ಎನ್‌ಆರ್‌ಸಿ ವಿವಾದ: 41 ಲಕ್ಷ ಅಸ್ಸಾಮಿಗಳ ಭವಿಷ್ಯ ತೀರ್ಮಾನ

ಅಸ್ಸಾಮಿಗಳೋ? ಅಥವಾ ಬಾಂಗ್ಲಾದಿಂದ ವಲಸೆ ಬಂದ ಆಸಾಮಿಗಳೋ? ಅಸ್ಸಾಂಗಿಂದು ಪೌರತ್ವ ಪರೀಕ್ಷೆ | 41 ಲಕ್ಷ ಜನರ ಭವಿಷ್ಯ ಇಂದು ನಿರ್ಧಾರ | 3.29 ಕೋಟಿ- ಪೌರತ್ವ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು | 2.9 ಕೋಟಿ- ಅಸ್ಸಾಂ ಪ್ರಜೆಗಳೆಂದು ಪರಿಗಣಿತವಾದವರು

All need to know What is NRC and what happens to 40 lakh people left out in the draft

ಎನ್‌ಆರ್‌ಸಿ ಅಥವಾ ರಾಷ್ಟ್ರೀಯ ನಾಗರಿಕ ನೋಂದಣಿಯ ಅಂತಿಮ ಪಟ್ಟಿಯನ್ನು ಇಂದು ಕೇಂದ್ರ ಸರ್ಕಾರ ಪ್ರಕಟಿಸುತ್ತಿದೆ. ಇದರೊಂದಿಗೆ ಹಲವು ದಶಕಗಳಿಂದ ಕಗ್ಗಂಟಾಗಿದ್ದ ಅಸ್ಸಾಂನ ಮೂಲ ನಾಗರಿಕರು ಯಾರು, ವಿದೇಶಿಗರು ಯಾರು ಎನ್ನುವುದು ಖಚಿತವಾಗಲಿದೆ.

1951 ರಲ್ಲಿ ನಡೆದ ಜನ ಗಣತಿಯ ಪ್ರಕಾರ ಸಂಗ್ರಹಿಸಿದ್ದ ಅಸ್ಸಾಂನ ಮೂಲ ನಿವಾಸಿಗಳ ದತ್ತಾಂಶದಲ್ಲಿನ ನಾಗರಿಕರ ಹೆಸರು, ಕುಟುಂಬಗಳ ಸಂಖ್ಯೆ, ಆಸ್ತಿ-ಪಾಸ್ತಿ ಮತ್ತಿತರ ದಾಖಲೆಗಳು ಪರಿಷ್ಕೃತಗೊಂಡು ಪ್ರಕಟವಾಗಲಿವೆ. ಒಂದು ವೇಳೆ ಪಟ್ಟಿಯಲ್ಲಿ ಹೆಸರು ಇಲ್ಲದವರು ಅಸ್ಸಾಂ ಮೂಲ ನಿವಾಸಿಗಳಲ್ಲ ಎನ್ನುವುದು ಖಚಿತ. ಈ ಹಿನ್ನೆಲೆಯಲ್ಲಿ ಎನ್‌ಆರ್‌ಸಿ ಅಂದರೆ ಏನು, ಈ ಪಟ್ಟಿಯಿಂದ ಹೊರಗುಳಿದವರ ಕತೆ ಏನು, ಅವರ ಮುಂದಿನ ಹಾದಿ ಏನು ಎಂಬ ವಿಸ್ತೃತ ವಿವರ ಇಲ್ಲಿದೆ.

3 ದಿನದಲ್ಲಿ ಎನ್‌ಆರ್‌ಸಿ ಫೈನಲ್ ಪಟ್ಟಿ ಪ್ರಕಟ: ಅಹೋರಾತ್ರಿ ಕೆಲಸ

ಏನಿದು ಎನ್‌ಆರ್‌ಸಿ ವಿವಾದ?

ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಅಸ್ಸಾಂ ರಾಜ್ಯದಲ್ಲಿನ ಮೂಲ ನಿವಾಸಿಗಳು ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದವರನ್ನು ಪ್ರತ್ಯೇಕಿಸಲು ಇರುವ ಪಟ್ಟಿ. 1951ರಲ್ಲಿ ನಡೆದ ಜನಗಣತಿಯನ್ನು ಪರಿಗಣಿಸಿ ಭಾರತ ಸರ್ಕಾರ ಜಾರಿಗೆ ತಂದ ವ್ಯವಸ್ಥೆಯಾಗಿದೆ. 80ರ ದಶಕದಲ್ಲಿ ಬಾಂಗ್ಲಾ ದೇಶದಿಂದ ಭಾರತಕ್ಕೆ ಒಳನುಸುಳುವವರ ಸಂಖ್ಯೆ ಹೆಚ್ಚಾಯಿತು. 1971ರಲ್ಲಿ ಬಾಂಗ್ಲಾ ಮತ್ತು ಭಾರತ ದೇಶಗಳ ನಡುವೆ ನಡೆದ ಒಪ್ಪಂದದೊಂದಿಗೆ 1971ಕ್ಕೂ ಮೊದಲು ವಲಸೆ ಬಂದವರನ್ನು ಅಸ್ಸಾಂ ಮೂಲದವರೆಂದು ಪರಿಗಣಿಸಲು ಅವಕಾಶ ನೀಡಲಾಯಿತು.

ಆದರೂ ಒಳ ನುಸುಳುವವರ ಸಂಖ್ಯೆ ಮಿತಿ ಮೀರಿದ್ದರಿಂದ ಅಸ್ಸಾಂ ಸಾಂಸ್ಕೃತಿಕ, ಆರ್ಥಿಕ ವ್ಯವಸ್ಥೆಯ ಭಾರಿ ಬದಲಾವಣೆಗೆ ಕಾರಣವಾಯಿತು. ಇದರೊಂದಿಗೆ ಮೂಲ ನಿವಾಸಿಗಳು ಮತ್ತು ವಲಸಿಗರ ನಡುವೆ ಘರ್ಷಣೆ ಆರಂಭವಾಯಿತು. ಅದು ತಾರಕಕ್ಕೇರಿ ದೊಡ್ಡ ಮಟ್ಟದ ಕ್ರಾಂತಿಯ ಬೆಂಕಿಯನ್ನು ಹೊತ್ತಿಸಿತು. ಅಸ್ಸಾಂ ವಿದ್ಯಾರ್ಥಿ ಪರಿಷತ್‌ ಉದಯಿಸಲೂ ಕಾರಣವಾಯಿತು.

ವಲಸಿಗರನ್ನು ಹೊರ ಹಾಕುವಂತೆ ಕೂಗು ಹೆಚ್ಚಾಯಿತು. ಮತದಾರರ ಪಟ್ಟಿಗೆ ಸೇರಿದ್ದ ವಲಸಿಗರ ಮತಗಳಿಗಾಗಿ ಆರಂಭದಲ್ಲಿ ರಾಜಕೀಯ ಪಕ್ಷಗಳು ಹೋರಾಟಕ್ಕೆ ಬೆಂಬಲ ನೀಡಲೇ ಇಲ್ಲ. ಹೋರಾಟಕ್ಕೆ ಸೂಕ್ತ ಬೆಂಬಲ ಸಿಗದಿದ್ದಾಗ ಪ್ರಕರಣ ಕಾನೂನಿನ ಹಾದಿ ಹಿಡಿಯಿತು. ಅಸ್ಸಾಂ ಮೂಲ ನಿವಾಸಿಗಳು ನ್ಯಾಯಕ್ಕಾಗಿ ನ್ಯಾಯಾಂಗದ ಕದ ತಟ್ಟಿದರು. ಇದೇ ವಿಚಾರ ಸುಪ್ರೀಂಕೋರ್ಟ್‌ ಮೆಟ್ಟಿಲನ್ನು ಏರಿತು.

ಅಕ್ರಮ ವಲಸಿಗರ ಓಡಿಸಲು ಪ್ಲಾನ್: ಏ. 1ರಿಂದ ದೇಶಾದ್ಯಂತ ಜನಸಂಖ್ಯಾ ನೋಂದಣಿ!

1971ರ ಮಾರ್ಚ್ 24ರ ಗಡುವು ಏಕೆ?

ಎನ್‌ಆರ್‌ಸಿಯಲ್ಲಿ 1971ರ ಮಾ.24ಕ್ಕೂ ಮುನ್ನ ಅಸ್ಸಾಂನಲ್ಲಿದ್ದವರನ್ನು ಹಾಗೂ ಅವರ ವಂಶಜರನ್ನು ಮಾತ್ರ ಅಸ್ಸಾಮಿ​ಗಳೆಂದು ಪರಿಗಣಿಸಲು ನಿರ್ಧರಿಸ​ಲಾಗಿದೆ. ಕಾರಣ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಇದ್ದಾಗ, 1971ರ ಮಾಚ್‌ರ್‍ 25ರಂದು ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾ​ಯಿತು. ಅಂತಿಮವಾಗಿ 1971ರ ಡಿಸೆಂಬರ್‌ 6ರಂದು ಪಾಕಿಸ್ತಾನದಿಂದ ಪ್ರತ್ಯೇಕಗೊಂಡು ಬಾಂಗ್ಲಾದೇಶ ಸ್ವತಂತ್ರವಾಯಿತು.

ಆ ಸಂದರ್ಭದಲ್ಲಿ ವಲಸಿಗರು ಅಕ್ರಮವಾಗಿ ಅಸ್ಸಾಂಗೆ ಬಂದು ನೆಲೆಸಿದ್ದರು. ಅಲ್ಲದೆ ಅಸ್ಸಾಂ ವಿದ್ಯಾರ್ಥಿ ಸಂಘಟನೆಗಳೊಂದಿಗೆ 1985ರ ಆಗಸ್ಟ್‌ 15ರಂದು ನಡೆದ ಒಪ್ಪಂದದ ಅನ್ವಯ ಕೆಲವೊಂದು ಮಾಗ​ರ್‍ಸೂಚಿಗಳನ್ನು ರಚಿಸಿಕೊಳ್ಳಲಾಗಿತ್ತು. ಅದರಲ್ಲಿ, 1971ರ ಮಾಚ್‌ರ್‍ 24ರ ಒಳಗೆ ಅಸ್ಸಾಂ ಪ್ರವೇಶಿಸಿದವರು ಮಾತ್ರ ನೈಜ ಅಸ್ಸಾಮಿಗಳು ಎಂದು ಪ್ರಸ್ತಾಪಿ​ಸಲಾಗಿದೆ.

41 ಲಕ್ಷ ಜನರ ಭವಿಷ್ಯದ ಪ್ರಶ್ನೆ

ಎನ್‌ಆರ್‌ಸಿ ಪಟ್ಟಿಯಲ್ಲಿ ಹೆಸರು ಇದ್ದರೆ ಮಾತ್ರ ಭಾರತೀಯ ಅಥವಾ ಅಸ್ಸಾಂ ಮೂಲ ನಿವಾಸಿ ಎಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ 2015ರಲ್ಲಿ ಸರ್ಕಾರ ಅರ್ಜಿ ಸ್ವೀಕಾರ ಆರಂಭಿಸಿತ್ತು. ನಾಗರಿಕತ್ವ ಸಾಬೀತುಪಡಿಸಲು ಅವರ ಹೆಸರು 1951ರ ಪಟ್ಟಿಯಲ್ಲಿ ಅಥವಾ 1971ರ ಪಟ್ಟಿಯಲ್ಲಿ ಇರಬೇಕಿತ್ತು. ಒಂದು ವೇಳೆ ಪಟ್ಟಿಯಲ್ಲಿ ಹೆಸರು ಇಲ್ಲದವರು ಭೂ ದಾಖಲೆ, ಪಾಸ್‌ಪೋರ್ಟ್‌, ಶಾಶ್ವತ ವಾಸ್ತವ್ಯ ಪ್ರಮಾಣ ಪತ್ರ ಇದರಲ್ಲಿ ಯಾವುದಾದರೂ ಒಂದನ್ನು ನೀಡಿ ನೋಂದಣಿ ಮಾಡಿಕೊಳ್ಳಬಹುದಿತ್ತು.

