ಲಂಡನ್‌[ಮೇ.04]: ಹಿಂದೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ನೀಡಲು ಉದ್ದೇಶಿಸಿದ್ದ ಚಿನ್ನದ ಟಾಯ್ಲೆಟ್‌ ಅನ್ನು ಬ್ರಿಟನ್‌ನ ಐಷಾರಾಮಿ ಅರಮನೆಯೊಂದರಲ್ಲಿ ಅಳವಡಿಸಲಾಗುತ್ತಿದೆ.

ಇಟಲಿಯನ್‌ ಕಲಾವಿದ ಮೌರಿಜಿಯೊ ಕ್ಯಾಟ್ಲಾನ್‌ ಎಂಬಾತ 18 ಕ್ಯಾರೆಟ್‌ ಚಿನ್ನದ ಟಾಯ್ಲೆಟ್‌ ಅನ್ನು ನಿರ್ಮಿಸಿ ಅದಕ್ಕೆ ‘ಅಮೆರಿಕ’ ಎಂದು ಹೆಸರು ನೀಡಿದ್ದ. ಗುಗೆನ್ಹೀಮ್‌ ಮ್ಯೂಸಿಯಂ ಈ ಟಾಯ್ಲೆಟ್‌ ಅನ್ನು ಡೊನಾಲ್ಡ್‌ ಟ್ರಂಪ್‌ ಅವರಿಗೆ ನೀಡುವುದಾಗಿ ಆಫರ್‌ ನೀಡಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಈ ಚಿನ್ನದ ಟಾಯ್ಲೆಟ್‌ ಅನ್ನು ಬ್ರಿಟನ್‌ನ ಆಕ್ಸ್‌ಫರ್ಡ್‌ಶೈರ್‌ನಲ್ಲಿರುವ ಬ್ಲೆನ್ಹೇಮ್‌ ಅರಮನೆಯಲ್ಲಿ ಅಳವಡಿಸಲಾಗುತ್ತಿದೆ.

ಇನ್ನೊಂದು ವಿಶೇಷವೆಂದರೆ ಬ್ರಿಟನ್‌ ಮಾಜಿ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ ಜನಿಸಿದ ಕೋಣೆಯ ಪಕ್ಕವೇ ಈ ಟಾಯ್ಲೆಟ್‌ ಅನ್ನು ಅಳವಡಿಸಲಾಗುತ್ತಿದೆ. ಬ್ಲೆನ್ಹೇಮ್‌ ಅರಮನೆಯಲ್ಲಿ 300 ವರ್ಷಗಳಿಂದ ನೆಲೆಸಿರುವ ಮಾಲ್ರ್ಬರೋ ರಾಜ ಮನೆತನ ಈ ಟಾಯ್ಲೆಟ್‌ ಅನ್ನು ಬಳಸಿಕೊಳ್ಳಲಿದೆ. ಅಲ್ಲದೇ ಅರಮನೆಗೆ ಭೇಟಿ ನೀಡುವ ಸಾರ್ವಜನಿಕರು ಸಹ ಚಿನ್ನದ ಟಾಯ್ಲೆಟ್‌ ಬಳಸಬಹುದಾಗಿದೆ.

50 ಕೇಜಿ ಚಿನ್ನ, 10 ಕೋಟಿ ಬೆಲೆ

18 ಕ್ಯಾರೆಟ್‌ ಚಿನ್ನದಿಂದ ಟಾಯ್ಲೆಟ್‌ ನಿರ್ಮಿಸಲಾಗಿದೆ. ಟಾಯ್ಲೆಟ್‌ ಸುಮಾರು 50 ಕೆ.ಜಿ.ಯಷ್ಟುತೂಕವಿದೆ. ಈ ಟಾಯ್ಲೆಟ್‌ ನಿರ್ಮಾಣಕ್ಕೆ ಸುಮಾರು 10 ಕೋಟಿ ರು. ವೆಚ್ಚವಾಗಿತ್ತು. ಈಗಿನ ಚಿನ್ನದ ದರದಲ್ಲಿ ಇದರ ಮೌಲ್ಯ ಸುಮಾರು 17 ಕೋಟಿ ರು. ಆಗಲಿದೆ.

ನ್ಯೂಯಾರ್ಕ್ನ ಗುಗೆನ್ಹೀಮ್‌ ಮ್ಯೂಸಿಯಂನಲ್ಲಿ 2016ರಲ್ಲಿ ಚಿನ್ನದ ಟಾಯ್ಲೆಟ್‌ ಅನ್ನು ಅಳವಡಿಸಲಾಗಿತ್ತು. ಚಿನ್ನದ ಟಾಯ್ಲೆಟ್‌ ವೀಕ್ಷಿಸಲು ಬರುವವರನ್ನು ತಪಾಸಣೆ ಮಾಡಿ ಒಬ್ಬರನ್ನು ಮಾತ್ರ ಒಳಗೆ ಬಿಡಲಾಗುತ್ತಿತ್ತು. ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಮಂದಿ ಚಿನ್ನದ ಟಾಯ್ಲೆಟ್‌ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಇಷ್ಟುದಿನ ಕೇವಲ ವೀಕ್ಷಣೆಗಷ್ಟೇ ಸೀಮಿತವಾಗಿದ್ದ ಚಿನ್ನದ ಟಾಯ್ಲೆಟ್‌ ಇದೀಗ ದೈನಂದಿನ ಬಳಕೆಗೆ ಉಪಯೋಗವಾಗಲಿದೆ.