ನವದೆಹಲಿ[ಜು.02]: ಎಲ್ಲಾ ಜಾತಿ, ಪಂಥ ಹಾಗೂ ಧರ್ಮವನ್ನೊಳಗೊಂಡ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ ಎಂದು ಹೇಳುವ ಮೂಲಕ ತಾನು ಜಾತ್ಯಾತೀತ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ಟಿಎಂಸಿ ಸಂಸದೆ ನುಸ್ರತ್ ಜಹಾನ್ ಸಮರ್ಥಿಸಿಕೊಂಡಿದ್ದು ಭಾರೀ ಸದ್ದು ಮಾಡಿತ್ತು. ಇದೀಗ ಈ ಸಮರ್ಥನೆಯ ಬೆನ್ನಲ್ಲೇ ಸಾಮಾಜಿಕ ಸೌಹಾರ್ದತೆಯ ಮನೋಭಾವದಿಂದ ಉತ್ತೇಜಿತಗೊಂಡಿರುವ ಇಸ್ಕಾನ್ ಗುರುವಾರ ನಡೆಯಲಿರುವ ರಥಯಾತ್ರೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ನುಸ್ರತ್ ಜಹಾನ್ ರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದೆ.

ಈಗಾಗಲೇ ಇಸ್ಕಾನ್ ಅಧಿಕೃತವಾಗಿ ನೀಡಿರುವ ಆಹ್ವಾನವನ್ನು ಸ್ವೀಕರಿಸಿರುವ ನುಸ್ರತ್ ಜಹಾನ್ ಧನ್ಯವಾದ ತಿಳಿಸಿದ್ದಾರೆ. 1971ರಿಂದಲೂ ಇಸ್ಕಾನ್ ರಾಷ್ಟ್ರಯಾತ್ರೆಯನ್ನು ಆಯೋಜಿಸುತ್ತಾ ಬರುತ್ತಿದೆ. ಈ ಬಾರಿಯ, 48 ನೇ ಆವೃತ್ತಿಯ ಕಾರ್ಯಕ್ರಮವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉದ್ಘಾಟಿಸಲಿದ್ದಾರೆ.

ಉಡುಪಿಗಿಂತಲೂ ನಂಬಿಕೆ ಮಿಗಿಲು

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಇಸ್ಕಾನ್ ವಕ್ತಾರ ರಾಧರಮಣ್ ದಾಸ್ ಸಂಸದೆ ನುಸ್ರತ್ ಗೆ ಧನ್ಯವಾದ ತಿಳಿಸುತ್ತಾ 'ದೇಶದ ಪ್ರಗತಿಯನ್ನು ತೋರಿಸಿದ್ದೀರಿ' ಎಂದಿದ್ದಾರೆ. ಅಲ್ಲದೇ 'ರಥಯಾತ್ರೆ ಸಾಮಾಜಿಕ ಸೌಹಾರ್ದತೆಗೆ ಉದಾಹರಣೆ. ಕೃಷ್ಣನ ರಥವನ್ನು ಮುಸ್ಲಿಂ ಸಹೋದರರು ನಿರ್ಮಿಸುತ್ತಾರೆ. ಕೃಷ್ಣನನ್ನು ಆಲಂಕರಿಸುವ ವಸ್ತ್ರಗಳು ಕೂಡಾ ಅನೇಕ ವರ್ಷಗಳಿಂದ ಮುಸ್ಲಿಂ ಸಹೋದರರೇ ಮಾಡುತ್ತಾ ಬಂದಿದ್ದಾರೆ. ಜಗನ್ನಾಥ, ಬಲರಾಮ ಹಾಗೂ ಸುಭದ್ರ ರಥ ಎಳೆಯಲಾಗುತ್ತಿದ್ದು, ಲಕ್ಷಾಂತರ ಮಂದಿ ಭಕ್ತಾಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ,' ಎಂದು ಅವರು ತಿಳಿಸಿದ್ದಾರೆ. 

ಏನಿದು ವಿವಾದ?

ತೃಣಮೂಲ ಕಾಂಗ್ರೆಸ್ಸಿನ ಸಂಸದೆ ನುಸ್ರತ್ ಜಹಾನ್ ಅವರು ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸುವ ವೇಳೆ ಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಮುಸ್ಲಿಂ ಧರ್ಮಗುರುಗಳು ಆಕ್ಷೇಪ ವ್ಯಕ್ತಪಡಿಸಿ, ಫತ್ವಾ ಹೊರಡಿಸಿದ್ದರು. 

ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ನುಸ್ರತ್ ಜಹಾನ್ "ಎಲ್ಲರನ್ನೂ ಒಳಗೊಂಡ ಭಾರತ"ದ ಪ್ರತಿನಿಧಿ ಎಂದು ಪ್ರತಿಕ್ರಿಯಿಸಿ, "ಜಾತಿ, ವರ್ಣ, ಧರ್ಮದ ತಡೆಗಳನ್ನು ಮೀರಿ ಎಲ್ಲರನ್ನೂ ಒಳಗೊಂಡ ಭಾರತವನ್ನು ಪ್ರತಿನಿಧಿಸುತ್ತೇನೆ" ಎಂಬ ಹೇಳಿಕೆಯನ್ನು ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದ ನುಸ್ರತ್ ಟ್ವೀಟ್ ಮಾಡಿದ್ದಾರೆ. 'ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ; ಆದರೆ ಮುಸ್ಲಿಂ ಆಗಿಯೇ ಉಳಿಯುತ್ತೇನೆ'' ಎನ್ನುವ ಮೂಲಕ ತಾನೊಬ್ಬ ಜಾತ್ಯಾತೀತ ನಾಯಕಿ ಎಂದು ಸಾರಿದ್ದರು.

ನುಸ್ರತ್ ಜಹಾನ್ ರವರ ಈ ಟ್ವೀಟ್ ಭಾರೀ ಮೆಚ್ಚುಗೆ ಗಳಿಸಿತ್ತು.