ಬರೋಬ್ಬರಿ 32,000 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಬಾಂಡ್‌ಗಳನ್ನು ಮಾರಾಟ ಮಾಡುವುದಾಗಿ ಹಣಕಾಸು ಸಚಿವಾಲಯ ಸೋಮವಾರ ಘೋಷಿಸಿದೆ.

ನವದೆಹಲಿ (ಏ.24): ಸರ್ಕಾರಿ ಬಾಂಡ್​ಗಳಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ. ಏಪ್ರಿಲ್ 26 ರಂದು (ಶುಕ್ರವಾರ) ಎರಡು ವಿಭಾಗಗಳಲ್ಲಿ 32,000 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಬಾಂಡ್‌ಗಳನ್ನು ಮಾರಾಟ ಮಾಡುವುದಾಗಿ ಹಣಕಾಸು ಸಚಿವಾಲಯ ಸೋಮವಾರ ಘೋಷಿಸಿದೆ.

ಮೊದಲ ಲಾಟ್ 20,000 ಕೋಟಿ ಮೊತ್ತಕ್ಕೆ ಶೇ.7.1 ಗವರ್ನಮೆಂಟ್ ಸೆಕ್ಯುರಿಟಿ 2034 ಅನ್ನು ಒಳಗೊಂಡಿರುತ್ತದೆ. ಆದರೆ ಎರಡನೇ ಲಾಟ್ 12,000 ಕೋಟಿ ಮೊತ್ತಕ್ಕೆ ಶೇ.7.46 ಶೇಕಡಾ ಸರ್ಕಾರಿ ಭದ್ರತೆ 2073 ಅನ್ನು ಒಳಗೊಂಡಿರುತ್ತದೆ. ಈ ಎರಡೂ ಬಾಂಡ್‌ಗಳನ್ನು ಆರ್‌ಬಿಐ ಮುಂಬೈನಲ್ಲಿ ಬಹು ಬೆಲೆಯ ವಿಧಾನವನ್ನು ಬಳಸಿಕೊಂಡು ಬೆಲೆ ಆಧಾರಿತ ಹರಾಜಿನ ಮೂಲಕ ಹರಾಜು ಮಾಡುತ್ತದೆ. ಪ್ರತಿ ಭದ್ರತೆಯ ವಿರುದ್ಧ 2,000 ಕೋಟಿ ರೂ.ವರೆಗೆ ಹೆಚ್ಚುವರಿ ಚಂದಾದಾರಿಕೆಯನ್ನು ಉಳಿಸಿಕೊಳ್ಳಲು ಸರ್ಕಾರವು ಆಯ್ಕೆಯನ್ನು ಹೊಂದಿರುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ಹರಾಜು ಪ್ರಕ್ರಿಯೆಗಳನ್ನು ಮಾಡುತ್ತದೆ. ಸರ್ಕಾರಿ ಭದ್ರತೆಗಳ ಹರಾಜಿನಲ್ಲಿ ಸ್ಪರ್ಧಾತ್ಮಕವಲ್ಲದ ಬಿಡ್ಡಿಂಗ್ ಸೌಲಭ್ಯಕ್ಕಾಗಿ ಯೋಜನೆಯ ಪ್ರಕಾರ ಸೆಕ್ಯೂರಿಟಿಗಳ ಮಾರಾಟದ ಅಧಿಸೂಚಿತ ಮೊತ್ತದ ಶೇಕಡಾ 5 ರಷ್ಟನ್ನು ಅರ್ಹ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಹಂಚಲಾಗುತ್ತದೆ.

