ನ್ಯೂಯಾರ್ಕ್(ಸೆ.24): ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ಪಕ್ಕದ ತಟ್ಟೆಯಲ್ಲಿ ಬಿದ್ದಿರುವ ಇಲಿಯ ಕುರಿತು ಚಿಂತಿಸುವ ಜಾಯಮಾನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರದ್ದು.

ತಾವು  ಪಾಕಿಸ್ತಾನಕ್ಕಿಂತ ಹೆಚ್ಚು ಭಾರತದ ಕುರಿತು ಆತಂಕಕ್ಕೀಡಾಗಿರುವುದಾಗಿ ಹೇಳುವ ಮೂಲಕ ಪಾಕ್ ಪ್ರಾಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಅಪಹಾಸ್ಯಕ್ಕೀಡಾಗಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಇಮ್ರಾನ್ ಖಾನ್ ವಿಶ್ವಸಂಸ್ಥೆ ಸಾಮಾನ್ಯ ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಪಾಕಿಸ್ತಾನಕ್ಕಿಂತ ಹೆಚ್ಚು ಭಾರತದ ಬಗ್ಗೆ ಆತಂಕಕ್ಕೊಳಗಾಗಿದ್ದೇನೆ ಎಂದು ಹೇಳಿದ್ದಾರೆ. 

ಭಾರತ ಸರಿಯಾದ ದಿಕ್ಕಿನಲ್ಲಿ  ಸಾಗುತ್ತಿಲ್ಲ ಎಂದಿರುವ ಇಮ್ರಾನ್ ಖಾನ್, ಪರಿಸ್ಥಿತಿ ಕೈಮೀರುವುದಕ್ಕೂ ಮುನ್ನ ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಬೇಕು ಎಂದು ವಿಶ್ವಸಮುದಾಯವನ್ನು ಆಗ್ರಹಿಸಿದ್ದಾರೆ.

ಕಳೆದ 6 ವರ್ಷಗಳಲ್ಲಿ ಭಾರತದಲ್ಲಿನ ಬೆಳವಣಿಗೆಗಳು ಭಯಾನಕವಾಗಿದ್ದು, ಇದು ನಮಗೆ ತಿಳಿದಿರುವ ಮಹಾತ್ಮಾ ಗಾಂಧಿ ಹಾಗೂ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಭಾರತವಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಭಾರತವನ್ನು ಹಿಂದು ಸರ್ವೋಚ್ಛ ಸಿದ್ಧಾಂತ ಆಕ್ರಮಿಸಿಕೊಂಡಿದೆ. ಸರ್ವೋಚ್ಛವಾಗಿರುವುದಕ್ಕೆ ಮತ್ತೊಬ್ಬರನ್ನು ದ್ವೇಷಿಸಬೇಕಾಗುತ್ತದೆ. ಈ ಸಿದ್ಧಾಂತವೇ ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ್ದಲ್ಲವೇ ಎಂದು ಇಮ್ರಾನ್ ಪ್ರಶ್ನಿಸಿದ್ದಾರೆ.