ನವದೆಹಲಿ (ಸೆ. 02):  ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ವೇಳೆ ಧ್ಯಾನ ಗೈದಿದ್ದ ಉತ್ತರಾಖಂಡದ ಕೇದಾರನಾಥದಲ್ಲಿನ ರುದ್ರ ಗುಹೆಗೆ ಭಾರೀ ಡಿಮ್ಯಾಂಡ್‌ ಬಂದಿದೆ. ಆ ಗುಹೆಯಲ್ಲಿ ಧ್ಯಾನಕ್ಕಾಗಿ ಜನರು ಮುಂಗಡ ಬುಕಿಂಗ್‌ ಮಾಡುತ್ತಿದ್ದಾರಂತೆ. ಪ್ರಧಾನಿ ಮೋದಿ ಧ್ಯಾನದ ಬಳಿಕ ಈವರೆಗೂ 78 ಬಾರಿ ಬುಕಿಂಗ್‌ ಕಂಡಿದೆ. ದಿನಕಳೆದಂತೆ ಇದು ಪ್ರವಾಸಿ ತಾಣವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಮೋದಿ ಅವರ ಧ್ಯಾನದ ಬಳಿಕ 4 ಬಾರಿ, ಜೂನ್‌ನಲ್ಲಿ 28, ಜುಲೈನಲ್ಲಿ 10, ಆಗಸ್ಟ್‌ನಲ್ಲಿ 8, ಸೆಪ್ಟೆಂಬರ್‌ನಲ್ಲಿ 19, ಅಕ್ಟೋಬರ್‌ನಲ್ಲಿ 10 ಜನರು ಧ್ಯಾನಕ್ಕಾಗಿ ಮುಂಗಡ ಬುಕಿಂಗ್‌ ಮಾಡಿದ್ದಾರೆ. ಗುಹೆಯಲ್ಲಿ ಒಂದು ರಾತ್ರಿ ಕಳೆಯಲು 1500 ರು. ಭರಿಸಬೇಕು.

ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ 999 ರು. ಸಂದಾಯ ಮಾಡಬೇಕು. ಓರ್ವ ವ್ಯಕ್ತಿಗೆ ಮಾತ್ರ ಧ್ಯಾನಕ್ಕೆ ಅವಕಾಶವಿದೆ. ಗುಹೆಯಲ್ಲಿ ಮೊಬೈಲ್‌ ಕೂಡ ಬಳಸಬಹುದಾಗಿದೆ. ವಿದ್ಯುತ್‌, ನೀರು ಶೌಚಾಲಯ ಸೌಲಭ್ಯವೂ ಒದಗಿಸಲಾಗಿದೆ.

ಮುಂದಿನ ದಿನಗಳಲ್ಲಿ ಉತ್ತರಾಖಂಡದಲ್ಲಿ ಅತಿ ಹೆಚ್ಚು ಚಳಿ ಇರುತ್ತದೆ. 2020 ರ ಮೇ ತಿಂಗಳಿಂದ ಮತ್ತೆ ಸಾರ್ವಜನಿಕರಿಗೆ ಗುಹೆಯನ್ನು ಮುಕ್ತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.