ಹೀಗೆ ಹೆಸರು ಸೇರಿಸಲ್ಪಟ್ಟವರ ಮೊದಲ ಪಟ್ಟಿ2017ರಲ್ಲಿ ಪ್ರಕಟವಾದಾಗ ಪಟ್ಟಿಯಲ್ಲಿದವರ ಸಂಖ್ಯೆ 1.9 ಕೋಟಿ ಮಂದಿ. ಅಂದರೆ ಅಷ್ಟುಮಂದಿ ನೋಂದಣಿ ಆಗಿದ್ದರು. ಮತ್ತೊಮ್ಮೆ ಅವಕಾಶ ನೀಡಿದಾಗ 3.29 ಕೋಟಿ ಜನ ಅರ್ಜಿ ಸಲ್ಲಿಸಿದ್ದರು. ಆಗ 2.9 ಕೋಟಿ ಜನರ ಹೆಸರು ಪಟ್ಟಿಯಲ್ಲಿತ್ತು. ಆದರೂ ಇನ್ನೂ 41 ಲಕ್ಷ ಮಂದಿ ಪಟ್ಟಿಯಿಂದ ಹೊರಗುಳಿದಿದ್ದರು. ಈ ಅವರ ಭವಿಷ್ಯ ಇಂದು ಪ್ರಕಟವಾಗುವ ಪಟ್ಟಿಯೊಂದಿಗೆ ನಿರ್ಧಾರವಾಗಲಿದೆ.

ಪೌರತ್ವ ಸಾಬೀತಿಗಿತ್ತು ಅವಕಾಶ

ಸುಪ್ರೀಂಕೋರ್ಟ್‌ ನೀಡಿರುವ ಆದೇಶದಲ್ಲಿ ಎನ್‌ಆರ್‌ಸಿ ವರದಿಯೇ ಅಂತಿಮವಲ್ಲ. ಹಾಗಾಗಿ ಪಟ್ಟಿಯಲ್ಲಿ ಹೆಸರು ಇಲ್ಲದವರ ಮುಂದೆ ಹಲವು ಆಯ್ಕೆಗಳಿವೆ. ಅವರು ಭಾರತದ ನಿವಾಸಿಗಳೆಂದು ದಾಖಲೆಗಳ ಸಮೇತ ಸಾಬೀತು ಪಡಿಸಬೇಕು. ಅಲ್ಲದೆ ಆಕ್ಷೇಪಣೆ ಸಲ್ಲಿಸಲು ಸುಪ್ರೀಂಕೋರ್ಟ್‌ 2018ರ ಆ.30ರಿಂದ ಸೆ.28ರವರೆಗೂ ಅವಕಾಶ ನೀಡಿತ್ತು. ಆ ವೇಳೆಯಲ್ಲಿ ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಪರಿಷ್ಕರಿಸಿ 2018ರ ಡಿಸೆಂಬರ್‌ನಲ್ಲಿ ಮರು ಪಟ್ಟಿಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ಹೆಸರು ಇಲ್ಲದವರ ಹೆಸರನ್ನು ಮತದಾರರ ಪಟ್ಟಿಯಿಂದಲೂ ತೆಗೆದು ಹಾಕಲಾಯಿತು. ಇದನ್ನೂ ಆಕ್ಷೇಪಿಸಿ ಎನ್‌ಆರ್‌ಸಿಗಾಗಿಯೇ ಸ್ಥಾಪಿಸಲಾಗಿರುವ ನ್ಯಾಯಾಧಿಕರಣದ ಮುಂದೆ ವಿಷಯ ಪ್ರಸ್ತಾಪಿಸಲು ಅವಕಾಶವಿತ್ತು.

ಹೈಕೋರ್ಟ್‌, ಸುಪ್ರೀಂನಲ್ಲಿ ಪ್ರಶ್ನಿಸಬಹುದು

ಭಾರತದ ಮೂಲ ನಿವಾಸಿ ಅಥವಾ ಅಸ್ಸಾಂನಲ್ಲಿಯೇ ಹುಟ್ಟಿದವರು ಎನ್ನಲು ಇರುವ ಅವಕಾಶ ಇನ್ನೂ ಇದೆ. ಅವರು ತಮ್ಮ ಗುರುತನ್ನು ತಿಳಿಸುವ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಿ ತಮ್ಮ ಮೂಲದ ಬಗ್ಗೆ ಸಾಬೀತು ಪಡಿಸಬಹುದು. ಇದಕ್ಕಾಗಿ ದಾಖಲೆಗಳನ್ನು ಸಲ್ಲಿಸಿ, ಪಟ್ಟಿಯಲ್ಲಿ ಹೆಸರು ನೋಂದಾಯಿಸಬಹುದು.

