ಬೆಂಗಳೂರು (ಏ. 30): ರಾಜ್ಯದ ಪ್ರಖ್ಯಾತ ದೇವಾಲಯಗಳಲ್ಲಿ ಒಂದಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಚಿನ್ನದ ರಥ ನೀಡುವ ಸಂಬಂಧ ಇಂದಿನ ಮಾರುಕಟ್ಟೆ ದರದಲ್ಲಿ ಚಿನ್ನದ ಬೆಲೆ, ನಿರ್ಮಾಣ ವೆಚ್ಚ ಸೇರಿ ಎಲ್ಲಾ ಅಂದಾಜುಗಳನ್ನು ಪರಿಷ್ಕರಿಸಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.

ಕುಕ್ಕೆ ರಥಕ್ಕೆ ಸರ್ಕಾರದಿಂದ ಚಿನ್ನ ಲೇಪನ: ಜ್ಯೋತಿಷಿ ಸಲಹೆ ಜಾರಿಗೆ ಸಿಎಂ ಸೂಚನೆ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಚಿನ್ನದ ರಥ ನೀಡುವ ಸಂಬಂಧ 2005 ರಲ್ಲಿ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಅಂದಿನ ದಿನದಲ್ಲಿ 15 ಕೋಟಿ ರು. ವೆಚ್ಚದಲ್ಲಿ ಚಿನ್ನದ ರಥ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ದೇವಾಲಯದಲ್ಲಿ ಲಭ್ಯ ಇರುವ ಚಿನ್ನ ಬಳಸಿಕೊಂಡು, ಉಳಿದ ಚಿನ್ನವನ್ನು ಬ್ಯಾಂಕ್ನ ಮೂಲಕ ಖರೀದಿಸಲು ಸರ್ಕಾರ ಸಮ್ಮತಿ ನೀಡಿತ್ತು. ಆದರೆ, ರಥ ನಿರ್ಮಾಣಕ್ಕೆ ಸರ್ಕಾರದ ಅನುದಾನ ಬಳಸದೆ ಸಾರ್ವಜನಿಕರ ದೇಣಿಗೆ ಸಂಗ್ರಹ ಮತ್ತು ದೇವಾಲಯದ ಸಂಪನ್ಮೂಲಗಳಿಂದಲೇ ರಥ ನಿರ್ಮಾಣದ ವೆಚ್ಚ ಭರಿಸುವಂತೆ ತಿಳಿಸಲಾಯಿತು ಎಂದು ಮುಖ್ಯಮಂತ್ರಿಗಳ ಕಚೇರಿ ಯು ವಿವರಣೆ ನೀಡಿದೆ.

ಇತ್ತೀಚೆಗೆ ಭಕ್ತರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನೆನೆಗುದಿಗೆ ಬಿದ್ದಿರುವ ಈ ಯೋಜನೆಯನ್ನು ಪುನರಾರಂಭಿಸುವಂತೆ ಮನವಿ ಮಾಡಿದರು. ಈ ಮನವಿಯನ್ನು ಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು ಇಂದಿನ ಮಾರುಕಟ್ಟೆ ದರದಲ್ಲಿ ಚಿನ್ನದ ಬೆಲೆ, ನಿರ್ಮಾಣ ವೆಚ್ಚ ಸೇರಿ ಎಲ್ಲಾ ಅಂದಾಜು ಮೊತ್ತವನ್ನು ಪರಿಷ್ಕರಿಸಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.