ಬೆಂಗಳೂರು[ಸೆ.09]: ಪೆಟ್ರೋಲ್ ಬೆಲೆ ಹೆಚ್ಚಳ ವಿರೋಧಿಸಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಕರೆ ನೀಡಿರುವ  ಭಾರತ್ ಬಂದ್ ಗೆ  ರಾಜ್ಯದ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷ  ಜೆಡಿಎಸ್ ಕೂಡ ಬೆಂಬಲ ನೀಡಲಿದೆ.

ಸುವರ್ಣ ನ್ಯೂಸ್.ಕಾಂ ಸೋದರ ಮಾಧ್ಯಮ ಮೈ ನೇಷನ್ ನೊಂದಿಗೆ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ನಾಳಿನ ಭಾರತ್ ಬಂದ್'ಗೆ ಜೆಡಿಎಸ್ ಕೂಡ ಬೆಂಬಲ ನೀಡಲಿದೆ.  ನವದೆಹಲಿಯಲ್ಲಿ ತಾವು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಭಾಗಶಃ ಬಂದ್
ಪೆಟ್ರೋಲ್‌-ಡೀಸೆಲ್‌ ದರ ಏರಿಕೆ ವಿರೋಧಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಸೆ.10ರಂದು ಕರೆ ನೀಡಿರುವ ಭಾರತ ಬಂದ್‌ನಿಂದ ರಾಜ್ಯದಲ್ಲಿ ಸರ್ಕಾರಿ ಬಸ್‌ ಸೇವೆ, ಆಯಪ್‌ ಆಧಾರಿತ ಟ್ಯಾಕ್ಸಿ , ಆಟೋ ಸೇವೆ ಸೇರಿದಂತೆ ಕೆಲ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಬಂದ್‌ಗೆ ರಾಜ್ಯದ ಆಡಳಿತಾರೂಢ ಜೆಡಿಎಸ್‌-ಕಾಂಗ್ರೆಸ್‌ ಬೆಂಬಲ ನೀಡಿರುವ ಕಾರಣ ಹರತಾಳ ಸಂಪೂರ್ಣ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿದೆ.

ಭಾರತ್ ಬಂದ್ : ರಾಜ್ಯದಲ್ಲಿ ಏನಿರುತ್ತೇ, ಏನಿರಲ್ಲ ಸಂಪೂರ್ಣ ಮಾಹಿತಿ ವಿವರ

ಇದೇ ವೇಳೆ, ಎಐಟಿಯುಸಿ ಸಂಯೋಜಿತ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್ ಯೂನಿಯನ್‌, ಓಲಾ-ಉಬರ್‌ ಟ್ಯಾಕ್ಸಿ ಫಾರ್‌ ಶೂರ್‌ ಮಾಲೀಕರ ಸಂಘ,ಕೆಲ ಆಟೋ ಚಾಲಕರ ಸಂಘಗಳು ಬಂದ್‌ಗೆ ಬೆಂಬಲ ಘೋಷಿಸಿದ್ದು, ಅಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಾಹನಗಳನ್ನು ರಸ್ತೆಗೆ ಇಳಿಸದಿರಲು
ತೀರ್ಮಾನಿಸಿವೆ.

ಹಲವು ಸಂಘಟನೆಗಳ ಬೆಂಬಲ
ಅಂತೆಯೇ ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆ ತರಕಾರಿ ಹಣ್ಣು ಸಗಟು ಮಾರಾಟಗಾರರ ಸಂಘ, ಕನ್ನಡ ಒಕ್ಕೂಟ, ಕನ್ನಡ ಸೇನೆ, ಜಯ ಕರ್ನಾಟಕ  ಘಟನೆ ಸೇರಿದಂತೆ ಕೆಲ ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಹಾಗಾಗಿ ಆ್ಯಪ್‌ ಆಧರಿತ ಟ್ಯಾಕ್ಸಿ, ಆಟೋ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ಸೇವೆಯಲ್ಲಿ ವ್ಯತ್ಯಯವಾಗುವುದರಿಂದ ಬಂದ್‌ ಬಿಸಿ ತಟ್ಟುವ ಸಾಧ್ಯತೆಯಿದೆ.

