ಬೆಂಗಳೂರು [ಆ.16]:  ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ಫೋನ್‌ ಕದ್ದಾಲಿಕೆ ಮಾಡಲಾಗಿತ್ತು ಎಂಬ ಆರೋಪವು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ವಿರುದ್ಧ ಜೆಡಿಎಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಯಾವ ಮುಖ್ಯಮಂತ್ರಿ ಕಾಲದಲ್ಲಿ ಏನೇನಾಗಿದೆ ಎಂಬುದೆಲ್ಲಾ ಗೊತ್ತಿದ್ದು, ಬಿಜೆಪಿಯವರಿಗೆ ಮಾನ-ಮರ್ಯಾದೆ ಇದೆಯಾ? ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕಿಡಿಕಾರಿದರೆ, ಬಿಜೆಪಿ ನೇತೃತ್ವದ ಆಡಳಿತವಿದ್ದು, ಯಾವ ತನಿಖೆ ಬೇಕಾದರೂ ನಡೆಸಲಿ. ನನ್ನ ಹೆಸರು ಯಾವ ಕಾರಣಕ್ಕಾಗಿ ಈ ವಿಚಾರದಲ್ಲಿ ತಳಕು ಹಾಕಿಕೊಂಡಿದೆ ಎಂಬುದು ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಗುರುವಾರ ನಡೆದ 73ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ದೇವೇಗೌಡ, ಬಿಜೆಪಿಯವರಿಗೆ ಬೇರೆ ಕೆಲಸ ಇಲ್ವೇ ಇಲ್ಲ. ಅವರು ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆ. ಯಾವ ಮುಖ್ಯಮಂತ್ರಿ ಕಾಲದಲ್ಲಿ ಏನಾಗಿದೆ, ಯಾವ ರಾಜ್ಯದಲ್ಲಿ ಫೋನ್‌ ಕದ್ದಾಲಿಕೆ ಆಗಿದೆ ಎಂಬುದೆಲ್ಲಾ ತಿಳಿದಿದೆ. ಈ ಬಗ್ಗೆ ಚರ್ಚೆ ಬೇಕಾಗಿಲ್ಲ ಎಂದು ಗರಂ ಆದರು.

ಟೆಲಿಫೋನ್ ಕದ್ದಾಲಿಕೆ: ಸಿಎಂಗೆ ಪತ್ರ ಬರೆತಾರಂತೆ ಮಾಜಿ ಗೃಹ ಸಚಿವ

ಬಿಜೆಪಿಯವರಿಗೆ ಮಾನ-ಮರ್ಯಾದೆ ಇದೆಯಾ? ಫೋನ್‌ ಕದ್ದಾಲಿಕೆ ಏಕೆ? ನೇರವಾಗಿ ಶಾಸಕರನ್ನು ಹೊತ್ತುಕೊಂಡು ಹೋದ ಜನ ಅವರು. ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಕದ್ದಾಲಿಕೆ ಮಾಡಿದ್ದಾರೆ ಎಂಬ ಆರೋಪವು ಸರಿಯಲ್ಲ. ಫೋನ್‌ ಕದ್ದಾಲಿಕೆ ವಿಚಾರದಲ್ಲಿ ತುಂಬ ಮಾತನಾಡಬಲ್ಲೆ ಎಂದು ಆಕ್ರೋಶ ಭರಿತವಾಗಿ ನುಡಿದರು.

ಯಾವುದೇ ತನಿಖೆ ಮಾಡಿ :  ಈ ನಡುವೆ, ಖಾಸಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದೆ. ನನ್ನ ಆಡಳಿತಾವಧಿಯಲ್ಲಿ ಫೋನ್‌ ಕದ್ದಾಲಿಕೆ ಆರೋಪದ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತನಿಖೆ ಬೇಕಾದರೂ ಮಾಡಿಕೊಳ್ಳಬಹುದು ಎಂದು ಹೇಳಿದರು.

6 ತಿಂಗಳ ಹಿಂದೆಯೇ ಫೋನ್ ಟ್ಯಾಪಿಂಗ್ : ದಾಖಲೆ ಬೇಕಾ ಎಂದ ಅಶೋಕ್ ?

ಫೋನ್‌ ಕದ್ದಾಲಿಕೆ ಆರೋಪದ ಕುರಿತು ಸರ್ಕಾರ ಅಗತ್ಯ ಇರುವ ತನಿಖೆ ನಡೆಸಿಕೊಳ್ಳಬಹುದು. ಕದ್ದಾಲಿಕೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ಆದರೂ ತಮ್ಮ ಹೆಸರು ಏಕೆ ತಳುಕು ಹಾಕಿಕೊಂಡಿದೆ ಎಂಬುದು ಗೊತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅವರ ಕೈಯಲ್ಲಿಯೇ ಅಧಿಕಾರ ಇರುವಾಗ ಯಾವ ತನಿಖೆ ಬೇಕಾದರೂ ಮಾಡಿಕೊಳ್ಳಬಹುದು. ನನ್ನ ಅಭ್ಯಂತರವೇನೂ ಇಲ್ಲ ಎಂದರು.

ಇದೇ ವೇಳೆ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಕುಮಾರಸ್ವಾಮಿ, ಕಳೆದ ಒಂದು ವರ್ಷದಿಂದ ಯಾರು ಯಾರು ಏನೇನು ಮಾಡಿದ್ದಾರೆ, ಹೇಗೆ ನಡೆದುಕೊಂಡಿದ್ದಾರೆ ಎಂಬುದು ಗೊತ್ತಿದೆ. ಈ ಸಂಬಂಧ ಅನಗತ್ಯ ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದರು.