ನವದೆಹಲಿ(ಸೆ.03): ಆರ್ಥಿಕ ಹಿನ್ನೆಡೆ ಕೈಗಾರಿಕಾ ಕ್ಷೇತ್ರದ ಪ್ರಮುಖ ವಲಯಗಳ ಮೇಲೆ ಭಾರೀ ದುಷ್ಪರಿಣಾಮ ಬೀರಿದ್ದು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ನಿರಾಶಾದಾಯಕವಾಗಿವೆ.

ಆರ್ಥಿಕ ಕುಸಿತದಿಂದಾಗಿ ವಿದ್ಯುತ್, ಕಚ್ಚಾ ತೈಲ, ಸಿಮೆಂಟ್ ಸೇರಿದಂತೆ ಪ್ರಮುಖ 8 ಕೈಗಾರಿಕಾ ವಲಯಗಳ ಆರ್ಥಿಕ ಬೆಳವಣಿಗೆ ಪ್ರಮಾಣ ಜುಲೈನಲ್ಲಿ ಶೇ 2.1ಕ್ಕೆ ಕುಸಿದಿದೆ ಎಂದು ಕೇಂದ್ರದ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.

ಕಲ್ಲಿದ್ದಲು, ರಸಗೊಬ್ಬರ, ಉಕ್ಕು, ಪೆಟ್ರೋಲಿಯಂ ಉತ್ಪನ್ನಗಳು, ಕಚ್ಚಾ ತೈಲ, ವಿದ್ಯುತ್‌, ನೈಸರ್ಗಿಕ ಅನಿಲ ಹಾಗೂ ಸಿಮೆಂಟ್ ವಲಯಗಳ ಬೆಳವಣಿಗೆ ದರ ಕುಸಿದಿದೆ.  ಕಳೆದ ವರ್ಷ ಜುಲೈನಲ್ಲಿ ಇದೇ ವಲಯಗಳ ಅಭಿವೃದ್ದಿ ದರ ಶೇ 7.3ರಷ್ಟಿತ್ತು. ಆದರೆ ಈ ವರ್ಷ ಜುಲೈನಲ್ಲಿ ಕೇವಲ ಶೇ 2.1ರಷ್ಟಿದೆ.  

ಇನ್ನು ಕೈಗಾರಿಕಾ ಉತ್ಪಾದನೆ ಸೂಚ್ಯಂಕದಲ್ಲಿ (ಐಐಪಿ) ಈ ಕೈಗಾರಿಕೆಗಳ ಕೊಡುಗೆ ಶೇ 40.27ರಷ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಈ ಕ್ಷೇತ್ರಗಳಲ್ಲಿ ಭಾರೀ ಕುಸಿತ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳು ಕ್ರಮವಾಗಿ ಶೇ.6.6, ಶೇ.7.9 ಮತ್ತು ಶೇ.4.2 ಇಳಿಕೆ ಕಂಡಿವೆ. ಇವು ಕಳೆದ ವರ್ಷ ಕ್ರಮವಾಗಿ ಶೇ.6.9, ಶೇ.11.2 ಹಾಗೂ ಶೇ.6.7ರಷ್ಟು ಬೆಳವಣಿಗೆ ಕಂಡಿದ್ದವು ಎಂದು ವರದಿ ತಿಳಿಸಿದೆ.

ಈ ಮಧ್ಯೆ ರಸಗೊಬ್ಬರ ಕೈಗಾರಿಕೆ ಲಾಭದಲ್ಲಿ ಮುನ್ನಡೆದಿದ್ದು, ಶೇ.1.5ರಷ್ಟು ಬೆಳವಣಿಗೆ ದಾಖಲಾಗಿದೆ. ಇದು ಕಳೆದ ವರ್ಷ ಜುಲೈನಲ್ಲಿ ಶೇ.1.3ರಷ್ಟು ದಾಖಲಾಗಿತ್ತು.

ಉತ್ಪಾದನಾ ವಲಯದ ಅಭಿವೃದ್ಧಿ ದರ ಕೂಡ 15 ತಿಂಗಳ ಹಿಂದಿನ ದರಕ್ಕಿಂತ ಕೆಳಮಟ್ಟಕ್ಕೆ ಕುಸಿದಿದ್ದು, ಆದಾಯ ಸಂಗ್ರಹದಲ್ಲಿ ಕಂಡುಬಂದಿರುವ ನಕಾರಾತ್ಮಕ ಬೆಳವಣಿಗೆಗೆ ಪ್ರಧಾನಿ ಕಾರ್ಯಾಲಯ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ನಿಗದಿತ ಗುರಿಗಳನ್ನು ತಲುಪಲು ಇರುವ ಎಲ್ಲ ಆಯ್ಕೆಗಳ ಕುರಿತು ಪರಿಶೀಲನೆ ನಡೆಸುವಂತೆ ಎಲ್ಲ ಇಲಾಖೆಗಳಿಗೂ ಸೂಚನೆ ನೀಡಿದೆ.

2019-20ನೇ ಸಾಲಿನ ಜಿಎಸ್'ಟಿ ಸಂಗ್ರಹ ಗುರಿಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದ್ದು, 7.6 ಲಕ್ಷ ಕೋಟಿ ರೂ.ದಿಂದ 6.63 ಲಕ್ಷ ಕೋಟಿ ರೂ.ಗೆ ಇಳಿಕೆ ಮಾಡಿದೆ. ಇದೇ ವೇಳೆ ತಿಂಗಳ ಸರಾಸರಿ ಜಿಎಸ್'ಟಿ ಸಂಗ್ರಹ ದರ ಮಾತ್ರ 1 ಲಕ್ಷ ಕೋಟಿ ರೂ.ದಷ್ಟೇ ಉಳಿಸಿಕೊಳ್ಳಲಾಗಿದೆ.