ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಎರಡನೇ ಅವಧಿಯ 100 ದಿನಗಳನ್ನು ನಿನ್ನೆಗೆ ಪೂರೈಸಿದೆ. ಯಾವುದೇ ಸರ್ಕಾರದ ಸಾಧನೆ ಅಥವಾ ವೈಫಲ್ಯಗಳನ್ನು ಅಳೆಯಲು ನೂರು ದಿನಗಳು ಸಾಲುವುದಿಲ್ಲ.

ಆದರೂ ಎರಡನೇ ಬಾರಿಗೆ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರವೊಂದು ಮೊದಲ ನೂರು ದಿನಗಳಲ್ಲಿ ಏನು ಮಾಡಿದೆ ಮತ್ತು ಈ ಅವಧಿಯಲ್ಲಿ ಸರ್ಕಾರದ ಮಟ್ಟದಲ್ಲಿ ಏನೇನು ಬೆಳವಣಿಗೆಗಳಾಗಿವೆ ಎಂಬುದು ಭವಿಷ್ಯದ ನಾಲ್ಕೂಮುಕ್ಕಾಲು ವರ್ಷದ ಆಡಳಿತದ ದಿಕ್ಸೂಚಿಯಾಗುತ್ತದೆ. ಮೋದಿ ಸರ್ಕಾರದ ನೂರು ದಿನಗಳ ಮುಖ್ಯ ಬೆಳವಣಿಗೆಗಳು ಇಲ್ಲಿವೆ.

ಕಾಣದಾಗಿದೆ ಪರಿಹಾರ: ಗುರಿ ಕಡಿತಗೊಳಿಸಿದ ಮೋದಿ ಸರ್ಕಾರ!

ಆರ್ಟಿಕಲ್‌ 370 ರದ್ದು

ಸ್ವಾತಂತ್ರ್ಯಾನಂತರ ಸಂವಿಧಾನದ ಕಲಂ-370 ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ರದ್ದು ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡಿತು. ಈ ಹಿಂದೆ ರಕ್ಷಣೆ, ಸಂಪರ್ಕ ಮತ್ತು ವಿದೇಶಾಂಗ ವ್ಯವಹಾರ ಹೊರತುಪಡಿಸಿ ಬೇರಾವುದೇ ವಿಷಯಗಳ ಮೇಲೆ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ಅಲ್ಲಿನ ರಾಜ್ಯ ಸರ್ಕಾರಕ್ಕೆ ನೀಡಲಾಗಿತ್ತು.

ಇದರನ್ವಯ ಜಮ್ಮು-ಕಾಶ್ಮೀರದ ಜನರು ಪ್ರತ್ಯೇಕ ಕಾನೂನಿನಡಿ ಬರುತ್ತಿದ್ದರು. ಭಾರತ ಸರ್ಕಾರ ರೂಪಿಸುವ ಬಹುತೇಕ ಕಾನೂನುಗಳು ಅಲ್ಲಿಗೆ ಅನ್ವಯವಾಗುತ್ತಿರಲಿಲ್ಲ. ಸದ್ಯ ಈ ವಿಶೇಷಾಧಿಕಾರ ರದ್ದಾಗಿ ಇಡೀ ದೇಶಕ್ಕೆ ಒಂದೇ ಕಾನೂನು ಅನ್ವಯವಾಗುತ್ತಿದೆ.

ಇನ್ನು ಆಸ್ತಿ ಮತ್ತು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಕಾನೂನುಗಳಿದ್ದವು. ಆರ್ಟಿಕಲ್‌ 370 ರದ್ದಾದ ಬಳಿಕ ಕಾಶ್ಮೀರದಲ್ಲಿ ಅನ್ಯ ರಾಜ್ಯದವರು ಆಸ್ತಿ ಖರೀದಿಸುವ ಹಕ್ಕನ್ನು ನಿರಾಕರಿಸುತ್ತಿದ್ದ ಕಲಂ-35ಎ ಕೂಡ ರದ್ದಾಗಿದೆ. ಇದು ಚುನಾವಣೆಗೂ ಮುನ್ನ ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶವೂ ಇದಾಗಿತ್ತು.

ವಾಯುಸೇನೆಗೆ ಹೆಲಿಕಾಪ್ಟರ್ ಅಪಾಚೆ: ಕೆಣಕಿದರೆ ಆಕಾಶದಲ್ಲೇ ಅಪ್ಪಚ್ಚಿ!

