ನವದೆಹಲಿ[ಮಾ.26]: ನ್ಯೂಜಿಲೆಂಡ್‌ನ ಮಸೀದಿಯಲ್ಲಿ ಇತ್ತೀಚೆಗೆ ಗುಂಡಿನ ದಾಳಿ ನಡೆದು 50 ಜನರನ್ನು ಹತ್ಯೆಗೈದ ಪ್ರಕರಣಕ್ಕೆ ಭಾರತದಲ್ಲಿ ಸೇಡು ತೀರಿಸಿಕೊಳ್ಳಲು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರು ಹಾಗೂ ಅಲ್‌ಖೈದಾ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ದಳ ಎಚ್ಚರಿಸಿದೆ. ದೆಹಲಿ, ಮುಂಬೈ ಹಾಗೂ ಗೋವಾದಲ್ಲಿ ಯಹೂದಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಯಬಹುದು ಎಂಬ ಮಾಹಿತಿ ಬಂದಿದ್ದು, ಭದ್ರತೆ ಬಿಗಿಗೊಳಿಸಲಾಗಿದೆ.

ಭಯೋತ್ಪಾದಕರು ದಾಳಿಗೆ ವಾಹನ ಅಥವಾ ಚಾಕು ಬಳಸಬಹುದು. ಹೀಗಾಗಿ ಮುಂಬೈನ ಸಿನೆಗಾಗ್‌ಗಳು, ಇಸ್ರೇಲಿ ದೂತಾವಾಸ, ಕಾನ್ಸುಲೇಟ್‌ ಕಚೇರಿ ಮತ್ತು ಚಬಾಡ್‌ ಹೌಸ್‌ಗಳಿಗೆ ಭದ್ರತೆ ನೀಡಬೇಕು ಎಂದು ಗುಪ್ತಚರ ದಳ ಪೊಲೀಸರಿಗೆ ಸಲಹೆ ನೀಡಿದೆ.

ನ್ಯೂಜಿಲೆಂಡ್‌ಗೆ ಆತಿಥ್ಯ ಕಳೆದುಕೊಳ್ಳುವ ಆತಂಕ!

ಮಾಚ್‌ರ್‍ 20ರಂದು ಐಎಸ್‌ ಉಗ್ರರ ನಡುವೆ ನಡೆದ ಫೋನ್‌ ಸಂಭಾಷಣೆಯನ್ನು ಗುಪ್ತಚರ ದಳ ಆಲಿಸಿದ್ದು, ಅದರಲ್ಲಿ ನ್ಯೂಜಿಲೆಂಡ್‌ನಲ್ಲಿ ಮಾಚ್‌ರ್‍ 25ರಂದು ಮಸೀದಿಯ ಮೇಲೆ ನಡೆದ ದಾಳಿಗೆ ಸೇಡು ತೀರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಪೊಲೀಸರಿಗೆ ಗುಪ್ತಚರ ದಳ ನೀಡಿದ ಎಚ್ಚರಿಕೆಯಲ್ಲಿ, ‘ನಮಗೆ ಬೇರೆ ಬೇರೆ ಮೂಲಗಳಿಂದ ದಾಳಿಯ ಕುರಿತು ಮಾಹಿತಿ ದೊರಕಿದೆ. ರಹಸ್ಯ ಆನ್‌ಲೈನ್‌ ಗ್ರೂಪ್‌ಗಳಲ್ಲಿ ಹಾಗೂ ಚಾಟಿಂಗ್‌ನಲ್ಲಿ ಐಎಸ್‌ ವಕ್ತಾರ ಅಬು ಹಸನ್‌ ಅಲ್‌ ಮುಹಾಜಿರ್‌ ಎಂಬಾತ ನ್ಯೂಜಿಲೆಂಡ್‌ ದಾಳಿಗೆ ಭಾರತದಲ್ಲಿ ಪ್ರತೀಕಾರ ತೆಗೆದುಕೊಳ್ಳಬೇಕು ಎಂಬ ಆಡಿಯೋ ಹಾಗೂ ಮಾಹಿತಿಯನ್ನು ಹಂಚಿಕೊಂಡಿದ್ದಾನೆ’ ಎಂದು ಹೇಳಲಾಗಿದೆ.

ನ್ಯೂಜಿಲೆಂಡ್’ನಲ್ಲಿ ಗುಂಡಿನ ದಾಳಿ: ಬೆಚ್ಚಿ ಬಿದ್ದ ಕ್ರಿಕೆಟ್ ಸಮುದಾಯ

ಮಾಚ್‌ರ್‍ 23ರಂದು ದೊರೆತಿರುವ ಇನ್ನೊಂದು ಸುಳಿವಿನಲ್ಲಿ ಅಲ್‌ಖೈದಾ ಉಗ್ರರು ಭಾರತದ ಕೆಲ ನಗರಗಳಲ್ಲಿರುವ ಯಹೂದಿಗಳ ವಾಸಸ್ಥಾನ ಹಾಗೂ ಸಿನೆಗಾಗ್‌ಗಳ ಮೇಲೆ ‘ಅಸಾಂಪ್ರದಾಯಿಕ’ ಶಸ್ತ್ರಾಸ್ತ್ರ ಬಳಸಿ ದಾಳಿ ನಡೆಸುವ ಕುರಿತು ಮಾಹಿತಿಯಿದೆ. ಒಬ್ಬನೇ ವ್ಯಕ್ತಿ ಚಾಕು ಅಥವಾ ಕಾರು-ಟ್ರಕ್‌ ಬಳಸಿ ದಾಳಿ ನಡೆಸಬಹುದು ಎಂದು ಹೇಳಲಾಗಿದೆ. ಹೀಗಾಗಿ ದೆಹಲಿ, ಗೋವಾ ಹಾಗೂ ಮುಂಬೈನಲ್ಲಿ ಸೂಕ್ಷ್ಮ ಸ್ಥಳಗಳಿಗೆ ಬಿಗಿ ಭದ್ರತೆ ನೀಡಲಾಗಿದೆ.