ಪೈಕಿ ಬಹುತೇಕ ದೇಶಗಳಿಗೆ ಕನಿಷ್ಠ ಅಲ್ಪ ಪ್ರಮಾಣದಲ್ಲಾದರೂ ಲಸಿಕೆ ಪೂರೈಕೆಯಾಗುವ ವಿಶ್ವಾಸದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಇದೆ.

ಬಲ್ಗೇರಿಯಾದ ಒಂಟಿ ಕಣ್ಣಿನ ಬಾಬಾ ವಂಗಾ ಭವಿಷ್ಯ ಏನಿದೆ

1996ರಲ್ಲಿ ಸಾವನ್ನಪ್ಪಿದ ಬಾಬಾ ವಂಗಾ ಮುಂದೇನಾಗಲಿದೆ ಎಂದು 5070ನೇ ಇಸವಿಯವರಿಗೆ ಭವಿಷ್ಯ ಬರೆದಿಟ್ಟಿದ್ದಾರೆ. ಅಮೆರಿಕದ ವಾಣಿಜ್ಯ ಕಟ್ಟಡ ಧ್ವಂಸ ಸೇರಿದಂತೆ ಬಾಬಾ ಹೇಳಿದ ಹಲವು ವಿಷಯಗಳು ನಿಜವಾಗುವ ಮೂಲಕ ಪ್ರತಿ ವರ್ಷಾರಂಭದಲ್ಲೂ ಭವಿಷ್ಯದ ಕುರಿತ ಕುತೂಹಲ ಇಮ್ಮಡಿಯಾಗುತ್ತಲೇ ಇದೆ.

ಈ ವರ್ಷದ ಬಗ್ಗೆ ಬಾಬಾ ಹೇಳಿದ್ದೇನು?

ಭಾರೀ ದುರಂತ

2021ರಲ್ಲೂ ಭಾರೀ ದುರಂತಗಳು ವಿಶ್ವವನ್ನು ಕಾಡಲಿವೆ. ಅದು ಮಾನವೀಯತೆಯ ಹಣೆಬರಹವನ್ನೇ ಬದಲಾಯಿಸಲಿದೆ ಎಂದು ಬಾಬಾ ಹೇಳಿದ್ದಾರೆ.

ಕ್ಯಾನ್ಸರ್‌ಗೆ ಸಿಗಲಿದೆ ಔಷಧ

ಜಗತ್ತಿನಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರನ್ನು ಬಲಿ ಪಡೆಯುತ್ತಿರುವ ಕ್ಯಾನ್ಸರ್‌ಗೆ 2021ರಲ್ಲಿ ಔಷಧ ಸಿಗಲಿದೆ. ಕ್ಯಾನ್ಸರ್‌ ಅನ್ನು ಕಬ್ಬಿಣದ ಸರಪಳಿಯಲ್ಲಿ ಬಿಗಿಯಾಗಿ ಬಂಧಿಸಿಡುವ ದಿನ ಬರಲಿದೆ ಎಂದು ಬಾಬಾ ಭವಿಷ್ಯ ನುಡಿದಿದ್ದಾರೆ.

ಟ್ರಂಪ್‌ಗೆ ಕಿವುಡು, ಮಾರಕ ರೋಗ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿವುಡ ಮತ್ತು ಮಾರಕ ಸೋಂಕಿಗೆ ತುತ್ತಾಗಲಿದ್ದಾರಂತೆ.

ಪುಟಿನ್‌ ಮೇಲೆ ಆತ್ಮಾಹುತಿ ದಾಳಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಆತ್ಮಾಹುತಿ ದಾಳಿಗೆ ಎದುರಿಸಬೇಕಾಗಿ ಬರಲಿದೆ. ಜೊತೆಗೆ ಇಸ್ಲಾಮಿಕ್‌ ಉಗ್ರರಿಂದ ಯುರೋಪ್‌ ಮೇಲೆ ರಾಸಾಯನಿಕ ದಾಳಿ ನಡೆಯಲಿದೆಯಂತೆ.

ವಿಶ್ವವನ್ನು ಚೀನಾ ಆಳಲಿದೆ

ಪ್ರಬಲ ಡ್ರ್ಯಾಗನ್‌ ಇಡೀ ವಿಶ್ವವನ್ನು ತನ್ನ ಕಪಿಮುಷ್ಟಿಗೆ ತೆಗೆದುಕೊಳ್ಳಲಿದೆ. ಇದೇ ವೇಳೆ ವಿಶ್ವದ ಮೂರು ಶಕ್ತಿಗಳು ಒಂದಾಗಲಿವೆ ಎಂದು ಬಾಬಾ ವಂಗಾ ಹೇಳಿದ್ದಾರೆ. ಡ್ರ್ಯಾಗನ್‌ ಚೀನಾದ ಚಿಹ್ನೆಯಾಗಿರುವ ಕಾರಣ ಈ ಭವಿಷ್ಯ ಸಾಕಷ್ಟುಕುತೂಹಲ ಕೆರಳಿಸಿದೆ.