ಬುಲಂದ್‌ಶಹರ್‌[ಡಿ.08]: ಗೋಹತ್ಯೆಗೆ ಸಂಬಂಧಿಸಿದಂತೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಸಂಭವಿಸಿದ್ದ ಹಿಂಸಾಚಾರ ವೇಳೆ ಇನ್ಸ್‌ಪೆಕ್ಟರ್‌ವೊಬ್ಬರನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಸೇನಾ ಯೋಧನೊಬ್ಬನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಇನ್ಸ್‌ಪೆಕ್ಟರ್‌ ಸುಬೋಧ್‌ಕುಮಾರ್‌ಗೆ ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ ಜೀತು ಫೌಜಿ ಎಂಬಾತನೇ ಗುಂಡು ಹಾರಿಸಿರುವ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ಬುಲಂದ್‌ಶಹರ್‌ ಹಿಂಸಾಚಾರಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳಲ್ಲಿ ಜೀತು ಗೋಚರವಾಗಿದ್ದಾನೆ. ಆ ಹಿಂಸಾಚಾರ ನಡೆದ ದಿನವೇ ಆತ ಕಾಶ್ಮೀರಕ್ಕೆ ಸೇವೆಗೆ ತೆರಳಿದ್ದಾನೆ. ಈ ಹಿನ್ನೆಲೆಯಲ್ಲಿ ಜೀತು ಪತ್ತೆಗಾಗಿ ಉತ್ತರಪ್ರದೇಶದಿಂದ ಎರಡು ತಂಡಗಳನ್ನು ಜಮ್ಮು-ಕಾಶ್ಮೀರಕ್ಕೆ ರವಾನಿಸಲಾಗಿದೆ. ಘಟನೆ ನಡೆದಾಗ ಜೀತು ಫೌಜಿ ಸ್ಥಳದಲ್ಲಿ ಇದ್ದ ಎಂಬುದನ್ನು ಕುಟುಂಬ ಸದಸ್ಯರು ಕೂಡ ಖಚಿತಪಡಿಸಿದ್ದಾರೆ.

ಗೋಹತ್ಯೆ ಗಲಭೆಗೆ ಪೊಲೀಸ್, ಯುವಕ ಬಲಿ

ಬುಲಂದ್‌ಶಹರ್‌ ಸಮೀಪದ ಹಳ್ಳಿಯ ಅರಣ್ಯ ಪ್ರದೇಶದಲ್ಲಿ ಗೋವಿನ ಮೃತದೇಹ ಪತ್ತೆಯಾದ ಬಳಿಕ ಹಿಂಸಾಚಾರ ಉಂಟಾಗಿತ್ತು. ಈ ವೇಳೆ ನಾಲ್ವರು ಗಾಯಗೊಂಡಿದ್ದರು. ಪರಿಸ್ಥಿತಿ ನಿಯಂತ್ರಿಸಲು ಇನ್ಸ್‌ಪೆಕ್ಟರ್‌ ಮತ್ತು ಅವರ ತಂಡ ಗ್ರಾಮಕ್ಕೆ ಹೋದಾಗ, ಜನರು ಹರಿತ ಆಯುಧ ಹಾಗೂ ಗುಂಡಿನ ದಾಳಿ ನಡೆಸಿ ಸುಬೋಧ್‌ ಅವರನ್ನು ಕೊಂದಿದ್ದರು. ಆ ಸಂದರ್ಭದಲ್ಲಿ ಜೀತು ಫೌಜಿಯನ್ನೇ ಹೋಲುವ ವ್ಯಕ್ತಿ ಅವರ ಪಕ್ಕದಲ್ಲಿ ಇದ್ದದ್ದು ವಿಡಿಯೋದಲ್ಲಿ ಗೋಚರಿಸುವುದರಿಂದ ಅನುಮಾನ ವ್ಯಕ್ತವಾಗಿದೆ. ಇದಲ್ಲದೆ ಹಲವು ವಿಡಿಯೋಗಳಲ್ಲೂ ಜೀತು ಇದ್ದದ್ದು ಕಾಣಿಸಿದೆ.