ಬುಲಂದಶಹರ್‌ (ಡಿ. 04): ಗೋವುಗಳ ಸಾಮೂಹಿಕ ಹತ್ಯೆಯ ಸುದ್ದಿಯಿಂದ ಉದ್ರಿಕ್ತಗೊಂಡ ಗುಂಪೊಂದು ಉತ್ತರಪ್ರದೇಶದ ಪ್ರಮುಖ ನಗರವಾದ ಬುಲಂದಶಹರ್‌ನಲ್ಲಿ ಸೋಮವಾರ ಭಾರಿ ಹಿಂಸಾಚಾರ ನಡೆಸಿದೆ. ಹಿಂಸಾಚಾರ ನಿರತ ಗುಂಪಿನ ದಾಳಿಗೆ ಇನ್ಸ್‌ಪೆಕ್ಟರ್‌ ಒಬ್ಬರು ಹತ್ಯೆಯಾಗಿದ್ದಾರೆ. ಇದೇ ವೇಳೆ, ಪೊಲೀಸ್‌ ಗೋಲಿಬಾರ್‌ನಲ್ಲಿ ಯುವಕನೊಬ್ಬ ಸಾವಿಗೀಡಾಗಿದ್ದಾನೆ. ಉದ್ರಿಕ್ತರು ನಗರದಲ್ಲಿನ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಹಿಂಸಾಚಾರದ ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದ ಪೊಲೀಸರ ನಿಯೋಜಿಸಲಾಗಿದ್ದು, ಇಡೀ ಪ್ರಕರಣದ ಕುರಿತು ಎಸ್‌ಐಟಿ, ಮ್ಯಾಜಿಸ್ಪ್ರೇಟ್‌ ಮತ್ತು ಎಡಿಜಿ- ಗುಪ್ತಚರ ವಿಭಾಗದಿಂದ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಇನ್ನು ಘಟನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸಿಎಂ ಯೋಗಿ ಆದಿತ್ಯನಾಥ್‌, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

ಪ್ರಕರಣ ಹಿನ್ನೆಲೆ: ಬುಲಂದಶಹರ್‌ ಸನಿಹದ ಮಹೌ ಎಂಬ ಗ್ರಾಮದ ಅರಣ್ಯವೊಂದರಲ್ಲಿ 25 ಗೋವುಗಳನ್ನು ಸಾಯಿಸಿ ಅವುಗಳ ಅವಶೇಷಗಳನ್ನು ಹೂಳಲಾಗಿದೆ ಎಂಬ ಸುದ್ದಿ ಹರಡಿದ ತಕ್ಷಣ ಸ್ಥಳದಲ್ಲಿ ಹಿಂದೂ ಸಂಘಟನೆಗಳ ಕಾರ್ಯರ್ತರು ಸ್ಥಳದಲ್ಲಿ ಜಮಾಯಿಸಿದರು. ಬಳಿಕ ಗೋವುಗಳ ಅವಶೇಷಗಳನ್ನು ಹೊರತೆಗೆದು ಅವುಗಳನ್ನು ಟ್ರಾಕ್ಟರ್‌ಗಳಲ್ಲಿ ಚಿಂಗ್ವಾಠಿ ಪೊಲೀಸ್‌ ಠಾಣೆ ಮುಂದೆ ತಂದು ಪ್ರತಿಭಟನೆ ಆರಂಭಿಸಿದರು. ನಿರ್ದಿಷ್ಟಕೋಮಿನವರು ಈ ಕೃತ್ಯ ಎಸಗಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪರಿಸ್ಥಿತಿ ಕೈಮೀರಿದ್ದು, ಉದ್ರಿಕ್ತರು ಠಾಣೆಯ ಮೇಲೆ ಕಲ್ಲುತೂರಾಟ ಆರಂಭಿಸಿದರು. ಹೊರಗಿದ್ದ ವಾಹನಗಳು ಹಾಗೂ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿದರು. ಜೊತೆಗೆ ಸ್ಥಳದಲ್ಲಿದ್ದ ಇನ್ಸ್‌ಪೆಕ್ಟರ್‌ ಸುಬೋಧ್‌ಕುಮಾರ್‌ ಅವರ ಮೇಲೆ ಭಾರೀ ಪ್ರಮಾಣದಲ್ಲಿ ಹಲ್ಲೆ ನಡೆಸಿದ್ದಾರೆ. ಬಳಿಕ ಹೊಲವೊಂದರಲ್ಲಿ ಪೊಲೀಸ್‌ ಜೀಪಿನಲ್ಲಿ ಕುಮಾರ್‌ ಅವರ ಶವ ಸಿಕ್ಕಿದೆ. ಈ ವೇಳೆ ಉದ್ರಿಕ್ತರ ಚದುರಿಸಲು ಪೊಲೀಸರು ಗೋಲಿಬಾರ್‌ ನಡೆಸಿದಾಗ ಓರ್ವ ಯುವಕ ಸಾವಿಗೀಡಾಗಿದ್ದಾನೆ.