ಭಯೋತ್ಪಾದನೆ ವಿರೋಧಿ ಕಾಯ್ದೆ

ಭಯೋತ್ಪಾದನೆ ವಿರೋಧಿ ಮಸೂದೆ (ತಿದ್ದುಪಡಿ)ಯನ್ನು ಕೇಂದ್ರ ಸರ್ಕಾರ ಸಂಸತ್ತಿನ ಎರಡೂ ಸದನದಲ್ಲಿ ಮಂಡಿಸಿ ಅನುಮೋದನೆ ಪಡೆದು ಜಾರಿ ಮಾಡಲು ಮುಂದಾಗಿದೆ. ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಗೆ (1967) ತಿದ್ದುಪಡಿ ಕೋರುವ ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಇದರನ್ವಯ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ ವ್ಯಕ್ತಿಯನ್ನು ‘ಭಯೋತ್ಪಾದಕ’ ಎಂದು ಘೋಷಿಸಲು ಅವಕಾಶವಿದೆ.

ತ್ರಿವಳಿ ತಲಾಖ್‌ ನಿಷೇಧ

ಎನ್‌ಡಿಎ ಸರ್ಕಾರದ ದೊಡ್ಡ ಯಶಸ್ಸುಗಳಲ್ಲಿ ತ್ರಿವಳಿ ತಲಾಖ್‌ ನಿಷೇಧ ಕಾಯ್ದೆಯ ಅಂಗೀಕಾರವೂ ಒಂದು. ಸಾಮಾಜಿಕ ಹಾಗೂ ರಾಜಕೀಯ ಸ್ತರಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ, ಸಾಕಷ್ಟುಪರ-ವಿರೋಧ ವಾದಗಳಿಗೆ ಗುರಿಯಾಗಿದ್ದ ತ್ರಿವಳಿ ತಲಾಖ್‌ ಕುರಿತ ಮಸೂದೆ ಸಂಸತ್ತಿನ ಎರಡೂ ಸದನದಲ್ಲಿ ಅಂಗೀಕಾರ ಪಡೆದು ಅನುಷ್ಠಾನಗೊಂಡಿದೆ.

ಮೋದಿ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿಯೇ ಈ ಕುರಿತ ಮಸೂದೆ 3 ಬಾರಿ ಲೋಕಸಭೆಯಲ್ಲಿ ಮಂಡನೆಯಾಗಿದ್ದರೂ ರಾಜ್ಯಸಭೆಯಲ್ಲಿ ಹಿನ್ನಡೆ ಅನುಭವಿಸುತ್ತಿತ್ತು. ಸದ್ಯ ಈ ಬಾರಿ ಮಸೂದೆಯು ರಾಜ್ಯಸಭೆಯಲ್ಲಿಯೂ ಪಾಸಾಗಿದೆ.

7 ರಾಷ್ಟ್ರಗಳಿಗೆ ಪ್ರವಾಸ

ಎರಡನೇ ಅವಧಿಯಲ್ಲಿ ನರೇಂದ್ರ ಮೋದಿ ಇಲ್ಲಿಯವರೆಗೆ 7 ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಈ ಮೂಲಕ ಈ ಬಾರಿ ಮೊದಲ ಅವಧಿಗಿಂತಲೂ ಹೆಚ್ಚಾಗಿ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ.

ಮಾಲ್ಡೀವ್ಸ್,  ಶ್ರೀಲಂಕಾ, ಭೂತಾನ್‌, ಯುಎಇ, ಬಹರೇನ್‌, ಫ್ರಾನ್ಸ್‌ ಮತ್ತು ಇತ್ತೀಚೆಗೆ ರಷ್ಯಾಗೆ ಭೇಟಿ ನೀಡಿದ್ದರು. ಯುಎಇ ಸರ್ಕಾರ ಅಲ್ಲಿನ ಅತ್ಯುನ್ನತ ನಾಗರಿಕ ಗೌರವವಾದ ‘ಆರ್ಡರ್‌ ಆಫ್‌ ಜಾಯೇದ್‌’ ಪ್ರಶಸ್ತಿಯನ್ನು ಮೋದಿ ಅವರಿಗೆ ನೀಡಿ ಪುರಸ್ಕರಿಸಿದೆ.

ಮೋದಿ ಪ್ರಾರ್ಥಿಸಿದ್ದ ಗುಹೆಗೆ ಭಾರೀ ಡಿಮ್ಯಾಂಡ್‌!

