ಇಂದಿನ ಪಂಚರಾಜ್ಯಗಳ ಚುನಾವಣಾ ಫಲಿತಾಂಶವು ಆಯಾ ರಾಜ್ಯಗಳಲ್ಲಿ ನೂತನ ಸರ್ಕಾರವನ್ನು ಸ್ಥಾಪಿಸಲು ಮಾತ್ರ ಸೀಮಿತವಾಗಿರುವುದಿಲ್ಲ. ಜೊತೆಗೆ ಎಲ್ಲರ ಬಾಯಲ್ಲಿ ಕೇಳಿಬರುತ್ತಿರುವ ಮಹಾಗಠಬಂಧನದ ಹಣೆಬರಹವನ್ನೂ ಇದು ನಿರ್ಧರಿಸುತ್ತದೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಮಹಾಗಠಬಂಧನಕ್ಕೆ ಬಿಜೆಪಿ ವಿರುದ್ಧ ಹೋರಾಡಲು ಪ್ರಾಪ್ತವಾಗುವ ಸಾಮರ್ಥ್ಯವನ್ನೂ ನಿರ್ಧರಿಸುತ್ತದೆ.

ಕಾಂಗ್ರೆಸ್‌ನ ಮರುಹುಟ್ಟಿಗೆ ಅವಕಾಶ

ಅದರಲ್ಲೂ ಮೂರು ಹಿಂದಿ ರಾಜ್ಯಗಳಾದ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢಗಳಲ್ಲಿ ಬಿಜೆಪಿ-ಕಾಂಗ್ರೆಸ್‌ ನೇರ ಹಣಾಹಣಿ ನಡೆಸಿರುವುದರಿಂದ ತೀವ್ರ ಕುತೂಹಲವಿದೆ. ಇವುಗಳಲ್ಲಿ 2 ರಾಜ್ಯಗಳನ್ನು ಬಿಜೆಪಿ ಕಳೆದುಕೊಂಡರೂ ಅದು ಬಹುತೇಕ ಕಳೆದುಹೋಗಿದ್ದ ಕಾಂಗ್ರೆಸ್‌ನ ಮರುಹುಟ್ಟು ಎಂದೇ ಪರಿಗಣಿತವಾಗುತ್ತದೆ. ಉತ್ತರ ಪ್ರದೇಶದಂತಹ ಮಹಾ ರಾಜ್ಯದಲ್ಲಿ 2019ರ ಮಹಾ ಹೋರಾಟದಲ್ಲಿ ಏರಿಳಿತಗಳು ಉಂಟಾಗುವಂತೆ ಮಾಡುವ ಶಕ್ತಿಯನ್ನು ಈ ರಾಜ್ಯಗಳ ಫಲಿತಾಂಶ ಹೊಂದಿದೆ.

ಪಂಚರಾಜ್ಯ ಫಲಿತಾಂಶ ಇಂದು : ಯಾರಿಗೆ ಗೆಲುವು, ಯಾರಿಗೆ ಸೋಲು..?

ಸದ್ಯ ಸಣ್ಣಸಣ್ಣ ಸ್ಥಳೀಯ ರಾಜಕೀಯ ಪಕ್ಷಗಳೂ ಕಾಂಗ್ರೆಸ್‌ಗೆ ಸಡ್ಡು ಹೊಡೆಯುವ ರೀತಿಯ ಪರಿಸ್ಥಿತಿಯಿದೆ. ಆದರೂ ಅವುಗಳೊಂದಿಗೆ ಕಾಂಗ್ರೆಸ್‌ ತನ್ನ ನಿಲುವನ್ನು ಸಡಿಲಿಸಿಲ್ಲ. ಇದೇ ಕಾರಣದಿಂದಾಗಿ ತಮಗೆ ಸರಿಯಾದ ಪಾಲು ದೊರಕದ ಹೊರತೂ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡದಿರಲು ಬಿಎಸ್‌ಪಿ (ಬಹುಜನ ಸಮಾಜವಾದಿ ಪಕ್ಷ) ಮತ್ತು ಎಸ್‌ಪಿ (ಸಮಾಜವಾದಿ ಪಕ್ಷ) ನಿರ್ಧರಿಸಿದ್ದವು. 2019ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಮೂರು ರಾಜ್ಯಗಳ ಸೀಟು ಹಂಚಿಕೆಯಲ್ಲಿ ಸಿಂಹಪಾಲು ಬೇಕೆಂದು ಅಲ್ಲಿನ ಈ ಎರಡು ಪ್ರಮುಖ ಪಕ್ಷಗಳು ಬೇಡಿಕೆ ಇಟ್ಟಿದ್ದವು. ಆದರೆ, ಹೆಚ್ಚೇನೂ ಒತ್ತಡಕ್ಕೆ ಒಳಗಾಗದೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೂಕ್ಷ್ಮವಾಗಿ ಈ ಪ್ರಸ್ತಾಪವನ್ನು ನಿರಾಕರಿಸಿದ್ದರು ಮತ್ತು ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಣಯಕ್ಕೆ ಬಂದಿದ್ದರು. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಯಾವುದೇ ಪ್ರಬಲ ಹಿಡಿತ ಇಲ್ಲದ ಎಸ್ಪಿ ಮತ್ತು ಬಿಎಸ್ಪಿಯ ಷರತ್ತನ್ನು ಒಪ್ಪಿಕೊಳ್ಳುವ ಯಾವ ದರ್ದೂ ರಾಹುಲ್‌ಗೆ ಇರಲಿಲ್ಲ.

