ನವದೆಹಲಿ: 5 ತಿಂಗಳಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆ ಮೇಲೆ ಮಹತ್ವದ ರಾಜಕೀಯ ಪರಿಣಾಮ ಬೀರಬಲ್ಲದು ಎಂದೇ ವಿಶ್ಲೇಷಿಸಲಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗ
ಲಿದೆ. ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಧಿಕಾರ ನಡೆಸುತ್ತಿರುವ ತೆಲಂಗಾಣ ಹಾಗೂ ಕಾಂಗ್ರೆಸ್ ಹಿಡಿತದಲ್ಲಿರುವ ಮೀಜೋರಂನಲ್ಲಿ ಬೆಳಗ್ಗೆ ೮ರಿಂದ ಮತ ಎಣಿಕೆ
ಪ್ರಾರಂಭವಾಗಲಿದ್ದು, ಬೆಳಗ್ಗೆ 11ರ ವೇಳೆಗೆ  ಸ್ಪಷ್ಟ ಚಿತ್ರಣ ಲಭಿಸುವ ನಿರೀಕ್ಷೆ ಇದೆ.

ಕಾಂಗ್ರೆಸ್ ಆಳುತ್ತಿದ್ದ ರಾಜ್ಯಗಳನ್ನು ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಒಂದಾದ ಮೇಲೊಂದ ರಂತೆ ಕಸಿದುಕೊಳ್ಳುವಲ್ಲಿ ಯಶಸ್ವಿ ಯಾಗಿರುವ ಬಿಜೆಪಿಗೆ ತನ್ನ ನಿಯಂತ್ರಣದಲ್ಲಿರುವ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢವನ್ನು ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಕಳೆದ ವರ್ಷ ನಡೆದ ಗುಜರಾತ್ ಚುನಾವಣೆಯಲ್ಲಿ ಇಂತಹದೇ ಪರಿಸ್ಥಿತಿ ಎದುರಿಸಿದ್ದ ಬಿಜೆಪಿ, ಅದರಲ್ಲಿ ಯಶಸ್ವಿಯಾಗಿತ್ತು. ಅದೇ ಯಶಸ್ಸನ್ನು ಈ ಬಾರಿಯೂ ನಿರೀಕ್ಷಿಸುತ್ತಿದೆ. 

ಛತ್ತೀಸ್‌ಗಢದಲ್ಲೂ ಜಯಭೇರಿ ಬಾರಿಸುವ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಜತೆಗೆ ತೆಲುಗುದೇಶಂ ಮತ್ತಿತರ ಪಕ್ಷಗಳ ಜತೆ ಮಾಡಿಕೊಂಡಿರುವ ಮಹಾಕೂಟದ ನೆರವಿನಿಂದ ತೆಲಂಗಾಣದಲ್ಲೂ ಅಧಿಕಾರ ಹಿಡಿಯುವ ಉಮೇದಿಯಲ್ಲಿದೆ. ಜತೆಗೆ ಮೀಜೋರಂನಲ್ಲಿ ಅಧಿಕಾರ ಉಳಿಸಿಕೊಳ್ಳುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಆದರೆ ಮತದಾರ ಏನು ನಿರ್ಧಾರ ಮಾಡಿದ್ದಾನೆ ಎಂಬುದು ಮತಯಂತ್ರಗಳಲ್ಲಿ ಭದ್ರವಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಮಧ್ಯಪ್ರದೇಶ, ಛತ್ತೀಸ್‌ಗಢ ವಿಚಾರದಲ್ಲಿ ಸಮೀಕ್ಷೆಗಳು ಅತಂತ್ರವಾಗಿವೆ. ಇನ್ನು ಮೀಜೋರಂನಲ್ಲಿ ಯಾರಿಗೂ ಬಹುಮತ ಬಾರದು 
ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.