ಕೋಲ್ಕತಾ [ಜು.1]: ತಾವು ಅನ್ಯ ಧರ್ಮದ ವ್ಯಕ್ತಿಯನ್ನು ವಿವಾಹ ಆಗಿರುವುದಕ್ಕೆ ಇಸ್ಲಾಂ ಮೌಲ್ವಿಗಳು ಹಾಗೂ ಸಂಪ್ರದಾಯವಾದಿಗಳಿಂದ ವಿರೋಧ ವ್ಯಕ್ತವಾಗಿರುವುದಕ್ಕೆ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್‌ ಜಹಾನ್‌ ತಿರುಗೇಟು ನೀಡಿದ್ದಾರೆ.

 ‘ನಾನು ಈಗಲೂ ಮುಸ್ಲಿಂ, ನಾನು ಧರಿಸುವ ಬಟ್ಟೆಯ ಬಗ್ಗೆ ಯಾರೂ ಟೀಕೆ ಮಾಡಬಾರದು. ನಂಬಿಕೆ ಬಟ್ಟೆಗಿಂತಲೂ ಹೊರಗಿನದ್ದು. ಎಲ್ಲರನ್ನೂ ಒಳಗೊಂಡ ಭಾರತ ಜಾತಿ, ನಂಬಿಕೆ ಮತ್ತು ಧರ್ಮವನ್ನು ಮೀರಿದ್ದು ಎಂದು ನುಸ್ರತ್‌ ಜಹಾನ್‌ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ನುಸ್ರತ್‌ ವಿರುದ್ಧ ಮೌಲ್ವಿಗಳ ಟೀಕೆ ಮುಂದುವರಿದಿದೆ. ದೆಹಲಿಯ ಫತೇಪುರಿ ಮಸೀದಿಯ ಶಾಹಿ ಇಮಾಮ್‌ ಮುಖರಂ, ನುಸ್ರತ್‌ ವಿವಾಹವನ್ನು ಮುಸ್ಲಿಮರಾಗಲಿ ಅಥವಾ ಜೈನರು ಒಪ್ಪುವುದಿಲ್ಲ. ನುಸ್ರತ್‌ ದೊಡ್ಡ ಅಪರಾಧ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಮಧ್ಯೆ ನುಸ್ರತ್‌ ಬೆಂಬಲಕ್ಕೆ ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ, ಕಾಂಗ್ರೆಸ್‌ ಮುಖಂಡ ಅಭಿಷೇಕ್‌ ಮುನು ಸಿಂಗ್ವಿ, ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಸೇರಿದಂತೆ ಹಲವು ರಾಜಕೀಯ ಮುಖಂಡರು ನಿಂತಿದ್ದಾರೆ.