ಬೆಂಗಳೂರು[ಏ.29]: 15 ವರ್ಷಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಚಿನ್ನದ ರಥ ನೀಡುವ ಕುರಿತು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಇದೀಗ ಮರುಜೀವ ಬಂದಿದ್ದು, ಚಿನ್ನದ ರಥ ನೀಡುವ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೌಖಿಕವಾಗಿ ಸೂಚಿಸಿದ್ದಾರೆ.

ಖ್ಯಾತ ಜ್ಯೋತಿಷಿ ದ್ವಾರಕಾನಾಥ್‌ ಅವರ ಸಲಹೆ ಮೇರೆಗೆ 15 ವರ್ಷಗಳ ಹಿಂದಿನ ಆದೇಶವನ್ನು ಜಾರಿ ಮಾಡಲು ಮುಖ್ಯಮಂತ್ರಿ ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ರಥಕ್ಕೆ ಚಿನ್ನ ಲೇಪನ ಮಾಡಲು ಸುಮಾರು 240 ಕೆ.ಜಿ. ಚಿನ್ನ ಬೇಕಾಗಲಿದ್ದು, ಅದರ ಮೌಲ್ಯ ಸುಮಾರು 85 ಕೋಟಿ ರು. ಆಗಲಿದೆ ಎಂದು ಹೇಳಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಚಿನ್ನದ ರಥ ನೀಡುವ ಸಂಬಂಧ ಕಳೆದ 2004ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅಲ್ಲದೆ, 2006ರಲ್ಲಿಯೇ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡಿದ್ದ ಸರ್ಕಾರ ಚಿನ್ನದ ರಥ ನಿರ್ಮಿಸುವುದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಮುಂದೆ 2008ರಲ್ಲಿ ಮರದ ಪ್ರತಿರೂಪವನ್ನು ಸಿದ್ಧಪಡಿಸಿಕೊಂಡಿತ್ತು.

ಆದರೆ, ರಥಕ್ಕೆ ಚಿನ್ನದ ಲೇಪನ ಮಾಡಿಸಲು ಹಣಕಾಸಿನ ಕೊರತೆಯಿಂದಾಗಿ ಇಲ್ಲಿಯವರೆಗೂ ನೆನೆಗುದಿಗೆ ಬಿದ್ದಿತ್ತು. ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಥಕ್ಕೆ ಚಿನ್ನದ ಲೇಪನ ಮಾಡಿಸುವ ಸಂಬಂಧ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಚಿನ್ನದ ಲೇಪನ ಮಾಡುವ ಕಾರ್ಯಕ್ಕೆ ಮರುಚಾಲನೆ ದೊರೆತಂತಾಗಿದೆ. ಮುಜರಾಯಿ ದೇವಾಲಯಗಳಲ್ಲಿ ಸಂಗ್ರಹವಾಗಿರುವ ಹಣವನ್ನು ಚಿನ್ನದ ರಥ ಮಾಡುವುದಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರ ಇತರೆ ಯಾವುದೇ ಮೂಲಗಳಿಂದಲೂ ಹಣವನ್ನು ಪಡೆದುಕೊಳ್ಳುತ್ತಿಲ್ಲ ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳು ಭಾನುವಾರ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಸಿಎಂ ಎಚ್‌ಡಿಕೆ ಭರವಸೆ- ದ್ವಾರಕಾನಾಥ್‌:

ಹಿಂದೆ 2004ರಲ್ಲಿ ಅಂದಿನ ಮುಖ್ಯಮಂತ್ರಿ ಧರಂಸಿಂಗ್‌ ಕಾಲದಲ್ಲಿ ಸುಬ್ರಹ್ಮಣ್ಯ ದೇವರಿಗೆ ಒಂದು ಬಂಗಾರದ ರಥ ಅರ್ಪಣೆ ಮಾಡಬೇಕೆಂದು ತೀರ್ಮಾನ ಮಾಡಿದ್ದರು. ಅಲ್ಲದೆ ಮುಖ್ಯಮಂತ್ರಿಯಾದ ಮೇಲೆ ಬಂಗಾರದ ರಥ ಮಾಡಿಕೊಡುತ್ತೇನೆ ಎಂಬ ಮಾತು ಕೊಟ್ಟಿದ್ದರು. ಮಾತು ಕೊಟ್ಟಬಳಿಕ ಅವರಿಗೆ ಅಧಿಕಾರಿಗಳು ಯಾರೂ ಕೂಡ ಸಹಕಾರ ಕೊಡಲಿಲ್ಲ. ಅಲ್ಲದೆ ಮುಂದಿನ ಸರ್ಕಾರ ಕೂಡ ಅದನ್ನು ಜಾರಿ ಮಾಡಿಲ್ಲ. ಸದ್ಯ ಈ ಬಗ್ಗೆ ಕುಮಾರಸ್ವಾಮಿ ನನ್ನ ಜೊತೆ ಮಾತುಕತೆ ನಡೆಸಿ, ಚಾಲನೆ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಜ್ಯೋತಿಷಿ ದ್ವಾರಕಾನಾಥ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದೇಗುಲದಲ್ಲಿ ಇಂದು ಸಭೆ

ಶನಿವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಈ ಬಗ್ಗೆ ಸಮಾಲೋಚನಾ ಸಭೆ ನಡೆಸಿದರು. ಅಲ್ಲದೆ ಚಿನ್ನದ ರಥ ಯೋಜನೆ ಬಗ್ಗೆ ತಿಳಿದುಕೊಂಡರು. ಈ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವ ಸಲುವಾಗಿ ಸೋಮವಾರ ದೇಗುಲದ ಆಡಳಿತ ಮಂಡಳಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಚಿನ್ನದ ರಥ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಆಡಳಿತ ಮಂಡಳಿ ನಿರ್ಧರಿಸಲಿದೆ. ಚಿನ್ನದ ರಥ ನಿರ್ಮಾಣ ಯೋಜನೆಯ ನೂತನ ನೀಲಿನಕಾಶೆ ನಿರ್ಮಿಸಿ, ಶೀಘ್ರ ಸರಕಾರಕ್ಕೆ ಅನುಮೋದನೆಗಾಗಿ ಕಳುಹಿಸಲಾಗುತ್ತದೆ.

ಚಿನ್ನ ಅಳವಡಿಕೆ ವೇಳೆ ರಥ ನಿರ್ಮಾಣ ಸ್ಥಗಿತವಾಗಿತ್ತು

2006ರಲ್ಲಿ ರಥ ನಿರ್ಮಾಣಕ್ಕೆ 15 ಕೋಟಿ ರು. ವೆಚ್ಚದ ಅಂದಾಜು ಪಟ್ಟಿತಯಾರಿಸಲಾಗಿತ್ತು. ಅಲ್ಲದೆ ಖ್ಯಾತ ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯರ ನೇತೃತ್ವದಲ್ಲಿ ರಥ ನಿರ್ಮಾಣ ಕಾರ್ಯವು ಆರಂಭವಾಗಿತ್ತು. ಅಲ್ಲದೆ ರಥದ ಅಡ್ಡೆಗಳನ್ನು ಹಾಗೂ ರಥಕ್ಕೆ ಅಳವಡಿಸುವ ಶಿಲ್ಪಕಲಾಕೃತಿಗಳನ್ನು ನಿರ್ಮಿಸಲಾಗಿತ್ತು. ಮರದ ಕೆತ್ತನೆಗಳು ಸಮಾಪ್ತಿ ಹಂತ ತಲುಪಿತ್ತು. ಆದರೆ ಚಿನ್ನ ಅಳವಡಿಕೆ ಸಮಯದಲ್ಲಿ ಯೋಜನೆ ಸ್ಥಗಿತಗೊಂಡಿತ್ತು. ಆದುದರಿಂದ ಇಂದಿಗೂ ಕೂಡಾ ರಥದ ಅಡ್ಡೆಯು ಶ್ರೀ ದೇವಳದಲ್ಲಿದೆ. ಆದರೆ ಚಿನ್ನದ ದರದ ನಿಗದಿಯಲ್ಲಿ ಏರಿಕೆ ಕಂಡು ಬಂದ ಕಾರಣ ನಿಂತು ಹೋಗಿತ್ತು.

240 ಕಿಲೋ ಚಿನ್ನ:

2006ರಲ್ಲಿ ಸುಮಾರು 15 ಕೋಟಿ ರು. ವೆಚ್ಚದಲ್ಲಿ 240 ಕಿಲೋ ಚಿನ್ನವನ್ನು ಉಪಯೋಗಿಸಿ ರಥ ನಿರ್ಮಿಸಲು ಸರ್ಕಾರವು ಅಂದಾಜುಪಟ್ಟಿತಯಾರಿಸಿ ತಾತ್ವಿಕವಾಗಿ ಷರತ್ತು ವಿಧಿಸಿ ಅನುಮತಿ ಆದೇಶಿಸಿತ್ತು. ದೇವಳದ ವಾಸ್ತು ಸಂಪ್ರದಾಯಕ್ಕೆ ಅನುಗುಣವಾಗಿ ಪ್ರಧಾನ ಅರ್ಚಕರೊಂದಿಗೆ ಸಮಾಲೋಚಿಸಿ ಕುಕ್ಕೆ ಸುಬ್ರಹ್ಮಣ್ಯ ದೇವರ ಉತ್ಸವಕ್ಕೆ ಚಿನ್ನದ ರಥ ನಿರ್ಮಿಸುವುದು. ಉದ್ದೇಶಿತ ಕಾಮಗಾರಿಗೆ ದೇವಳದ ನಿಧಿಯಲ್ಲಿರುವ ಚಿನ್ನವನ್ನು ಉಪಯೋಗಿಸಿಕೊಂಡು ಉಳಿಕೆ ವೆಚ್ಚವನ್ನು ದೇವಳದ ನಿಧಿಯಿಂದ ಹಾಗೂ ಸಾರ್ವಜನಿಕ ಭಕ್ತರ ವಂತಿಗೆಯಿಂದ ಭರಿಸಿ ಕೈಗೊಳ್ಳುವುದು. ರಥ ನಿರ್ಮಾಣ ಸಮಿತಿಯನ್ನು ರಚನೆ ಮಾಡಿ, ಸಮಿತಿಯ ಮೂಲಕ ವಂತಿಗೆಯನ್ನು ಸಂಗ್ರಹಿಸುವುದು ಎಂಬುದಾಗಿ 2006ರಲ್ಲಿ ಸರ್ಕಾರವು ದೇವಳಕ್ಕೆ ಆದೇಶ ನೀಡಿತ್ತು.ಆದರೆ ಬಳಿಕ ಈ ಯೋಜನೆ ಸಾಕಾರಗೊಳ್ಳಲಿಲ್ಲ.