ಬೆಂಗಳೂರು(ನ.22): ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಿಯೋಗ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದೆ. ಗುರುವಾರ ಪೊಲೀಸ್‌ ಆಯುಕ್ತ ಎಂ.ಭಾಸ್ಕರ್‌ ರಾವ್‌ ಅವರನ್ನು ಭೇಟಿಯಾದ ವಿಧಾನ ಪರಿಷತ್ತಿನ ಉಪನಾಯಕ ವೈ.ಎ. ನಾರಾಯಣ ಸ್ವಾಮಿ ನೇತೃತ್ವದ ನಿಯೋಗ ದೂರು ನೀಡಿದೆ.

ನಾರಾಯಣಗೌಡ ಭಂಡತನದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದ ಮಾಜಿ ಸಿಎಂ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಸ್ವಾಮಿ ಅವರು, ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕುತ್ತಿದ್ದಾರೆ. ಶಾಸಕರನ್ನು ಗುರಿಯಾಗಿಸಿಕೊಂಡು ಈ ಪೋಸ್ಟ್‌ ಹಾಕಲಾಗುತ್ತಿದ್ದು, ಶಾಸಕರಿಗೆ ಅಪಮಾನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ‘ಜೋಕರ್ಸ್‌ ಆಫ್‌ ಬಿಜೆಪಿ’ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಶ್ವಾನಕ್ಕೆ ಹೋಲಿಸಿ, ಶ್ವಾನಕ್ಕೂ ಕಮಲ ಪಕ್ಷದಲ್ಲಿ ಉತ್ತಮ ಸ್ಥಾನವಿದೆ ಎನ್ನಲಾಗಿದೆ.

'ಪಕ್ಷದಲ್ಲಿ ಅಸಮಾಧಾನ ಇಲ್ಲ, ಎಲ್ಲ 15 ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ'

ಶ್ವಾನಕ್ಕೆ ಆಭರಣ ತೊಡಿಸಿ ಶಾಸಕ ಎಂಬ ಶೀರ್ಷಿಕೆ ನೀಡಲಾಗಿದೆ. ಅಲ್ಲದೆ, ಈ ಚಿತ್ರಣವನ್ನು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗುವಿಗೆ ಹೋಲಿಕೆ ಮಾಡಲಾಗಿದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟಉಲ್ಲಂಘನೆ ಹಾಗೂ ಕಾನೂನುಬಾಹಿರವಾಗಿದೆ. ಕೂಡಲೇ ‘ಜೋಕರ್ಸ್‌ ಆಫ್‌ ಬಿಜೆಪಿ’ ಎಂಬ ಖಾತೆಯನ್ನು ತೆಗೆದು, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮುನಿಸು ಮರೆತ ನಟ ಜಗ್ಗೇಶ್‌: ಬಿಜೆಪಿ ಪರ ಪ್ರಚಾರ

ನಿಯೋಗದಲ್ಲಿ ಪಕ್ಷದ ಮಾಧ್ಯಮ ವಿಭಾಗದ ಸಂಚಾಲಕ ಎ.ಎಚ್‌.ಆನಂದ್‌, ಸಹ ವಕ್ತಾರ ಎಸ್‌. ಪ್ರಕಾಶ್‌, ಬೆಂಗಳೂರು ಕಾರ್ಯದರ್ಶಿ ಕೆ.ಗಣೇಶ್‌, ಸಾಮಾಜಿಕ ಜಾಲತಾಣ ರಾಜ್ಯ ಸಹ ಸಂಚಾಲಕ ಸಿದ್ದು ಪುಂಡಿಕಲ್‌ ಇದ್ದರು.