ಬೆಂಗಳೂರು(ಏ.11): ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಕಾಂಗ್ರೆಸ್ ಆರೋಪದ ಬೆನ್ನ ಹಿಂದೆಯೇ, ಇದೇ ರೀತಿಯ ಅನುಮಾನಾಸ್ಪದ ಘಟನಾವಳಿಗಳು ಮತ್ತೆ ಮುನ್ನೆಲೆಗೆ ಬಂದಿವೆ.

ಕರ್ನಾಟಕದಲ್ಲಿ 2018 ರಲ್ಲಿ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಅವರ ವಿಮಾನ ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಗುವುದರಲ್ಲಿತ್ತು.

ಪೈಲೆಟ್ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದರಲ್ಲಿ ಕೇವಲ 20 ಸೆಕೆಂಡ್ ವಿಳಂಬವಾಗಿದ್ದರೆ ರಾಹುಲ್ ಗಾಂಧಿ ಇದ್ದ ವಿಮಾನ ಅಪಘಾತಕ್ಕೆ ತುತ್ತಾಗಲಿತ್ತು ಎಂದು ವರದಿಯಾಗಿತ್ತು.

ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಭದ್ರತೆ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಅನುಮಾನಾಸ್ಪದ ಮತ್ತು ಕಳಪೆ ನಿರ್ವಹಣೆ ಕುರಿತು ತನಿಖೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು.

ತುಮಕೂರಿನಲ್ಲಿ ನಡೆದಿದ್ದ ಚುನಾವಣಾ ಪ್ರಚಾರದಲ್ಲಿ ಅಭಿಮಾನಿಯೋರ್ವ ದೂರದಿಂದ ಎಸೆದಿದ್ದ ಹೂವಿನ ಹಾರವೊಂದು ಸರಿಯಾಗಿ ರಾಹುಲ್ ಕೊರಳಿಗೆ ಬಿದ್ದಿತ್ತು. ಆಗಲೂ ರಾಹುಲ್ ಭದ್ರತೆ ಕುರಿತು ಹಲವು ಪ್ರಶ್ನೆಗಳು ಎದ್ದಿದ್ದವು.

ಇನ್ನು ಮಧ್ಯಪ್ರದೇಶದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಜಬಲ್ ಪುರ್ ದಲ್ಲಿ ನಡೆದಿದ್ದ ರೋಡ್ ಶೋ ವೇಳೆ ಅಗ್ನಿ ಅವಘಢ ಸಂಭವಿಸಿತ್ತು.

ಇನ್ನು ಈ ಹಿಂದೆಯೂ ಹಲವು ಬಾರಿ ರಾಹುಲ್ ಗಾಂಧಿ ಹತ್ಯೆಯ ಸಂಚು ನಡೆದಿರುವ ಕುರಿತು ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿತ್ತು. ಅಲ್ಲದೇ ರಾಹುಲ್ ಗಾಂಧಿ ಅವರ ಭದ್ರತೆ ಕುರಿತು ಗಂಭೀರ ಚಿಂತನೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ದೇಶದಲ್ಲಿ ಏ.11ರಿಂದ ಮೇ19ರವರೆಗೆ ಏಳು ಹಂತಗಳಲ್ಲಿ ಮತದಾನ, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಕ್ಷೇತ್ರ, ಕರ್ನಾಟಕದಲ್ಲಿ 28.