ಹಾಸನ[ಜು. 29]  ದೋಸ್ತಿ ಸರ್ಕಾರ ಪತನಕ್ಕೆ ಎಚ್‌. ಡಿ ರೇವಣ್ಣ ಕಾರಣ ಎಂಬ ಆರೋಪಕ್ಕೆ ಅವರ ಪುತ್ರ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಸರ್ಕಾರ ಬೀಳಲು ನಮ್ಮ ತಂದೆ ಕಾರಣರಲ್ಲ. ಶಾಸಕರು ಸ್ವಾರ್ಥಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ. ಅಧಿಕಾರ, ಹಣದ ಆಸೆಗೆ ಅತೃಪ್ತರು ರಾಜೀನಾಮೆ ಕೊಟ್ಟಿರಬಹುದು ಎನ್ನುತ್ತ ತಂದೆ ರೇವಣ್ಣ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಶುರುವಾಯ್ತು ಬೇಡಿಕೆ, ಉತ್ತರ ಕರ್ನಾಟಕಕ್ಕೊಂದು ಡಿಸಿಎಂ ಬೇಕು

ಅತೃಪ್ತ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿರುವ ಸಂಸದ ಪ್ರಜ್ವಲ್ ರೇವಣ್ಣ , ಅವರು ಹಣ ಅಧಿಕಾರಕ್ಕಾಗಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಹಣ ಪಡೆದು ಬೇರೆ ಪಕ್ಷಕ್ಕೆ ಹೋಗೋದು ತಪ್ಪು. ಅನರ್ಹ ವಿಚಾರದಲ್ಲಿ ಸ್ಪೀಕರ್ ತೆಗೆದುಕೊಂಡಿರೋ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. 6 ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಆಗ ಅವರಿಗೆ ಜನರು ಉತ್ತರ ನೀಡಲಿದ್ದಾರೆ. ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು.

ಲೋಕೋಪಯೋಗಿ ಇಲಾಖೆಯಲ್ಲಿ ತಂದೆ ರೇವಣ್ಣ ಸಾಕಷ್ಟು ಕೆಲಸ ಮಾಡಿದ್ದಾರೆ. ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂಬ ದಾಖಲೆ ಬಿಡುಗಡೆ ಮಾಡಲು ಸಿದ್ಧ. ಸದ್ಯಕ್ಕೆ ಬಿಜೆಪಿ ಅವರು ಸರಕಾರ ರಚನೆ ಮಾಡಿದ್ದಾರೆ. ಅವರು ಸರಕಾರ ಎಷ್ಟು ದಿನ ನಡೆಸುತ್ತಾರೋ ನೋಡೋಣ. ಅಲ್ಲೂ ಕೂಡ ಸಮಸ್ಯೆ ಇದ್ದೆ ಇದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಸುಳ್ಳು ಅಫಿಡವಿಟ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ನನಗೆ ನ್ಯಾಯಾಲಯದಿಂದ ಇಲ್ಲಿಯವರೆಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಉತ್ತರಿಸಿದರು.