Doctor arrested for terrorism: ಜಮ್ಮು ಕಾಶ್ಮೀರದ ಪೊಲೀಸರು ಹರ್ಯಾಣದ ಫರಿದಾಬಾದ್‌ನಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕವನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೊಬ್ಬ ವೈದ್ಯನನ್ನು ಬಂಧಿಸಲಾಗಿದೆ.
ಭಯೋತ್ಪಾದಕ ಚಟುವಟಿಕೆ; ಒಂದೇ ವಾರದಲ್ಲಿ 2ನೇ ವೈದ್ಯನ ಬಂಧನ
ಜಮ್ಮು ಕಾಶ್ಮೀರದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕವನ್ನು ವಶಕ್ಕೆ ಪಡೆಯಲಾಗಿದ್ದು, ವೈದ್ಯನೋರ್ವನನ್ನು ಬಂಧಿಸಲಾಗಿದೆ. ಮುಜಾಮಿಲ್ ಬಂಧಿತ ವೈದ್ಯ. ಸದ್ಯಕ್ಕೆ ಅಮೋನಿಯಂ ನೈಟ್ರೇಟ್ ಎಂದು ಗುರುತಿಸಲಾದ 350 ಕೇಜಿ ಸ್ಫೋಟಕ ಸಾಮಗ್ರಿಯನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಫರಿದಾಬಾದ್ ಹಾಗೂ ಹರ್ಯಾಣದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ದಾಳಿ ನಡೆಸುವ ರೈಫಲ್‌ನ್ನು ಕೂಡ ಪತ್ತೆ ಮಾಡಲಾಗಿದೆ. ಶ್ರೀನಗರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅನ್ನು ಬೆಂಬಲಿಸುವ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಶ್ಮೀರಿ ವೈದ್ಯರನ್ನು ಪೊಲೀಸರು ಬಂಧಿಸಿದ್ದರು. ಇದಾಗಿ ಕೆಲವು ದಿನಗಳ ನಂತರ ಆತ ನೀಡಿದ ಮಾಹಿತಿ ಮೇರೆಗೆ ಈ ಬೃಹತ್ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ. ಕೆಲ ದಿನಗಳ ಹಿಂದೆ ವೈದ್ಯ ಆದಿಲ್ ಅಹ್ಮದ್ ರಾಥರ್‌ನನ್ನು ಬಂಧಿಸಲಾಗಿತ್ತು.
ಅದಿಲ್ ರಾಥರ್ ವಿಚಾರಣೆ ಬಳಿಕ ಮುಜಮ್ಮಿಲ್ ಶಕೀಲ್ ಬಂಧನ: ಇಬ್ಬರೂ ವೈದ್ಯರು ಕಾಶ್ಮೀರಿಗರು
ಮೂಲಗಳ ಪ್ರಕಾರ ಫರಿದಾಬಾದ್‌ನಲ್ಲಿ ಡಾ. ಆದಿಲ್ ಅಹ್ಮದ್ ರಾಥರ್ ವಿಚಾರಣೆಯ ಸಮಯದಲ್ಲಿ ಆತ ಈ ಸ್ಫೋಟಕಗಳ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಮುಜಮ್ಮಿಲ್ ಶಕೀಲ್ ಎಂದು ಗುರುತಿಸಲಾದ ಇನ್ನೊಬ್ಬ ವೈದ್ಯನ ಬಳಿ ಸಂಗ್ರಹಿಸಲಾಗಿತ್ತು. ಬಂಧಿತ ಶಕೀಲ್ ಕೂಡ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದವನಾಗಿದ್ದು, ಫರಿದಾಬಾದ್‌ನ ಅಲ್-ಫಲಾಹ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಆತನನ್ನು ಇಂದು ಬಂಧಿಸಲಾಗಿದೆ. ಈತನ ಜೊತೆಗೆ ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಮಹಿಳಾ ವೈದ್ಯೆಯನ್ನು ಕೂಡ ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ. ಈಕೆಯ ಕಾರಿನಲ್ಲಿ ರೈಫಲ್ ಪತ್ತೆಯಾದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಸ್ಫೋಟಕಗಳ ಜೊತೆ ಟೈಮರ್‌ಗಳು ಪತ್ತೆ
ಬಂಧಿತರ ಬಳಿ 350 ಕೆಜಿ ಸ್ಫೋಟಕಗಳೊಂದಿಗೆ 20 ಟೈಮರ್‌ಗಳು ಸಹ ಪತ್ತೆಯಾಗಿವೆ ಎಂದು ಫರಿದಾಬಾದ್ ಪೊಲೀಸ್ ಆಯುಕ್ತ ಸತೇಂದರ್ ಕುಮಾರ್ ಗುಪ್ತಾ ತಿಳಿಸಿದ್ದಾರೆ. ಒಂದು ಪಿಸ್ತೂಲ್, ಮೂರು ಮ್ಯಾಗಜೀನ್‌ಗಳು ಮತ್ತು ವಾಕಿ ಟಾಕಿ ಸೆಟ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಜೈಶ್-ಎ-ಮೊಹಮ್ಮದ್ ಬೆಂಬಲಿಸಿ ಪೋಸ್ಟರ್ ಅಂಟಿಸಿದ್ದ ರಾಥರ್
ಅಕ್ಟೋಬರ್ 27 ರಂದು ಶ್ರೀನಗರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅನ್ನು ಬೆಂಬಲಿಸುವ ಪೋಸ್ಟರ್‌ಗಳು ಕಾಣಿಸಿಕೊಂಡವು. ಸ್ಥಳೀಯ ಪೊಲೀಸರು ಈ ವಿಷಯವನ್ನು ತನಿಖೆ ಮಾಡಿದಾಗ ಸಿಸಿಟಿವಿ ದೃಶ್ಯಾವಳಿಗಳಲ್ಲಿ ರಾಥರ್ ಪೋಸ್ಟರ್‌ಗಳನ್ನು ಹಾಕುತ್ತಿರುವುದು ಕಂಡು ಬಂದಿದೆ. ನಂತರ ಅವನನ್ನು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಪತ್ತೆಹಚ್ಚಿ ಕಳೆದ ವಾರ ಬಂಧಿಸಲಾಗಿತ್ತು. ರಾಥರ್ ಕಳೆದ ವರ್ಷ ಅಕ್ಟೋಬರ್‌ವರೆಗೆ ಅನಂತ್‌ನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ. ನಂತರ ಪೊಲೀಸರು ಅನಂತ್‌ನಾಗ್‌ನಲ್ಲಿರುವ ಅವರ ಲಾಕರ್ ಅನ್ನು ಶೋಧಿಸಿದಾಗ, ಒಂದು ಅಸಲ್ಟ್ ರೈಫಲ್ ಪತ್ತೆಯಾಗಿದೆ. ವಿಚಾರಣೆಯ ಸಮಯದಲ್ಲಿ ಆತ ಹಂಚಿಕೊಂಡ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಫರಿದಾಬಾದ್‌ನಲ್ಲಿ ಕಾರ್ಯಾಚರನೆ ನಡೆಸಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಥರ್ ವಿರುದ್ಧ ಈ ಹಿಂದೆ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿಯೂ ಪ್ರಕರಣ ದಾಖಲಾಗಿತ್ತು. ಇಂತಹ ದೇಶದ್ರೋಹಿ ಚಟುವಟಿಕೆಯಲ್ಲಿ ವೈದ್ಯರ ಭಾಗವಹಿಸುವಿಕೆಯೂ ಕಳವಳಕಾರಿಯಾಗಿದ್ದು, ಭಯೋತ್ಪಾದಕ ಜಾಲಗಳು ಈಗ ಹೆಚ್ಚು ವಿದ್ಯಾವಂತ ಉನ್ನತ ಹುದ್ದೆಯಲ್ಲಿರುವ ಉದ್ಯೋಗಸ್ಥರನ್ನು ನೇಮಕ ಮಾಡಿಕೊಳ್ಳುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.
ರಾಷ್ಟ್ರ ರಾಜಧಾನಿಗೆ ಇಷ್ಟು ಹತ್ತಿರದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿದರ ಇವರ ಕಾರ್ಯಾಚರಣೆಯ ಹಿಂದಿನ ಉದ್ದೇಶ ಏನಾಗಿತ್ತು ಎಂಬುದು ಇನ್ನೂ ತಿಳಿದಿಲ್ಲ ಇವರ ಬಗ್ಗೆ ಇನ್ನಷ್ಟು ತಿಳಿಯುವುದಕ್ಕೆ ತನಿಖೆ ನಡೆಯುತ್ತಿವೆ ಜೊತೆಗೆ ರಾಷ್ಟ್ರ ರಾಜಧಾನಿಗೆ ಸಮೀಪದಲ್ಲಿ ಯಾರಿಗೂ ತಿಳಿಯದಂತೆ ಇಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಹೇಗೆ ಸಾಗಿಸಲಾಯಿತು ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಡಿವೋರ್ಸ್ ಪ್ರಕರಣದಲ್ಲಿ ತಿಂಗಳಿಗೆ 6 ಲಕ್ಷ ಪರಿಹಾರ ಕೇಳಿದ ಪತ್ನಿ: ಅರ್ಜಿ ತಿರಸ್ಕರಿಸಿ ನ್ಯಾಯಾಧೀಶರು ಹೇಳಿದ್ದೇನು?
ಇದನ್ನೂ ಓದಿ: ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು: ಶೈಕ್ಷಣಿಕ ಸಾಲ ಮುಗಿಸಲು ಸ್ನೇಹಿತರಿಂದ ಗೋಫಂಡ್ ಅಭಿಯಾನ