ಹೆಸರು ಪಟ್ಟಿಯಲ್ಲಿದ್ದವರ ಮುಂದಿನ ಆಯ್ಕೆಗಳು ಬಾಂಗ್ಲಾ ದೇಶ ಒಪ್ಪಬೇಕು

ಕಾನೂನು ಹೋರಾಟದ ಕ್ಷಣಗಳು ಮುಗಿದಿವೆ. ಪಟ್ಟಿಯಲ್ಲಿ ಹೆಸರು ಇಲ್ಲದವರನ್ನು ತಕ್ಷಣ ದೇಶದಿಂದ ಹೊರ ಹಾಕಲು ಆಗಲ್ಲ. ಭಾರತಕ್ಕೆ ಅನಧಿಕೃತವಾಗಿ ವಲಸೆ ಬಂದವರನ್ನು ಬಾಂಗ್ಲಾ ದೇಶವು ತನ್ನ ದೇಶದ ಪ್ರಜೆಗಳೆಂದು ಒಪ್ಪಿಕೊಂಡು ಅವರನ್ನು ತನ್ನ ದೇಶಕ್ಕೆ ವಾಪಸ್‌ ಕರೆಸಿಕೊಳ್ಳಬೇಕು. ಆದರೆ ಹಾಗೆ ಆಗುವ ಸಾಧ್ಯತೆಗಳಿಲ್ಲ. ಈಗಾಗಲೇ ಬಾಂಗ್ಲಾ ದೇಶವು ತನ್ನ ನಿವಾಸಿಗಳು ಭಾರತಕ್ಕೆ ವಲಸೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದೆ. ಅವರನ್ನು ಮತ್ತೆ ತನ್ನ ದೇಶದೊಳಗೆ ಸೇರಿಸಿಕೊಳ್ಳುವ ಸಾಧ್ಯತೆ ಬಲು ಕ್ಷೀಣ.

ವರ್ಕಿಂಗ್‌ ಪರ್ಮಿಟ್‌ ಸಿಗುತ್ತಾ?

ಹೀಗೊಂದು ಸಾಧ್ಯತೆ ಇದೆ. ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಭಾರತ ಸರ್ಕಾರ ಕೆಲಸದ ಲೈಸೆನ್ಸ್‌ ನೀಡುವ ಸಾಧ್ಯತೆ ಇದೆ. ವಲಸಿಗರು ಅಸ್ಸಾಂ ಮತ್ತು ಭಾರತದಲ್ಲಿ ತಾವು ದೀರ್ಘಾವಧಿ ವರೆಗೆ ಕೆಲಸ ಮಾಡಿಕೊಂಡು ಇರಲು ಅವಕಾಶ ನೀಡಲೂಬಹುದು.

ಆಸ್ತಿ ಜಪ್ತಿ?

ಅಕ್ರಮವಾಗಿ ಭಾರತಕ್ಕೆ ಬಂದ ಹಲವು ವಲಸಿಗರು ಇಲ್ಲಿ ನೆಲೆಸಿ ಕೆಲಸ ಗಿಟ್ಟಿಸಿ, ಉದ್ಯೋಗ, ವ್ಯಾಪಾರ ಮಾಡಿ ಆಸ್ತಿ ಸಂಪಾದಿಸಿದ್ದಾರೆ. ಪಟ್ಟಿಯಲ್ಲಿ ಹೆಸರು ಇಲ್ಲದವರನ್ನು ಗುರುತಿಸಿ ಅವರು ಭಾರತದಲ್ಲಿ ಗಳಿಸಿರುವ ಆಸ್ತಿ, ಇನ್ನಿತರ ಸ್ವತ್ತುಗಳನ್ನು ಜಪ್ತಿ ಮಾಡುವ ಸಾಧ್ಯತೆಯೂ ಇದೆ.

ಅಕ್ರಮ ವಲಸಿಗರು ಎಲ್ಲಿದ್ದರೂ ಬಿಡಲ್ಲ: ಅಮಿತ್ ಶಾ!

ಆಶ್ರಯ ನೀಡುತ್ತಾ?

ಭಾರತ ಸರ್ಕಾರ ನುಸುಳುಕೋರರನ್ನು ತನ್ನ ವಶಕ್ಕೆ ಪಡೆದು ಅವರನ್ನು ನಿರಾಶ್ರಿತರು ಎಂದು ಪರಿಗಣಿಸಬಹುದು. ಅವರಿಗೆ ನಿರಾಶ್ರಿತ ಕೇಂದ್ರಗಳನ್ನು ತೆರೆದು ಅಲ್ಲಿ ಆಶ್ರಯ ನೀಡಬಹುದು. ಅಲ್ಲದೆ ಇಂತಹ ನಿರಾಶ್ರಿತರಿಗೆ ಕೆಲ ದೇಶಗಳು ಆಶ್ರಯ ನೀಡಲು ಮುಂದೆ ಬರಬಹುದು. ಅಲ್ಲದೆ ವಿಶ್ವ ಸಂಸ್ಥೆಯೂ ಇವರಿಗೆ ನೆರವು ನೀಡಲೂ ಬಹುದು.