ಹರಾಜಿಗಾಗಿ ಸ್ಪರ್ಧಾತ್ಮಕ ಮತ್ತು ಸ್ಪರ್ಧಾತ್ಮಕವಲ್ಲದ ಬಿಡ್‌ಗಳನ್ನು ಏಪ್ರಿಲ್ 26 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಕೋರ್ ಬ್ಯಾಂಕಿಂಗ್ ಸಲ್ಯೂಷನ್‌ (ಇ-ಕುಬರ್) ವ್ಯವಸ್ಥೆಯಲ್ಲಿ ಆನ್‌ಲೈನ್ ಮುಖಾಂತರವೇ ಸಲ್ಲಿಸಬೇಕು.

ಸ್ಪರ್ಧಾತ್ಮಕವಲ್ಲದ ಬಿಡ್‌ಗಳನ್ನು ಬೆಳಿಗ್ಗೆ 10.30 ರಿಂದ 11.00 ರವರೆಗೆ ಮತ್ತು ಸ್ಪರ್ಧಾತ್ಮಕ ಬಿಡ್‌ಗಳನ್ನು ಬೆಳಿಗ್ಗೆ 10.30 ರಿಂದ 11.30 ರ ನಡುವೆ ಸಲ್ಲಿಸಬೇಕು ಎಂದು ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಹರಾಜಿನ ಫಲಿತಾಂಶವನ್ನು ಏಪ್ರಿಲ್ 26 ರಂದು (ಶುಕ್ರವಾರ) ಪ್ರಕಟಿಸಲಾಗುವುದು ಮತ್ತು ಯಶಸ್ವಿ ಬಿಡ್ದಾರರು ಏಪ್ರಿಲ್ 29 ರಂದು (ಸೋಮವಾರ) ಪಾವತಿಸಲಿದ್ದಾರೆ. ಸೆಕ್ಯೂರಿಟಿಗಳು ಆರ್‌ಬಿಐ ಮಾರ್ಗಸೂಚಿಗಳಿಗೆ ಅನುಸಾರವಾಗಿ ಕೊಟ್ಟಾಗ ಮಾತ್ರ ಬಾಂಡ್‌ ಖರೀದಿಗೆ ಅರ್ಹರಾಗಿರುತ್ತಾರೆ

ಸರ್ಕಾರಿ ಬಾಂಡ್‌ಗಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಸರ್ಕಾರವೇ ಇದನ್ನ ಬಿಡುಗಡೆ ಮಾಡುತ್ತಿರುವುದರಿಂದ ಮ್ಯೂಚುವಲ್ ಫಂಡ್ ಸೇರಿದಂತೆ ಇತರ ಬಾಂಡ್​ಗಳಿಗಿಂತಲೂ ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಸರ್ಕಾರಕ್ಕೆ ಹೆಚ್ಚುವರಿ ಹಣಕಾಸಿನ ಅಗತ್ಯ ಇದ್ದಾಗ ಈ ರೀತಿಯ ಬಾಂಡ್​ಗಳನ್ನ ಹರಾಜು ಮಾಡುತ್ತದೆ. ಇದಕ್ಕೆ ನಿರ್ದಿಷ್ಟ ಅವಧಿ ಮತ್ತು ಬಡ್ಡಿದರ ನಿಗದಿಯಾಗಿರುತ್ತದೆ. ಬಾಂಡ್ ಮಾಲಿಕರಿಗೆ ನಿಯಮಿತವಾಗಿ ಬಡ್ಡಿ ಪಾವತಿ ಮಾಡಲಾಗುತ್ತದೆ. ಅವಧಿ ಮುಗಿದ ಬಳಿಕ ಮೂಲ ಹಣವನ್ನ ಮರಳಿಸಲಾಗುತ್ತದೆ. ಹಾಗೆಯೇ, ಈ ಬಾಂಡ್​ಗಳನ್ನು ಮಾರುವಂತಿಲ್ಲ, ಅವಧಿಗೆ ಮುನ್ನ ಹಿಂಪಡೆಯುವಂತಿಲ್ಲ ಎಂಬುದು ಸೇರಿದಂತೆ ಕೆಲ ನಿಯಮಗಳೂ ಇವೆ.