ನವದೆಹಲಿ: 2019ರ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಬಲ್ಲ ಸಾಧ್ಯತೆ ಹೊಂದಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ. ಲೋಕಸಭಾ ಚುನಾವಣೆಗೆ ಮುನ್ನ ನಡೆಯುವ ಕಡೆಯ ಬಹುದೊಡ್ಡ ಚುನಾವಣೆ ಇದಾಗಿರುವ ಕಾರಣ ಇಡೀ ದೇಶದ ಗಮನ ಈ ಫಲಿತಾಂಶದತ್ತ ನೆಟ್ಟಿದೆ. ಬೆಳಗ್ಗೆ 8ರಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, 11 ಗಂಟೆ ವೇಳೆಗೆ ಸ್ಪಷ್ಟಚಿತ್ರಣ ಲಭಿಸುವ ನಿರೀಕ್ಷೆ ಇದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಲಿ ಬಿಜೆಪಿ ಆಳ್ವಿಕೆ ಇದ್ದರೆ, ತೆಲಂಗಾಣದಲ್ಲಿ ಟಿಆರ್‌ಎಸ್‌ ಮತ್ತು ಮಿಜೋರಂನಲ್ಲಿ ಕಾಂಗ್ರೆಸ್‌ ಅಧಿಕಾರ ನಡೆಸುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕದ ನಾಲ್ಕೂವರೆ ವರ್ಷಗಳಲ್ಲಿ ಕಾಂಗ್ರೆಸ್‌ ಆಳುತ್ತಿದ್ದ ಹಲವು ರಾಜ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿಗೆ ತನ್ನ ನಿಯಂತ್ರಣದಲ್ಲಿರುವ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ಉಳಿಸಿಕೊಳ್ಳುವುದು ಸವಾಲಾಗಿದೆ. ಹೀಗಾಗಿ ಈ ಚುನಾವಣೆ ಬಿಜೆಪಿ ಪಾಲಿಗೆ ಬಹುದೊಡ್ಡ ಅಗ್ನಿಪರೀಕ್ಷೆಯಾಗಿದೆ.

ಮತ್ತೊಂದೆಡೆ ರಾಜಸ್ಥಾನದ ಜೊತೆಗೆ ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಜಯಭೇರಿ ಬಾರಿಸುವ ವಿಶ್ವಾಸದಲ್ಲಿ ಕಾಂಗ್ರೆಸ್‌ ಇದೆ. ಜತೆಗೆ ತೆಲುಗುದೇಶಂ ಮತ್ತಿತರ ಪಕ್ಷಗಳ ಜತೆ ಮಾಡಿಕೊಂಡಿರುವ ಮಹಾಕೂಟದ ನೆರವಿನಿಂದ ತೆಲಂಗಾಣದಲ್ಲೂ ಅಧಿಕಾರ ಹಿಡಿಯುವ ಉಮೇದಿಯಲ್ಲಿದೆ. ಜತೆಗೆ ಮೀಜೋರಂನಲ್ಲಿ ಅಧಿಕಾರ ಉಳಿಸಿಕೊಳ್ಳುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಒಂದು ವೇಳೆ ಮಿಜೋರಂನಲ್ಲಿ ಅಧಿಕಾರ ಉಳಿಸಿಕೊಂಡು, ಉಳಿದ ರಾಜ್ಯಗಳಲ್ಲಿ ಬಿಜೆಪಿಯಿಂದ ಅಧಿಕಾರ ಕಿತ್ತುಕೊಂಡರೆ, ಅದು ರಾಹುಲ್‌ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‌ಗೆ ಸಿಕ್ಕ ಬಹುದೊಡ್ಡ ಗೆಲುವಾಗಲಿದೆ. ಹೀಗಾಗಿಯೇ ಈ ಫಲಿತಾಂಶವನ್ನು ಕಾಂಗ್ರೆಸ್‌ ನಾಯಕರು ಆಸೆಗಣ್ಣಿನಿಂದ ಕಾದಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಹಾಗೂ ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್‌ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಮಧ್ಯಪ್ರದೇಶ, ಛತ್ತೀಸ್‌ಗಢ ವಿಚಾರದಲ್ಲಿ ಸಮೀಕ್ಷೆಗಳು ಅತಂತ್ರವಾಗಿವೆ. ಇನ್ನು ಮೀಜೋರಂನಲ್ಲಿ ಯಾರಿಗೂ ಬಹುಮತ ಬಾರದು ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.