ಬ್ಯಾಂಕುಗಳ ವಿಲೀನ

ಕರ್ನಾಟಕದ ಮೂರು ಬ್ಯಾಂಕುಗಳು ಸೇರಿ ದೇಶದ 10 ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳನ್ನು ವಿಲೀನಗೊಳಿಸಿ 4 ದೊಡ್ಡ ಬ್ಯಾಂಕುಗಳನ್ನು ಸೃಷ್ಟಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಈ ಮೂಲಕ ಕೆಲವೇ ವರ್ಷಗಳ ಹಿಂದೆ 27 ಇದ್ದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಂಖ್ಯೆ ಈಗ 12ಕ್ಕೆ ಇಳಿಕೆಯಾಗಿದೆ.

ವಸೂಲಾಗದ ಸಾಲಗಳಿಂದ ಬ್ಯಾಂಕುಗಳಿಗೆ ಮುಕ್ತಿ ನೀಡಲು ಮತ್ತು ಗ್ರಾಹಕರಿಗೆ ಸುಲಭವಾಗಿ ಬ್ಯಾಂಕಿಂಗ್‌ ಸೇವೆ ಲಭ್ಯವಾಗುವಂತೆ ಮಾಡಲು ಈ ಕ್ರಮ ಕೈಗೊಂಡಿದ್ದಾಗಿ ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ರೈತರಿಗೆ ನೀಡಿದ್ದ ಭರವಸೆ ಈಡೇರಿಕೆ

ಮತ್ತೆ ಅಧಿಕಾರಕ್ಕೆ ಬಂದರೆ ತಕ್ಷಣ ರೈತರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಅದರಂತೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಪ್ರಕಟಿಸಿದ ಮೋದಿ, ದೇಶದ 14 ಕೋಟಿ ರೈತರ ಖಾತೆಗೆ ಪ್ರತಿ ವರ್ಷ 6000 ರು. ನೇರ ನೆರವು ನೀಡುವ ವ್ಯವಸ್ಥೆ ಆರಂಭಿಸಿದರು.

ಜೊತೆಗೆ ಎಲ್ಲಾ ರೈತರನ್ನೂ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತಂದರು. ರೈತರ ಸಾಮಾಜಿಕ ಕಲ್ಯಾಣಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 10,000 ಕೋಟಿ ರು. ವ್ಯಯಿಸುವುದಾಗಿಯೂ ಅವರು ಪ್ರಕಟಿಸಿದ್ದಾರೆ.

ಹತ್ತಾರು ಪಟ್ಟು ಹೆಚ್ಚಿದ ರಾಜಕೀಯ ಶಕ್ತಿ

ಕಳೆದ ಅವಧಿಯ ಸಾಧನೆ ನೋಡಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿಗೆ ಹಿಂದಿನ ಸಲಕ್ಕಿಂತ ಹೆಚ್ಚು ಸೀಟು ನೀಡಿದಾಗಲೇ ನರೇಂದ್ರ ಮೋದಿಯವರ ರಾಜಕೀಯ ಶಕ್ತಿ ಹತ್ತಾರು ಪಟ್ಟು ಹೆಚ್ಚಾಗಿತ್ತು. ಅದರಿಂದಾಗಿಯೇ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರಿ ವಿರೋಧದ ನಡುವೆ ಮತ್ತು ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತ ಇಲ್ಲದಿದ್ದರೂ ಹಿಂಪಡೆಯಲು ಸಾಧ್ಯವಾಯಿತು.

ಅಷ್ಟೇ ಅಲ್ಲ, ತ್ರಿವಳಿ ತಲಾಖ್‌ ರದ್ದತಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲು ಸಾಧ್ಯವಾಗಿದ್ದೂ ಇದೇ ಕಾರಣಕ್ಕೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಇದೀಗ ಸಚಿವ ಸಂಪುಟ ಸೇರಿ ಗೃಹ ಮಂತ್ರಿಯಾಗಿರುವುದರಿಂದ ಕೇಂದ್ರ ಸರ್ಕಾರದ ಆಡಳಿತದಲ್ಲಿ ಮೋದಿ-ಶಾ ಜೋಡಿಯ ರಾಜಕೀಯ ಇಚ್ಛಾಶಕ್ತಿಗೆ ಸಾಟಿಯಿಲ್ಲದಂತಾಗಿದೆ.

ಇದರ ಜೊತೆಗೆ ವಿದೇಶಗಳಲ್ಲಿ ಹೆಚ್ಚುತ್ತಿರುವ ಮೋದಿ ವರ್ಚಸ್ಸು ಹಾಗೂ ಭಾರತವನ್ನು 5 ಲಕ್ಷ ಕೋಟಿ ರು. ಆರ್ಥಿಕತೆಯನ್ನಾಗಿ ರೂಪಿಸುವ ಅವರ ಗುರಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಹಿಂದೆಂದಿಗಿಂತ ಪ್ರಬಲ ರಾಜಕೀಯ ನಾಯಕನಾಗಿ ಮೋದಿ ಹೊರಹೊಮ್ಮಿದ್ದಾರೆ.

