3 ದಿನದಲ್ಲಿ ಎನ್‌ಆರ್‌ಸಿ ಫೈನಲ್ ಪಟ್ಟಿ ಪ್ರಕಟ: ಅಹೋರಾತ್ರಿ ಕೆಲಸ
ಎನ್‌ಆರ್‌ಸಿ ಅಂತಿಮ ಪಟ್ಟಿ ಪ್ರಕಟಕ್ಕೆ 3 ದಿನ ಬಾಕಿ ಆಹೋರಾತ್ರಿ ಭರ್ಜರಿ ಕೆಲಸ| ಜಿಲ್ಲಾ , ಸರ್ಕಲ್ ಹಾಗೂ ಬ್ಲಾಕ್ ಮಟ್ಟದಲ್ಲಿ ಮಾಹಿತಿ ಸಂಗ್ರಹ
ಗುವಾಹಟಿ[ಆ.29]: ಅಕ್ರಮ ವಲಸಿಗರನ್ನು ಹೊರಹಾಕಲು ಅಸ್ಸಾಂನಲ್ಲಿ ರೂಪಿಸುತ್ತಿರುವ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿ ಪ್ರಕಟಕ್ಕೆ ಕೇವಲ 3 ದಿನ ಮಾತ್ರ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ದೋಷ ರಹಿತ ಪಟ್ಟಿತಯಾರಿಕೆಗಾಗಿ ಸಾವಿರಾರು ಸರ್ಕಾರಿ ನೌಕರರು ಅಹೋರಾತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲಾ , ಸರ್ಕಲ್ ಹಾಗೂ ಬ್ಲಾಕ್ ಮಟ್ಟದಲ್ಲಿ ಮಾಹಿತಿ ಸಂಗ್ರಹ ಪೂರ್ಣವಾಗಿದ್ದು, ಯಾವುದೇ ಅರ್ಹ ನಾಗರಿಕ ಹೆಸರು ಬಿಟ್ಟುಹೋಗದಂತೆ ಅಧಿಕಾರಿಗಳು ಎಚ್ಚರ ವಹಿಸಿ ಕೆಲಸ ಮಾಡುತ್ತಿದ್ದಾರೆ. ಗುಣಮಟ್ಟನಿಯಂತ್ರಣ ಪರಿಶೀಲನೆ ನಡೆಯುತ್ತಿದ್ದು, ದೋಷ ರಹಿತ ಪಟ್ಟಿಗಾಗಿ ಆ.31ರ ಅಂತಿಮ ದಿನದವರೆಗೂ ಇದು ಮುಂದುವರಿಯಲಿದೆ.
ಮಾಹಿತಿ ಸಂಗ್ರಹ ಮಾಡುವ ಅಧಿಕಾರಿಗಳು ಹಲವು ಇಲಾಖೆ, ಗಡಿ ಪೊಲೀಸ್ ವಿಭಾಗ ಹಾಗೂ ವಿದೇಶಿ ನ್ಯಾಯಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನ್ಯಾಯಾಲಯದಲ್ಲಿ ಮೊಕದ್ದಮೆ ಇರುವವರನ್ನು ಎನ್‌ಆರ್‌ಸಿ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.