ರಾಜಸ್ಥಾನದಲ್ಲಿ ಬಿಜೆಪಿ ಗೆದ್ದರೆ ಪವಾಡ

ಡಿಸೆಂಬರ್‌ 7ರ ಚುನಾವಣೋತ್ತರ ಸಮೀಕ್ಷೆಗಳು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅದೊಂದು ಪವಾಡವೇ ಸರಿ ಎಂದು ಹೇಳಿವೆ. ಬಿಜೆಪಿ ಕಳೆದ 15 ವರ್ಷಗಳಿಂದ ಮಧ್ಯಪ್ರದೇಶದಲ್ಲಿ, 10 ವರ್ಷಗಳಿಂದ ಛತ್ತೀಸ್‌ಗಢದಲ್ಲಿ ಮತ್ತು 5 ವರ್ಷಗಳಿಂದ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ವಿಚಿತ್ರ ಎಂದರೆ ರಾಜಸ್ಥಾನದಲ್ಲಿ ಬಿಜೆಪಿ ಒಂದು ಬಾರಿ ಮಾತ್ರ ಆಡಳಿತ ನಡೆಸುತ್ತಿದ್ದರೂ ಅಲ್ಲಿಯೇ ವಿರೋಧಿ ಅಲೆ ಹೆಚ್ಚಿದೆ. ಅಲ್ಲಿನ ಜನರು ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಆಡಳಿತದಿಂದ ಸಂಪೂರ್ಣವಾಗಿ ಭ್ರಮನಿರಸನಗೊಂಡಿದ್ದಾರೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿಗಳು ಜನರಿಗೆ ತಲುಪುವುದಿರಲಿ ಸ್ವತಃ ಪಕ್ಷದ ನಾಯಕರುಗಳಿಗೇ ಸಿಗುವುದು ದುಸ್ತರವಾಗಿತ್ತು. ಉಳಿದಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ಮತ್ತು ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ್‌ ಸಿಂಗ್‌ ವೈಯಕ್ತಿಕವಾಗಿ ತಮ್ಮ ಜನಪ್ರಿಯತೆಯನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಆದರೆ ಈ ರಾಜ್ಯಗಳಲ್ಲಿ ರೈತರು ರೊಚ್ಚಿಗೆದ್ದಿದ್ದಾರೆ. ಅದಕ್ಕೆ ಬಿಜೆಪಿ ಬೆಲೆ ತೆರಬೇಕಾಗಿ ಬಂದರೂ ಬರಬಹುದು.

ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಸವಾಲು : ಗೆಲುವಿನ ಉಮೇದಿನಲ್ಲಿ ಕಾಂಗ್ರೆಸ್

ಮೋದಿ ರ್ಯಾಲಿ ಮ್ಯಾಜಿಕ್‌ ಮಾಡುತ್ತಾ?

ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ‘ವಸುಂಧರಾ ರಾಜೇ ಅವರು ರಾಜಸ್ಥಾನದಲ್ಲಿ ಸಾಕಷ್ಟುಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಆದರೆ ತಮ್ಮ ಒಳ್ಳೆಯ ಕೆಲಸಗಳ ಬಗ್ಗೆ ಪ್ರಚಾರ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ’ ಎಂದಿದ್ದರು. ಅಲ್ಲಿಗೆ ಆಡಳಿತ ಪಕ್ಷವು ಡಿಸೆಂಬರ್‌ 7ಕ್ಕೂ ಮೊದಲೇ ಎದುರಾಳಿಗಳ ಬಗ್ಗೆ ಭೀತಿ ಹೊಂದಿತ್ತು ಎಂಬುದು ಸ್ಪಷ್ಟ. ಅಲ್ಲಿನ ಗ್ರೌಂಡ್‌ ರಿಪೋರ್ಟ್‌ ಏನು ಹೇಳುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಅಂತಿಮ ಪ್ರಯತ್ನವಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡ ರಾಜಸ್ಥಾನದಲ್ಲಿ ಕೆಲ ರಾರ‍ಯಲಿ ನಡೆಸಿದ್ದರು. ಇದು ಪಕ್ಷದ ಭವಿಷ್ಯವನ್ನೇ ಬದಲಿಸುತ್ತದೆ ಎಂದು ಹೇಳಲಾಗುತ್ತಿತ್ತು. ಹಲವು ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾರ‍ಯಲಿ ನಡೆಸಿದ ನಂತರದಲ್ಲಿ ತಳಮಟ್ಟದ ಅಭಿಪ್ರಾಯವೇ ಬದಲಾಗಿ ಊಹೆಗಳೇ ಉಲ್ಟಾಹೊಡೆದಿದ್ದವು. ಈ ಬಾರಿಯೂ ಹಾಗೇ ಆಗುತ್ತಾ?

ಒಂದು ವೇಳೆ ಚುನಾವಣೋತ್ತರ ಸಮೀಕ್ಷೆಯಂತೆ ಇವತ್ತಿನ ಫಲಿತಾಂಶ ಬಂದರೆ ಕಾಂಗ್ರೆಸ್‌ ಮತ್ತೆ ಪುಟಿದೆದ್ದು ಬಿಜೆಪಿಗೆ ಅಪ್ಪಳಿಸುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಕಾಂಗ್ರೆಸ್‌ ಇದನ್ನು ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಎಸ್‌ಪಿ ಮತ್ತು ಬಿಎಸ್‌ಪಿ ಇದನ್ನು ಅರ್ಥ ಮಾಡಿಕೊಂಡು 2019ರ ಮಹಾಗಠಬಂಧನಕ್ಕಾಗಿ ರಾರ‍ಯಲಿಗಳಲ್ಲಿ ಕಾಣಿಸಿಕೊಂಡವು.

‘ಪಂಚ’ರಾಜ್ಯಗಳ ಚುನಾವಣೋತ್ತರ ಫಲಿತಾಂಶ ಪ್ರಕಟ

ಉತ್ತರ ಪ್ರದೇಶದ ಮೇಲೂ ಪರಿಣಾಮ

ಉತ್ತರ ಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ ಮತ್ತು ಪುನರುಜ್ಜೀವಿತ ಕಾಂಗ್ರೆಸ್‌ ಕೈಜೋಡಿಸಿದಲ್ಲಿ 2014ರಲ್ಲಿ ಗೆದ್ದಿದ್ದ ಅರ್ಧ ಸೀಟುಗಳನ್ನೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಕಷ್ಟಪಡಬೇಕಾಗುತ್ತದೆ. ಹಿಂದಿನ ಚುನಾವಣೆಯಲ್ಲಿ ದೇಶದ ಅತ್ಯಂತ ಜನನಿಬಿಡ ಮತ್ತು ನಿರ್ಣಾಯಕ ರಾಜ್ಯವಾದ ರಾಜಸ್ಥಾನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 80 ಲೋಕಸಭಾ ಸೀಟುಗಳಲ್ಲಿ 73ನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಈಗಿನ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯೇನಾದರೂ ತಿರಸ್ಕೃತಗೊಂಡರೆ 2019ರಲ್ಲಿ ಆ ಲೋಕಸಭಾ ಸೀಟುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೇರಲು ತೊಡಕಾಗಬಹುದು. ಅಂದಾಜಿನಂತೆ ಈ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲೋಕಸಭಾ ಸೀಟುಗಳು ಕಡಿಮೆಯಾಗಬಹುದು.

ಈಗ ನಮ್ಮೆಲ್ಲರ ಕಣ್ಣುಗಳೂ ಇಂದಿನ ಫಲಿತಾಂಶದ ಮೇಲಿವೆ. ಇವಿಎಂಗಳು ತೀರ್ಪು ನೀಡಲಿವೆ.

-ಶರತ್‌ ಪ್ರಧಾನ್‌ ಹಿರಿಯ ಪತ್ರಕರ್ತ