ಬೆಂಗಳೂರು, (ಸೆ.17): ಒಂದೆಡೆ ಮುಖ್ಯಮಂತ್ರಿ ಕುರ್ಚಿಗೆ ಹಗ್ಗಜಗ್ಗಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಬಿಬಿಎಂಪಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಬಿಗ್ ಫೈಟ್ ನಡೀತಿದೆ. 

ಮತ್ತೆ ಕಾಂಗ್ರೆಸ್ ಪಾಲಿಗೆ ಮೇಯರ್ ಸ್ಥಾನ ಬಿಟ್ಟುಕೊಡಲು ಜೆಡಿಎಸ್ ಒಪ್ಪಿಗೆ ಸೂಚಿಸಿದ್ದು, ಇದೇ ಸೆಪ್ಟೆಂಬರ್ 28ರಂದು ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ, ಆದರೆ, ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಹೈಡ್ರಾಮಗಳೇ ನಡೆಯುತ್ತಿವೆ. ಈ ಬಾರಿ ಪಾರ್ಟಿಗೆ ಅತೀ ಹೆಚ್ಚು ಫಂಡ್ ಯಾರು ಕೊಡ್ತಾರೋ ಅವರ ಪಾಲಿಗೆ ಮೇಯರ್ ಸ್ಥಾನ ಒಲಿಯಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
 
ಶಾಂತಿನಗರ ಕಾರ್ಪೊರೇಟರ್ ಸೌಮ್ಯ ಶಿವಕುಮಾರ್ ಹಾಗೂ ಜಯನಗರ ವಾರ್ಡ್ ಗಂಗಾಂಬಿಕೆ ಮಲ್ಲಿಕಾರ್ಜುನ ಹಾಗೂ ಗಾಂಧಿನಗರ ಕೌನ್ಸಲರ್ ಲತಾ ಕುವರಿ ರಾಥೋಡ್ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದು, ಇದಕ್ಕಾಗಿ ತಮ್ಮ ನಾಯಕರುಗಳ ದುಂಬಾಲು ಬಿದ್ದಿದ್ದಾರೆ.

ಮೇಯರ್ ಆಯ್ಕೆಯನ್ನ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಹ್ಯಾರಿಸ್‌ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ವಹಿಸಲಾಗಿದ್ದು, ನಿನ್ನೆ ತಡರಾತ್ರಿವರೆಗೂ ಈ ಮೂವರು ಸೇರಿ ಚರ್ಚೆ ನಡೆಸಿದ್ದಾರೆ. ಆದರೆ, ಮೇಯರ್ ಯಾರು ಆಗ್ತಾರೆ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.