ಆರ್ಥಿಕ ಹಿಂಜರಿಕೆಯ ಕಠಿಣ ಸವಾಲು

ಮೋದಿ ಸರ್ಕಾರದ ಎರಡನೇ ಅವಧಿಯಲ್ಲುಂಟಾದ ದೊಡ್ಡ ಹಿನ್ನಡೆಯೆಂದರೆ ಆರ್ಥಿಕ ಹಿಂಜರಿಕೆ. ಭಾರತವನ್ನು 5 ಲಕ್ಷ ಕೋಟಿ ರು. ಆರ್ಥಿಕತೆಯನ್ನಾಗಿ ರೂಪಿಸುತ್ತೇವೆ ಎಂದು ಮೋದಿ ಘೋಷಿಸಿದ ಬೆನ್ನಲ್ಲೇ ಈ ಆರ್ಥಿಕ ಹಿಂಜರಿಕೆ ಶುರುವಾಗಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆಟೋಮೊಬೈಲ್‌, ರಿಯಲ್‌ ಎಸ್ಟೇಟ್‌, ಸಣ್ಣ ಉದ್ದಿಮೆಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಲಕ್ಷಾಂತರ ಉದ್ಯೋಗಗಳು ನಷ್ಟವಾಗುತ್ತಿವೆ. ದೇಶದ ಜಿಡಿಪಿ ಬೆಳವಣಿಗೆ ಕುಂಠಿತವಾಗುತ್ತಿದೆ.

ಹಿಂದೆ 1990ರ ದಶಕದವರೆಗೆ ದೇಶಕ್ಕೆ ಇಂತಹ ಆರ್ಥಿಕ ಹಿಂಜರಿಕೆಗಳು ಆಗಾಗ ಬಂದೆರಗುತ್ತಿದ್ದವು. ಆದರೆ ಭಾರತವು ಉದಾರೀಕರಣಕ್ಕೆ ತೆರೆದುಕೊಂಡ ಮೇಲೆ ಆರ್ಥಿಕತೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಸಾಗುತ್ತಿತ್ತು. 2008 ರಲ್ಲಿ ಅಮೆರಿಕವೂ ಸೇರಿದಂತೆ ಜಗತ್ತಿನಾದ್ಯಂತ ಬಹುದೊಡ್ಡ ಆರ್ಥಿಕ ಕುಸಿತ ಉಂಟಾದರೂ ಭಾರತದ ಆರ್ಥಿಕತೆ ತಳಮಟ್ಟದಿಂದ ಗಟ್ಟಿಯಾಗಿ ಬೆಳೆದಿದ್ದರಿಂದ ಏನೂ ಸಮಸ್ಯೆಯಾಗಿರಲಿಲ್ಲ. ಆದರೆ, ಈ ಬಾರಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ.

ಐತಿಹಾಸಿಕ ಪರೋಕ್ಷ ತೆರಿಗೆ ಸುಧಾರಣೆಯಾದ ಜಿಎಸ್‌ಟಿಯನ್ನು ಯಶಸ್ವಿಯಾಗಿ ಜಾರಿಗೆ ತಂದಮೇಲೂ ಹಾಗೂ ಅಪನಗದೀಕರಣದ ಅಡ್ಡ ಪರಿಣಾಮಗಳನ್ನು ಯಶಸ್ವಿಯಾಗಿ ಮೆಟ್ಟಿನಿಂತ ಮೇಲೂ ಆರ್ಥಿಕ ಹಿಂಜರಿಕೆ ದೊಡ್ಡ ಪ್ರಮಾಣದಲ್ಲೇ ಉಂಟಾಗುತ್ತಿರುವುದು ಸರ್ಕಾರಕ್ಕೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಇದನ್ನು ಹಾಗೂ ಉದ್ಯೋಗ ನಷ್ಟದ ಸಮಸ್ಯೆಯನ್ನು ಮೋದಿ ಸರ್ಕಾರ ಹೇಗೆ ಎದುರಿಸುತ್ತದೆ ಎಂಬುದರ ಮೇಲೆ ಎರಡನೇ ಅವಧಿಯ ಯಶಸ್ಸು ಹಾಗೂ ದೇಶದ ಅಭಿವೃದ್ಧಿ ನಿಂತಿದೆ ಎಂದು ರಾಜಕೀಯ-ಆರ್ಥಿಕ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.