ಬೆಂಗಳೂರು [ಆ.15] :  ಆರು ತಿಂಗಳ ಹಿಂದೆಯೇ ಸರ್ಕಾರದಲ್ಲಿ ಫೋನ್ ಟ್ಯಾಪಿಂಗ್ ಆಗಿದೆ ಎಂದ ಆರೋಪ ಮಾಡಿದ್ದೆ.  ಫೋನ್ ಟ್ಯಾಪಿಂಗ್ ಆಗಿರುವುದು ನಿಜ. ಇದಕ್ಕೆ ನಿಮಗೆ ದಾಖಲೆ ಬೇಕಾ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದ್ದಾರೆ. 

ನಾನು ಗೃಹ ಮಂತ್ರಿಯಾಗಿದ್ದಾಗ ಇಲಾಖೆಯನ್ನು ಚೆನ್ನಾಗಿ ನೋಡಿದ್ದೇನೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಭಾಸ್ಕರ್ ರಾವ್ ಅವರು ಆರೋಪ ಮಾಡಿರುವುದು ನಿಜ. ಅವರ ಫೋನ್ ಟ್ಯಾಪ್ ಆಗಿದೆ ಎಂದರು. 

ಫೋನ್ ಕದ್ದಾಲಿಕೆ : ಸ್ವತಂತ್ರ ತನಿಖೆಗೆ ಕಮಿಷನರ್‌ ಶಿಫಾರಸು

ಸಮಾಜವನ್ನು ಕಾಯುವ ಪೋಲಿಸರದೇ ಪೋನ್ ಟ್ಯಾಪ್ ಮಾಡಿದ್ದಾರೆ ಎಂದರೆ ಅವರು ಬೇರೆಯವರನ್ನು ಬಿಡುತ್ತಾರಾ?  ಈಗಾಗಲೇ ಫೋನ್ ಟ್ಯಾಪ್ ಆಗಿರುವುದು ಸಾಬೀತಾಗಿದ್ದು ಈ ಬಗ್ಗೆ ತನಿಖೆಗೂ ಒತ್ತಾಯಿಸಿದ್ದಾರೆ ಎಂದರು. 

ಆರು ತಿಂಗಳ ಹಿಂದೆ ನಾನು ಈ ವಿಚಾರ ಪ್ರಸ್ತಾಪಿಸಿದ್ದೆ.  ಆದರೆ ಅಶೋಕ್ ಜೋಕ್ ಮಾಡಿದ್ದಾರೆ ಅಂದುಕೊಂಡಿದ್ದರು.  ಆದರೆ ಇದೀಗ ಈ ವಿಚಾರ ದೊಡ್ಡದಾಗಿದೆ ಎಂದು ಪದ್ಮನಾಭನಗರ ಶಾಸಕ ಅಶೋಕ್ ಹೇಳಿದರು. 

ರಾಜ್ಯದಲ್ಲಿ ಇದೀಗ ಫೋನ್ ಕದ್ದಾಲಿಕೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ಹಿಂದೆ ಮೈತ್ರಿ ಸರ್ಕಾರದ ಮೇಲೆ ಈ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದೆ.