ಪೆಟ್ರೋಲ್, ಡೀಸೆಲ್ ದರ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಗ್ರಾಹಕರ ಮೇಲಿನ ಹೊರೆಯನ್ನು ತಗ್ಗಿಸುವುದು ಕೇಂದ್ರ ಸರಕಾರಕ್ಕೆ ದೊಡ್ಡ ಸವಾಲಾಗಿದೆ. ಏತನ್ಮಧ್ಯೆ, ಸರಕಾರ ಮನಸು ಮಾಡಿದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆಯನ್ನು 25 ರೂ.ವರೆಗೂ ತಗ್ಗಿಸಬಹುದೆಂದು ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಹೊಸದಿಲ್ಲಿ: ಪೆಟ್ರೋಲ್, ಡೀಸೆಲ್ ದರ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಗ್ರಾಹಕರ ಮೇಲಿನ ಹೊರೆಯನ್ನು ತಗ್ಗಿಸುವುದು ಕೇಂದ್ರ ಸರಕಾರಕ್ಕೆ ದೊಡ್ಡ ಸವಾಲಾಗಿದೆ. ಏತನ್ಮಧ್ಯೆ, ಸರಕಾರ ಮನಸು ಮಾಡಿದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆಯನ್ನು 25 ರೂ.ವರೆಗೂ ತಗ್ಗಿಸಬಹುದೆಂದು ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಇಂಧನ ಬೆಲೆ ಏರಿಕೆ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಚಿದಂಬರಂ, ತೈಲ ಬೆಲೆಯ 25 ರೂ.ನಷ್ಟು ಶ್ರೀ ಸಾಮಾನ್ಯನಿಗೆ ಸೇರಿರುವ ಹಣವೆಂದು ಅವರು ಹೇಳಿದ್ದಾರೆ.
'ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಕೇಂದ್ರ ಸರಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಸುಮಾರು 15 ರೂ.ನಷ್ಟು ಉಳಿಸುತ್ತಿದೆ. 10 ರೂ.ನಷ್ಟು ಹೆಚ್ಚುವರಿ ತೆರಿಗೆಯನ್ನು ಪ್ರತೀ ಲೀಟರ್ ಪೆಟ್ರೋಲ್ ಮೇಲೆ ವಿಧಿಸಲಾಗುತ್ತಿದೆ. ಇವೆರಡನ್ನೂ ಸೇರಿಸಿ ಲೀಟರ್ ಪೆಟ್ರೋಲ್ ಮೇಲೆ 25 ರೂ. ಇಳಿಸಬಹುದು. ಕೇವಲ 1 ಅಥವಾ 2 ರೂ. ಇಳಿಸಿ, ಸರಕಾರ ಜನರನ್ನು ವಂಚಿಸುತ್ತಿದೆ,' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಸುಂಕದ ಪರಿಷ್ಕರಣೆಯನ್ನು 19 ದಿನಗಳ ತಡೆಯೊಡ್ಡಲಾಗಿತ್ತು. ಇದೀಗ ಮತ್ತೆ ಪರಿಷ್ಕರಣೆ ಆರಂಭಿಸಲಾಗಿದ್ದು, ಕಳೆದ 9 ದಿನಗಳಲ್ಲಿ ಸ್ಥಳೀಯ ಮಾರಾಟ ತೆರಿಗೆ ಹಾಗೂ ವ್ಯಾಟ್ ಸೇರಿ ಪೆಟ್ರೋಲ್ ದರ 2.54 ರೂ. ಹಾಗೂ ಡೀಸೆಲ್ ದರ 2.15 ರೂ.ನಷ್ಟು ಏರಿಕೆಯಾಗಿವೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 76.87 ರೂ. ಆಗಿದ್ದು, ಡೀಸೆಲ್ ದರ 68.06 ರೂ. ತಲುಪಿದ್ದು, ಸಾರ್ವಕಾಲಿಕ ಗರಿಷ್ಠ ದರ ದಾಖಲಾಗಿದೆ.