ಅಕ್ರಮ ವಲಸಿಗರ ಸಮಸ್ಯೆ ಅಸ್ಸಾಂನಲ್ಲೇ ಅತಿ ಹೆಚ್ಚು

ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡೇ ಇರುವ ಅಸ್ಸಾಂನಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರ ಸಮಸ್ಯೆ ಹೆಚ್ಚು. ಸ್ವಾತಂತ್ರ್ಯಾನಂತರ 1971ರಲ್ಲಿ ಪಾಕಿಸ್ತಾನದಿಂದ ವಿಭಜನೆಯಾಗಿ ಬಾಂಗ್ಲಾದೇಶ ಸ್ಥಾಪನೆಯಾಗುವುದಕ್ಕೂ ಮೊದಲು ಹಾಗೂ ನಂತರ ವಲಸಿಗರು ಅಕ್ರಮವಾಗಿ ಅಸ್ಸಾಂಗೆ ದೊಡ್ಡ ಪ್ರಮಾಣದಲ್ಲಿ ನುಸುಳಿದ್ದರು.

1972ರ ಮಾರ್ಚ್ 19ರಂದು ಭಾರತ ಮತ್ತು ಬಾಂಗ್ಲಾ ನಡುವೆ ಶಾಂತಿ ಒಪ್ಪಂದ ಏರ್ಪಡುವವರೆಗೂ ಬಾಂಗ್ಲಾದಿಂದ ಭಾರತಕ್ಕೆ ವಲಸೆ ಬರುವುದು ಮುಂದುವರೆದಿತ್ತು. ಮಾಹಿತಿ ಪ್ರಕಾರ ಪ್ರಕಾರ 50 ಲಕ್ಷ ಅಕ್ರಮ ವಲಸಿಗರಿರಬಹುದೆಂದು ಅಂದಾಜಿಸಲಾಗಿದೆ.

ದೇಶಾದ್ಯಂತ ಎನ್‌ಆರ್‌ಸಿ?

ಸದ್ಯ ಅಸ್ಸಾಂನಲ್ಲಿ ಮಾತ್ರ ಇರುವ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ದೇಶಾದ್ಯಂತ ವಿಸ್ತರಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿನೀಡುವಂತೆ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೇಶದ ಮೂಲೆ ಮೂಲೆಯಲ್ಲಿರುವ ಅಕ್ರಮ ನುಸುಳುಕೋರರನ್ನು ಗುರುತಿಸಿ ಗಡಿಪಾರು ಮಾಡುತ್ತೇವೆ.

ಅದಕ್ಕಾಗಿ ದೇಶಾದ್ಯಂತ ಎನ್‌ಆರ್‌ಸಿ ವಿಸ್ತರಿಸಲು ಬದ್ಧ ಎಂದಿದ್ದರು. ಕರ್ನಾಟಕ ಸಂಸದ ತೇಜಸ್ವಿ ಸೂರ್ಯ ಕೂಡ ಸಂಸತ್ತಿನಲ್ಲಿ ಭಾಷಣ ಮಾಡುವ ವೇಳೆ ಕರ್ನಾಟಕದಲ್ಲೂ ಬಾಂಗ್ಲಾ ದೇಶಿಗರು ಅಕ್ರಮವಾಗಿ ನೆಲೆಸಿದ್ದಾರೆ ರಾಜ್ಯದ ಜನರ ಉದ್ಯೋಗ ಕಸಿದು ರಾಜ್ಯದ ಆರ್ಥಿಕತೆಗೆ ಸವಾಲಾಗಿದ್ದಾರೆ. ಹಾಗಾಗಿ ಕರ್ನಾಟಕದಲ್ಲೂ ಎನ್‌ಆರ್‌ಸಿ ಜಾರಿ ಮಾಡುವಂತೆ ಒತ್ತಾಯಿಸಿದ್ದರು.

- ಪ್ರಶಾಂತ್ ಕೆ ಪಿ 

Latest Videos
Follow Us:
Download App:
  • android
  • ios