‘ಈಸ್‌ ಆಫ್‌ ಡೂಯಿಂಗ್ ಬ್ಯುಸಿನೆಸ್‌’ ಬದಲು ಈಗ ‘ಸ್ಪೀಡ್‌ ಆಫ್‌ ಡೂಯಿಂಗ್’ ಬ್ಯುಸಿನೆಸ್‌ ಎಂಬ ಘೋಷಣೆ ಚಾಲ್ತಿಯಲ್ಲಿದೆ, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿ ಜಾರಿಗೆ ತಂದಿದೆ ಎಂದುಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

ವಿಧಾನ ಪರಿಷತ್‌ (ಡಿ.10): ಬಂಡವಾಳ ಆಕರ್ಷಿಸುವ ವಿಷಯದಲ್ಲಿ ಪ್ರಸ್ತುತ ರಾಜ್ಯಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ‘ಈಸ್‌ ಆಫ್‌ ಡೂಯಿಂಗ್ ಬ್ಯುಸಿನೆಸ್‌’ ಬದಲು ಈಗ ‘ಸ್ಪೀಡ್‌ ಆಫ್‌ ಡೂಯಿಂಗ್’ ಬ್ಯುಸಿನೆಸ್‌ ಎಂಬ ಘೋಷಣೆ ಚಾಲ್ತಿಯಲ್ಲಿದೆ, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿ ಜಾರಿಗೆ ತಂದಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

ಬಿಜೆಪಿಯ ಕೇಶವಪ್ರಸಾದ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಂಡವಾಳ ಆಕರ್ಷಿಸಲು ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ಉತ್ತರಪ್ರದೇಶ, ಛತ್ತೀಸ್‌ಗಢ ಮುಂತಾದ ರಾಜ್ಯಗಳು ತುಂಬಾ ಪೈಪೋಟಿ ನೀಡುತ್ತಿವೆ. ಇತ್ತೀಚೆಗೆ ಲೆನ್ಸ್‌ ಕ್ರಾಫ್ಟ್‌ ಕಂಪನಿಗೆ ನಾವು ಶೇ.30-40ರಷ್ಟು ಪ್ರೋತ್ಸಾಹ ಧನ ನೀಡಲು ಮುಂದಾದಾಗ ಬೇರೋಂದು ರಾಜ್ಯ ಶೇ.100ರಷ್ಟು ಇನ್ಸೆಂಟಿವ್‌ ನೀಡುವುದಾಗಿ ಘೋಷಿಸಿ ಅವರಲ್ಲಿ ಕೈಗಾರಿಕೆ ಸ್ಥಾಪನೆಗೆ ಅವಕಾಶ ನೀಡಿತು. ಅದೇ ರೀತಿ ಬಳ್ಳಾರಿಯಲ್ಲಿ ಆರ್ಸೆಲರ್‌ ಮಿತ್ತಲ್‌ ಕೈಗಾರಿಕೆ ಸ್ಥಾಪನೆಗೆ ಭೂಮಿ ಪಡೆದರೂ ಈವರೆಗೆ ಸ್ಥಾಪನೆ ಮಾಡಲಿಲ್ಲ. ಆದರೆ ಬೇರೋಂದು ರಾಜ್ಯದಲ್ಲಿ ಒಂದು ಲಕ್ಷ ಕೋಟಿ ರು. ಬಂಡವಾಳ ಹೂಡಿದೆ ಎಂದು ಸಚಿವರು ಹೇಳಿದರು.

ಕಳೆದ 3 ವರ್ಷಗಳಲ್ಲಿ 1888 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 5.03 ಲಕ್ಷ ಹೂಡಿಕೆಯಾಗಲಿದ್ದು, 6.92 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ. ಈ ಪೈಕಿ 67 ಯೋಜನೆ ಅನುಷ್ಠಾನಗೊಂಡಿದ್ದು, ಇವುಗಳಿಂದ 66,435.09 ಕೋಟಿ ಮೊತ್ತದ ಬಂಡವಾಳ ಹೂಡಿಕೆಯಾಗಿದೆ. 93925 ಉದ್ಯೋಗ ಸೃಷ್ಟಿಯಾಗಿದೆ ಎಂದು ಪಾಟೀಲ್‌ ವಿವರಿಸಿದರು.

ಹೆಚ್ಚಿನ ಪ್ರೋತ್ಸಾಹ

ಹೊಸದಾಗಿ ಜಾರಿಗೆ ತಂದಿರುವ 2025-2030 ಕೈಗಾರಿಕಾ ನೀತಿ ರಾಜ್ಯದ ಸಮಗ್ರ ಅಭಿವೃದ್ಧಿ ಗುರಿಯೊಂದಿಗೆ ಬೆಂಗಳೂರಿನ ಹೊರಗೆ ಕೈಗಾರಿಕೆಯಲ್ಲಿ ಹಿಂದುಳಿದಿರುವ ಪ್ರದೇಶ ಉತ್ತೇಜಿಸುವ ಗುರಿ ಹೊಂದಿದೆ. ವಿಶೇಷವಾಗಿ ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆ/ತಾಲೂಕುಗಳಲ್ಲಿ ಹೂಡಿಕೆ ಆಕರ್ಷಿಸಲು ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಕರ್ನಾಟಕ ಕ್ಲೀನ್‌ ಮೊಬಿಲಿಟಿ ಪಾಲಿಸಿ 2025-30 ಹಾಗೂ ಕರ್ನಾಟಕ ಏರೋಸ್ಪೇಸ್‌ ಆ್ಯಂಡ್‌ ಡಿಫೆನ್ಸ್‌ ಪಾಲಿಸಿ 2022-27 ಜಾರಿಗೆ ತಂದಿದ್ದು, ಈ ನೀತಿಯಡಿ ವಲಯವಾರು ರಿಯಾಯ್ತಿ ಉತ್ತೇಜನ ಒದಗಿಸಲಾಗುವುದು ಎಂದರು.