ಪ್ರಧಾನಿ ನರೇಂದ್ರ ಮೋದಿಗೆ ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿ|  'ಆರ್ಡರ್ ಆಫ್ ಜಯೀದ್' ಪ್ರಶಸ್ತಿಗೆ ಭಾಜನರಾದ ಭಾರತದ ಪ್ರಧಾನಿ ಮೋದಿ| ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುವಲ್ಲಿ ನಿರ್ವಹಿಸಿದ ಪಾತ್ರ ಮೆಚ್ಚಿ ಪ್ರಶಸ್ತಿ| ಯುಎಇ ಸಂಸ್ಥಾಪಕ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಜನ್ಮ ಶತಮಾನೋತ್ಸವ ಸಂದರ್ಭ|

ಅಬುದಾಬಿ(ಆ.24): ಪ್ರಧಾನಿ ನರೇಂದ್ರ ಮೋದಿಯವರಿಗೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್ ಆಫ್ ಜಯೀದ್' ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೋದಿಯವರ ಶ್ಲಾಘನೀಯ ಪ್ರಯತ್ನವನ್ನು ಮೆಚ್ಚಿ ಈ ಅತ್ಯುನ್ನತ ಗೌರವ ನೀಡಿ ಸನ್ಮಾನಿಸಲಾಗಿದೆ.

"ಯುಎಇ ಸಂಸ್ಥಾಪಕ ಪಿತಾಮಹ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಹೆಸರಿನಲ್ಲಿ ಈ ಪ್ರಶಸ್ತಿ ಇದ್ದು ವಿಶೇಷ ಮಹತ್ವ ಪಡೆದುಕೊಂಡಿದೆ.ಇದನ್ನು ಶೇಖ್ ಜಾಯೆದ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ನೀಡಲಾಯಿತು" ಎಂದು ವಿದೇಶಾಂಗ ಸಚಿವಾಲಯ (ಎಂಇಎ )ಹೇಳಿಕೆಯಲ್ಲಿ ತಿಳಿಸಿದೆ.

Scroll to load tweet…

ಈ ಹಿಂದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಾಣಿ ಎಲಿಜಬೆತ್ II ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿ ಹಲವರಿಗೆ 'ಆರ್ಡರ್ ಆಫ್ ಜಯೀದ್' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭಾರತ, ಯುಎಇ ಸಾಂಸ್ಕೃತಿಕ, ಧಾರ್ಮಿಕ ಮತ್ತು ಆರ್ಥಿಕ ಕ್ಷೇತ್ರದ ನಿಕಟ ಮತ್ತು ಬಹುಮುಖಿ ಸಂಬಂಧ ಉತ್ತಮಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಶ್ರಮಿಸಿದ್ದಾರೆ. ಅವರ ಈ ಪ್ರಯತ್ನಕ್ಕೆ ಪ್ರತಿಫಲವಾಗಿ ಯುಎಇ ಅವರನ್ನು ಆತ್ಮೀಯವಾಗಿ ಗೌರವಿಸುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.