ವಾಷಿಂಗ್ಟನ್‌ (ಆ. 25): ಸಂವಿಧಾನದ 370ನೇ ವಿಧಿ ತೆರವು ಮಾಡಿದ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಘರ್ಷ ಸ್ಥಗಿತಕ್ಕೆ ಕಾರ್ಯಪ್ರವೃತ್ತವಾಗಿರುವ ಅಮೆರಿಕ, ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಗಾಗಿ ದ್ವಿ ಸೂತ್ರದ ಮೊರೆ ಹೋಗಿದೆ.

ಪ್ರಧಾನಿ ನರೇಂದ್ರ ಮೋದಿಗೆ ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವ

ಮೊದಲನೆಯದಾಗಿ, ಭಾರತದಲ್ಲಿ ಯಾವುದೇ ರೀತಿಯ ಭಯೋತ್ಪಾದನೆ ಅಥವಾ ಭಯೋತ್ಪಾದಕ ಕೃತ್ಯಗಳಿಗೆ ಹಣ ಸಂದಾಯ ಅಥವಾ ಇತರೆ ಸಹಕಾರ, ಗಡಿಯಲ್ಲಿ ಉಗ್ರರ ಅಕ್ರಮ ನುಸುಳುವಿಕೆಯಲ್ಲಿ ಪಾಲ್ಗೊಳ್ಳದಂತೆ ಪಾಕಿಸ್ತಾನದ ಮೇಲೆ ಅಮೆರಿಕ ತೀವ್ರ ಒತ್ತಡ ಹೇರುವುದು.

ಎರಡನೇಯದಾಗಿ, 370ನೇ ವಿಧಿ ರದ್ದುಗೊಳಿಸಿದ ಬಳಿಕ ನಿಷೇಧಾಜ್ಞೆ ಹಾಗೂ ಭೀತಿಯಲ್ಲೇ ಇರುವ ಜಮ್ಮು-ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿ ನಿರ್ಮಾಣ ಮಾಡಲು ಭಾರತ ಮುಂದಾಗಬೇಕು. ಅಲ್ಲದೆ, ಅಲ್ಲಿನ ಜನತೆಯ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಭರವಸೆ, ಗೃಹ ಬಂಧನದಲ್ಲಿರುವ ಇತರ ರಾಜಕೀಯ ಮುಖಂಡರ ಬಿಡುಗಡೆ ಹಾಗೂ ಸಂವಹನ ಮಾಧ್ಯಮಗಳ ಮುಕ್ತ ಸ್ವಾತಂತ್ರ್ಯಕ್ಕೆ ಅನುವಾಗುವಂತೆ ಭಾರತದ ಮನವೊಲಿಸುವುದಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರಿ ಮುಖಭಂಗ, ವಹಿಸಿಕೊಂಡು ಮಂಗನಾದ ಚೀನಾ!

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು, ‘ಗಡಿ ರೇಖೆ ಮೂಲಕ ಉಗ್ರರನ್ನು ಭಾರತಕ್ಕೆ ರವಾನಿಸುವ ಕೃತ್ಯವನ್ನು ಪಾಕಿಸ್ತಾನ ನಿಲ್ಲಿಸಬೇಕು. ಅಲ್ಲದೆ, ಈ ಹಿಂದೆ ಭಾರತದ ಮೇಲೆ ದಾಳಿ ಎಸಗಿದ ತನ್ನ ನೆಲದಲ್ಲಿರುವ ಉಗ್ರ ಸಂಘಟನೆಗಳನ್ನು ಪತ್ತೆ ಮಾಡಬೇಕು ಎಂದು ಟ್ರಂಪ್‌ ಅವರು ಪಾಕಿಸ್ತಾನಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ’ ಎಂದು ಹೇಳಿದರು.

ಕಾಶ್ಮೀರದಲ್ಲಿನ ಪ್ರಸ್ತುತ ಸಂದರ್ಭ ದುರುಪಯೋಗಪಡಿಸಿಕೊಂಡು, ಭಾರೀ ಪ್ರಮಾಣದಲ್ಲಿ ಉಗ್ರರನ್ನು ಭಾರತದೊಳಕ್ಕೆ ನುಗ್ಗಿಸಿ 1989ರ ರೀತಿ ಭಾರತದ ಗಡಿಯಲ್ಲಿ ರಾಜಕೀಯ ಪ್ರಭಾವ ಬೀರುವ ಯತ್ನ ನಡೆಸಿದ್ದೆ ಆದಲ್ಲಿ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದೆ.