eagle breaks train windshield: ವೇಗವಾಗಿ ಚಲಿಸುತ್ತಿದ್ದ ಬಾರಾಮುಲ್ಲಾ-ಬನಿಹಾಲ್ ರೈಲಿಗೆ ಹದ್ದೊಂದು ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ರೈಲಿನ ಮುಂಭಾಗದ ಗಾಜು ಒಡೆದು, ಲೋಕೋ ಪೈಲಟ್‌ಗೆ ಗಾಯಗಳಾಗಿವೆ. ಡಿಕ್ಕಿಯ ರಭಸಕ್ಕೆ ಹದ್ದಿಗೂ ಗಾಯಗಳಾಗಿದೆ.
ಚಲಿಸುತ್ತಿದ್ದ ರೈಲಿಗೆ ಹದ್ದು ಡಿಕ್ಕಿ: ರೈಲಿನ ಚಾಲಕನಿಗೆ ಗಾಯ
ಆಕಾಶದಲ್ಲಿ ಹಾರುವ ವಿಮಾನಗಳಿಗೆ ಹಕ್ಕಿಗಳು ಡಿಕ್ಕಿ ಹೊಡೆಯುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಂದು ಕಡೆ ವೇಗವಾಗಿ ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ಹದ್ದೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ರೈಲಿನ ಮುಂಭಾಗದ ಗಾಜು ಒಡೆದು ರೈಲಿನ ಚಾಲಕ ಗಾಯಗೊಂಡ ಘಟನೆ ನಡೆದಿದೆ. ಜಮ್ಮುಕಾಶ್ಮೀರದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜ್ಬೆಹರ್‌ನಿಂದ ಅನಂತ್‌ನಾಗ್‌ನತ್ತ ತೆರಳುತ್ತಿದ್ದ ರೈಲು
ಬಿಜ್ಬೆಹರ್‌ನಿಂದ ಅನಂತ್‌ನಾಗ್‌ನತ್ತ ತೆರಳುತ್ತಿದ್ದ, ಬಾರಾಮುಲ್ಲಾ ಬನಿಹಾಲ್ ರೈಲಿನಲ್ಲಿ ಈ ಘಟನೆ ನಡೆದಿದೆ. ಹದ್ದೊಂದು ರೈಲಿಗೆ ಡಿಕ್ಕಿ ಹೊಡೆದು ರೈಲಿನ ಒಳಭಾಗಕ್ಕೆ ಬಂದು ಬಿದ್ದಿದೆ. ಘಟನೆಯಲ್ಲಿ ಹಕ್ಕಿಗೂ ಗಾಯವಾದಂತೆ ಕಾಣುತ್ತಿತ್ತು. ಅದು ಕುಂಟುತ್ತಿರುವುದು ವೀಡಿಯೋದಲ್ಲಿ ಕಾಣಿಸಿದೆ. ಹಾಗೆಯೇ ರೈಲಿನ ಲೋಕೋಮೋಟಿವ್ ಪೈಲಟ್‌ಗೂ ಗಾಯವಾಗಿದ್ದು, ಹಕ್ಕಿ ಡಿಕ್ಕಿ ಹೊಡೆದ ರಭಸಕ್ಕೆ ರೈಲಿನ ಮುಂಭಾಗದ ಗಾಜು ಕಲ್ಲೆಸೆದಂತೆ ಛಿದ್ರವಾಗಿದೆ.
ಹದ್ದಿಗೂ ಗಾಯ: ವೀಡಿಯೋ ವೈರಲ್
ರೈಲಿಗೆ ಡಿಕ್ಕಿ ಹೊಡೆದ ನಂತರ ಲೊಕೋಮೊಟಿವ್ ಕ್ಯಾಬಿನ್ ಒಳಗೆ ಹದ್ದು ಇರುವುದನ್ನು ಕಾಣಬಹುದು. ಘಟನೆಯ ನಂತರ ಲೋಕೋಮೋಟಿವ್ ಪೈಲಟ್ ಈ ಘಟನೆಯ ಬಗ್ಗೆ ರೇಡಿಯೋ ಮೂಲಕ ಮಾಹಿತಿ ನೀಡಿದ್ದು, ಅವರ ಮುಖದ ಮೇಲೆ ಸ್ವಲ್ಪ ಗಾಯವಾಗಿದೆ. ತರಚಿದಂತೆ ಗಾಯಗಳಾಗಿದ್ದು, ಅವರು ಕರ್ತವ್ಯ ಮುಂದುವರೆಸಿದ್ದಾರೆ. ನಂತರ ಅನಂತ್‌ನಾಗ್ ರೈಲು ನಿಲ್ದಾಣದಲ್ಲಿ ರೈಲು ನಿಂತ ನಂತರ ಲೋಕೋಮೋಟಿವ್ ಪೈಲಟ್‌ಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಇತ್ತ ವೇಗವಾಗಿ ಸಾಗುತ್ತಿದ್ದ ರೈಲಿಗೆ ಗುದ್ದಿದ ರಭಸಕ್ಕೆ ಹದ್ದಿಗೂ ಹಾನಿಯಾಗಿದ್ದು, ರೈಲಿನೊಳಗಿದ್ದ ಹದ್ದು ನಡೆಯಲಾಗದೆ ಒಂದು ಕಡೆ ವಾಲಿದ್ದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.
ಕೆಲ ದಿನಗಳ ಹಿಂದೆ ಅಂದರೆ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವೊಂದಕ್ಕೆ ಹದ್ದು ಡಿಕ್ಕಿ ಹೊಡೆದ ಪರಿಣಾಮ ವಿಮಾನ ಪ್ರಯಾಣ ಸ್ಥಗಿತಗೊಂಡಂತ ಘಟನೆ ನಡೆದಿತ್ತು. ಹದ್ದೊಂದು ಆಂಧ್ರಪ್ರದೇಶದ ವಿಜಯವಾಡದಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದ ನಂತರ ವಿಮಾನ ಪ್ರಯಾಣವನ್ನು ಬಂದ್ ಮಾಡಲಾಗಿತ್ತು. ವಿಮಾನ ಟೇಕಾಫ್‌ಗೆ ಮೊದಲು ಈ ಘಟನೆ ನಡೆದಿತ್ತು.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಿದ ಗುಂಪು: ವೀಡಿಯೋ ವೈರಲ್
ಇದನ್ನೂ ಓದಿ: ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿ ಮತ್ತೊಬ್ಬ ಡಾಕ್ಟರ್ ಅಂದರ್: ಒಂದೇ ವಾರದಲ್ಲಿ ಇಬ್ಬರು ವೈದ್ಯರ ಬಂಧನ