ಅಖಿಲ ಕರ್ನಾಟಕ ಪೆಟ್ರೋಲ್‌ ಡೀಲರ್ಸ್, ಅಸೋಸಿಯೇಷನ್‌, ಬೆಂಗಳೂರು ಪ್ರವಾಸಿ ವಾಹನಗಳ ಮಾಲೀಕರ ಸಂಘ, ರಾಜ್ಯ ಲಾರಿ ಮಾಲೀಕರ ಸಂಘ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಕೆಲ ಸಂಘಟನೆಗಳು ಬಂದ್‌ಗೆ ನೈತಿಕ ಬೆಂಬಲ ನೀಡಿದ್ದು, ಸೇವೆ ಮುಂದುವರಿಸಲು ನಿರ್ಧರಿಸಿವೆ. ಇನ್ನು ಖಾಸಗಿ ಶಾಲಾ-ಕಾಲೇಜುಗಳು ರಜೆ ಘೋಷಿಸಲು ನಿರ್ಧರಿಸಿದ್ದು, ಇನ್ನು ಸರ್ಕಾರಿ ಶಾಲಾ-ಕಾಲೇಜುಗಳ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಈ ನಡುವೆ ಕೆಲ ಸಂಘಟನೆಗಳು ಇದು ರಾಜಕೀಯ ಪ್ರೇರಿತ ಬಂದ್‌ ಎಂದು ಬೆಂಬಲ ನೀಡದಿರಲು ನಿರ್ಧರಿಸಿವೆ.

ನಾಳೆ ಭಾರತ್ ಬಂದ್ : ಯಾವ ಜಿಲ್ಲೆಗೆ ರಜೆ, ಮುಂತಾದ ವಿವರಗಳ ಫುಲ್ ಡಿಟೇಲ್ಸ್

ಬಸ್‌ ರಸ್ತೆಗೆ ಇಳಿಯಲ್ಲ : ಎಐಟಿಯುಸಿ
ಸೋಮವಾರ ಭಾರತ ಬಂದ್‌ಗೆ ರಾಜ್ಯ ಸಾರಿಗೆಯ ನಾಲ್ಕು ನಿಗಮಗಳಿಂದ ಒಂದೇ ಒಂದು ಬಸ್‌ ರಸ್ತೆಗೆ ಇಳಿಯುವುದಿಲ್ಲ. ಕೆಎಸ್‌ಆರ್‌ಟಿಸಿಯಿಂದ ಅಂದು ಕರ್ತವ್ಯಕ್ಕೆ ಗೈರಾಗುವ ನೌಕರರಿಗೆ ವೇತನ ಕಡಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಇಂತಹ ಎಚ್ಚರಿಕೆಗೆ ನಾವು  ಹೆದರುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್‌-ಡೀಸೆಲ್‌ ದರ ಏರಿಸುತ್ತಲೇ ಬಂದಿವೆ.

ಇದರಿಂದ ಜನಸಾಮಾನ್ಯರು ಸೇರಿದಂತೆ ಎಲ್ಲ ವಲಯಗಳಿಗೆ ಸಮಸ್ಯೆಯಾಗಿದೆ. ಹಾಗಾಗಿ ಬಂದ್‌ ಮೂಲಕ ಸರ್ಕಾರಗಳಿಗೆ ಬಿಸಿ ಮುಟ್ಟಿಸಬೇಕಿದೆ ಎಂದು ಎಐಟಿಯುಸಿ ಯೋಜಿತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಅನಂತ ಸುಬ್ಬರಾವ್‌ ತಿಳಿಸಿದ್ದಾರೆ.

ಭಾರತ ಬಂದ್ ಗೆ ದೇಶಾದ್ಯಂತ 25ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಯುಪಿಎ ಅಂಗಪಕ್ಷಗಳಾದ ಆರ್ ಜೆಡಿ , ಎನ್ ಸಿಪಿ, ಎಡಪಕ್ಷಗಳಾದ ಸಿಪಿಐ, ಸಿಪಿಎಂ, ಸಿಪಿಐ(ಎಂಎಲ್), ಪ್ರಾದೇಶಿಕ ಪಕ್ಷಗಳಾದ ಜೆಡಿಎಸ್, ಡಿಎಂಕೆ, ಟಿಎಂಸಿ ಕೂಡ ಬೆಂಬಲ ವ್ಯಕ್ತಪಡಿಸಿವೆ.

ಇಂಗ್ಲಿಷ್ ನಲ್ಲಿ ಈ ಸುದ್ದಿ ಓದಲು ಕ್ಲಿಕ್ಕಿಸಿ : Bharat bandh: Former prime minister HD Deve Gowda lends full support (Video)