ಲಂಡನ್‌[ಸೆ.15]: ವಿಶ್ವ ಪಾರಂಪರಿಕ ಸ್ಥಳವಾದ 18ನೇ ಶತಮಾನದ ಬ್ರಿಟನ್‌ನ ಬ್ಲೆನ್‌ಹೀಮ್‌ ಅರಮನೆಯಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದ್ದ 18 ಕ್ಯಾರೆಟ್‌ ಬಂಗಾರದ ಕಮೋಡ್‌ ಅನ್ನೇ ದುಷ್ಕರ್ಮಿಗಳು ಕದ್ದೊಯ್ದಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಯುನೆಸ್ಕೋದಿಂದ ವಿಶ್ವಪಾರಂಪರಿಕ ಸ್ಥಳ ಎಂಬ ಖ್ಯಾತಿ ಪಡೆದ ಬ್ಲೆನ್‌ಹೀಮ್‌ ಪ್ಯಾಲೆಸ್‌ಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಈ ಪ್ರಕರಣ ಸಂಬಂಧ 66 ವರ್ಷದ ವೃದ್ಧನೊಬ್ಬನನ್ನು ಬಂಧಿಸಿದ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ಸಾರ್ವಜನಿಕರ ಬಳಕೆಗೆ ಚಿನ್ನದ ಕಮೋಡ್!

ಬೆಳಗಿನ ಜಾವ 4.50ರ ಸುಮಾರಿಗೆ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದ ಬ್ಲೆನ್‌ಹೀಮ್‌ ಅರಮನೆಯನ್ನು ಧ್ವಂಸಗೊಳಿಸಿ ಚಿನ್ನದ ಕಮೋಡ್‌ ಅನ್ನು ಹೊತ್ತೊಯ್ಯಲಾಗಿದೆ. ಈ ಬಂಗಾರದ ಶೌಚಾಲಯಕ್ಕೆ ಕಟ್ಟಡದ ನೀರಿನ ಸಂಪರ್ಕ ಅಳವಡಿಸಲಾಗಿದ್ದರಿಂದ ಶೌಚಾಲಯ ಹೊತ್ತೊಯ್ದಿದ್ದರಿಂದ ಕಟ್ಟಡದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿ ಹಾನಿಯಾಗಿದೆ. ಕಳ್ಳತನವಾದ ಚಿನ್ನದ ಶೌಚಾಲಯದ ಪತ್ತೆಗಾಗಿ ಅಗತ್ಯ ತನಿಖೆ ಆರಂಭಿಸಲಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಮ್ಯೂಸಿಯಂನಲ್ಲಿ ಚಿನ್ನದ ಟಾಯ್ಲೆಟ್‌!

ಇಟಲಿಯ ಕಲಾವಿದ ಕ್ಯಾಟೆಲನ್‌ ಅವರಿಂದ ನಿರ್ಮಿಸಲಾದ ಈ ಶೌಚಾಲಯವನ್ನು ಒಮ್ಮೆ ಅಮೆರಿಕದ ನ್ಯೂಯಾರ್ಕ್ನ ಗುಗೆನ್‌ಹೀಮ್‌ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಈ ಕಮೋಡ್‌ಗೆ ಕ್ಯಾಟೆಲನ್‌ ಅವರು ಅಮೆರಿಕ ಎಂದು ಹೆಸರಿಟ್ಟಿದ್ದರು.