ನವದೆಹಲಿ[ಸೆ.26]: ಅಮೆರಿಕದ ಹೂಸ್ಟನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ‘ಹೌಡಿ ಮೋದಿ’ ರಾರ‍ಯಲಿಗೆ ಭಾರಿ ಜನಸ್ತೋಮ ಸೇರಿತ್ತು. ಸ್ವತಃ ಅಮೆರಿಕದ ಅಧ್ಯಕ್ಷರು ಮೋದಿಯವರನ್ನು ಹಾಡಿ ಹೊಗಳಿದರು. ಒಟ್ಟಿನಲ್ಲಿ ಮೋದಿಯವರ ಅಮೆರಿಕ ಭೇಟಿ ಅಲ್ಲಿ ದೊಡ್ಡ ಹವಾ ಸೃಷ್ಟಿಸಿದೆ. ಆದರೆ, ಇದೇನೂ ದೊಡ್ಡ ವಿಷಯವಲ್ಲ. 1954ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರು ಮತ್ತು ಪುತ್ರಿ ಇಂದಿರಾ ಗಾಂಧಿ ಅಮೆರಿಕಕ್ಕೆ ತೆರಳಿದ್ದಾಗ ಇದಕ್ಕಿಂತ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂಬರ್ಥದಲ್ಲಿ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಮಾಡಿದ ಟ್ವೀಟ್‌ ಈಗ ಎಲ್ಲೆಡೆ ವೈರಲ್‌ ಆಗಿದೆ.

ವೈರಲ್ ಚೆಕ್| ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ಅಮೆರಿಕದಲ್ಲಿ 1954ರಲ್ಲಿ ನೆಹರು ಮತ್ತು ಇಂದಿರಾ ಗಾಂಧಿ. ಯಾವುದೇ ಪಿಆರ್‌ ಪ್ರಯತ್ನಗಳಿಲ್ಲದೆ, ಎನ್‌ಆರ್‌ಐಗಳನ್ನು ಸೇರಿಸುವ ವಿಶೇಷ ಕಸರತ್ತಿಲ್ಲದೆ ಹಾಗೂ ಮಾಧ್ಯಮದಲ್ಲಿ ದೊಡ್ಡ ಪ್ರಚಾರವಿಲ್ಲದೆ ಹೇಗೆ ಅಮೆರಿಕದ ಜನರು ನೆಹರು ಅವರನ್ನು ನೋಡಲು ಕುತೂಹಲದಿಂದ ಸೇರಿದ್ದರು ನೋಡಿ’ ಎಂದು ಸೆ.23ರಂದು ಶಶಿ ತರೂರ್‌ ಇಲ್ಲಿರುವ ಫೋಟೋ ಹಾಕಿ ಟ್ವೀಟ್‌ ಮಾಡಿದ್ದಾರೆ. ಅದು ಸಾವಿರಾರು ಬಾರಿ ರೀಟ್ವೀಟ್‌ ಆಗಿ, ಎಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.

ಆದರೆ, ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್‌ ಡೆಸ್ಕ್‌ನವರು ಆಳಕ್ಕಿಳಿದು ಶೋಧಿಸಿದಾಗ ಇದು ಅಮೆರಿಕದ ಫೋಟೋವೇ ಅಲ್ಲ, ರಷ್ಯಾದ ಫೋಟೋ ಎಂಬುದು ತಿಳಿದುಬಂದಿದೆ. 1955ರಲ್ಲಿ ನೆಹರು ಮತ್ತು ಇಂದಿರಾ ಗಾಂಧಿ ರಷ್ಯಾಕ್ಕೆ ತೆರಳಿದ್ದರು. ಆಗಿನ ಫೋಟೋ ಇದು. ಈ ಫೋಟೋದೊಂದಿಗೆ ರಷ್ಯಾದ ಮ್ಯಾಗ್ನಿತೋಗೋಸ್ಕ್‌ರ್‍ ಮೆಟಲ್‌ ದಿನಪತ್ರಿಕೆಯಲ್ಲಿ ಪ್ರಕಟವಾದ 1955ರ ಲೇಖನ ಕೂಡ ಲಭ್ಯವಾಗಿದೆ. ಇದರೊಂದಿಗೆ ಶಶಿ ತರೂರ್‌ ಸುಳ್ಳು ಟ್ವೀಟ್‌ ಮಾಡಿ ಮುಜುಗರಕ್ಕೊಳಗಾಗಿದ್ದಾರೆ.