ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳಕ್ಕೆ ಕೇಂದ್ರದ ಕಡಿವಾಣ

Petrol Diesel Prices
Highlights

ಪೆಟ್ರೋಲ್‌ ಬೆಲೆ 4 ವರ್ಷದ ಗರಿಷ್ಠ ಮತ್ತು ಡೀಸೆಲ್‌ ದರ ಸಾರ್ವಕಾಲಿಕ ಗರಿಷ್ಠ ಮಟ್ಟತಲುಪಿ ಗ್ರಾಹಕರನ್ನು ಹೈರಾಣಾಗಿರುವ ಸುದ್ದಿಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಮುಂದಿನ ಸೂಚನೆವರೆಗೂ ತೈಲೋತ್ಪನ್ನಗಳ ದರ ಏರಿಕೆ ಮಾಡದಂತೆ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳಿಗೆ ಸೂಚಿಸಿದೆ ಎನ್ನಲಾಗಿದೆ.

ನವದೆಹಲಿ: ಪೆಟ್ರೋಲ್‌ ಬೆಲೆ 4 ವರ್ಷದ ಗರಿಷ್ಠ ಮತ್ತು ಡೀಸೆಲ್‌ ದರ ಸಾರ್ವಕಾಲಿಕ ಗರಿಷ್ಠ ಮಟ್ಟತಲುಪಿ ಗ್ರಾಹಕರನ್ನು ಹೈರಾಣಾಗಿರುವ ಸುದ್ದಿಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಮುಂದಿನ ಸೂಚನೆವರೆಗೂ ತೈಲೋತ್ಪನ್ನಗಳ ದರ ಏರಿಕೆ ಮಾಡದಂತೆ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳಿಗೆ ಸೂಚಿಸಿದೆ ಎನ್ನಲಾಗಿದೆ.

ಹೀಗಾಗಿ ದೈನಂದಿನ ತೈಲ ದರ ಪರಿಷ್ಕರಣೆ ನೀತಿ ಅನ್ವಯ ಅಂತಾರಾಷ್ಟ್ರೀಯ ಮಾರುಕಟ್ಟೆಬೆಲೆಗೆ ಅನ್ವಯವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಏರಿಸಬೇಕಿದ್ದ ಕಂಪನಿಗಳು, ಈ ಹೊರೆಯನ್ನು ತಾವೇ ಹೊರಬೇಕಿದೆ. ಮೂಲಗಳ ಪ್ರಕಾರ ಗರಿಷ್ಠ 1 ರೂ.ವರೆಗಿನ ಏರಿಕೆಯನ್ನು ನೀವೇ ಹೊತ್ತುಕೊಳ್ಳಿ ಎಂದು ಸರ್ಕಾರ, ತೈಲ ಕಂಪನಿಗಳಿಗೆ ಅನೌಪಚಾರಿಕವಾಗಿ ಸೂಚಿಸಿದೆ ಎನ್ನಲಾಗಿದೆ. ಬುಧವಾರ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀ.ಗೆ 75.15 ರು. ಮತ್ತು ಡೀಸೆಲ್‌ ದರ ಲೀ.ಗೆ 66.06 ರು. ಇತ್ತು.

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ವರ್ಷ ಮಹತ್ವದ ವಿಧಾನಸಭಾ ಚುನಾವಣೆಗಳು ನಡೆಯಲಿಕ್ಕಿವೆ. ಈ ಹಂತದಲ್ಲಿ ತೈಲ ಬೆಲೆ ಏರಿಕೆಯನ್ನು ವಿಪಕ್ಷಗಳು ಪ್ರಮುಖ ವಿಷಯವಾಗಿ ಮಾಡಿಕೊಂಡು ಬೀದಿಗೆ ಇಳಿದರೆ ಅದು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಗೆಲುವಿನ ಸಾಧ್ಯತೆಯನ್ನು ದೂರ ಮಾಡುವ ಸಾಧ್ಯತೆ ಇದೆ. ಹೀಗಾಗಿಯೇ ತಕ್ಷಣಕ್ಕೆ ಬೆಲೆ ಏರಿಕೆ ಮಾಡದಂತೆ ಸರ್ಕಾರ ತೈಲ ಕಂಪನಿಗಳಿಗೆ ಸೂಚಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಬ್ಲೂಬರ್ಗ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಹಾಲಿ ಇರುವ ದರವನ್ನು ಕಡಿಮೆ ಮಾಡದೇ ಇದ್ದರೂ, ಮುಂದೆ ಬೆಲೆ ಏರಿಕೆ ಆಗದಂತೆ ತಡೆಯಲು ಕೇಂದ್ರ ಹಣಕಾಸು ಸಚಿವಾಲಯ ಮತ್ತು ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಈ ವೇಳೆ ತೈಲೋತ್ಪನ್ನಗಳ ಮೇಲಿನ ಸುಂಕ ಇಳಿಕೆ ಮತ್ತು ಬಂಕ್‌ಗಳಲ್ಲಿ ವಿತರಕರಿಗೆ ನೀಡುವ ಕಮೀಷನ್‌ ದರ ಇಳಿಕೆ ಮಾಡುವ ಗ್ರಾಹಕರ ಹೊರೆ ಕಡಿಮೆ ಮಾಡುವ ಸಲಹೆ ಕೇಳಿಬಂದಿದ್ದವು. ಆದರೆ ಜಿಎಸ್‌ಟಿ ಜಾರಿ ಬಳಿಕ ಆದಾಯದ ಕೊರತೆ ಎದುರಿಸುತ್ತಿರುವ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಮತ್ತೊಂದೆಡೆ ಕಮೀಷನ್‌ ಕಡಿಮೆ ಮಾಡಿದರೆ ಬಂಕ್‌ ಮಾಲೀಕರು ಮುಷ್ಕರ ನಡೆಸುವ ಸಾಧ್ಯತೆಯೂ ಇರುವ ಕಾರಣ, ಹೊರೆಯನ್ನು ತೈಲ ಕಂಪನಿಗಳಿಗೇ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

loader