ನವದೆಹಲಿ[ಆ.04]: ಅಸ್ಸಾಂನಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲು ಜಾರಿಗೊಳಿಸಲಾಗಿರುವ ರಾಷ್ಟ್ರೀಯ ನಾಗರಿಕ ನೊಂದಣಿ ಮಾದರಿ(ಎನ್‌ಆರ್‌ಸಿ)ಯಲ್ಲೇ, ದೇಶವ್ಯಾಪಿ ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಐಸಿ) ಸಿದ್ಧಪಡಿಸಲು ಸರ್ಕಾರ ನಿರ್ಧಾರಕ್ಕೆ ಬಂದಿದೆ. ಇದಕ್ಕೆ ಪೂರ್ವಭಾವಿಯಾಗಿ ಅದು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌)ಗೆ ನಿರ್ಧರಿಸಿದೆ.

ಅಸ್ಸಾಂ ಮಾದರಿಯಲ್ಲಿ ದೇಶದ ಇತರೆ ವಿವಿಧ ರಾಜ್ಯಗಳಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ದೇಶದಿಂದ ಹೊರಹಾಕಬೇಕೆಂಬ ಕೂಗು ದೇಶಾದ್ಯಂತ ವ್ಯಕ್ತವಾಗಿರುವ ಬೆನ್ನಲ್ಲೇ ಸರ್ಕಾರ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ. ಇತ್ತೀಚೆಗೆ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆದ್ಯತೆಗಳನ್ನು ಪಟ್ಟಿಮಾಡಿದ್ದರು. ಅದರಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮೂಲಕ ಅಕ್ರಮ ವಲಸಿಗರನ್ನು ಹೊರಹಾಕಲು ಕಟಿಬದ್ಧವಾಗಿದೆ ಎಂದು ಘೋಷಿಸಿದ್ದರು.

ಎನ್‌ಪಿಆರ್‌: ಪೌರತ್ವ ಕಾಯ್ದೆ 2003ರ 3ನೇ ವಿಧಿಯ ಉಪವಿಧಿ (4)ರ ಅನ್ವಯ ಸರ್ಕಾರವು ಜನಸಂಖ್ಯಾ ನೋಂದಣಿ ಸಿದ್ದಪಡಿಸುವ ಮತ್ತು ಅದನ್ನು ಪರಿಷ್ಕರಿಸುವ ನಿರ್ಧಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಸ್ಸಾಂ ಹೊರತುಪಡಿಸಿ, ದೇಶಾದ್ಯಂತ ಮನೆಮನೆಗೆ ತೆರಳಿ ಜನಸಂಖ್ಯಾ ನೋಂದಣಿ ಮಾಡಲಾಗುವುದು. 2020ರ ಏ.1ರಿಂದ 2020ರ ಸೆ.30ರವರೆಗೆ ದೇಶದ ಪ್ರತಿಯೊಬ್ಬ ವ್ಯಕ್ತಿಯ ಹೆಸರು ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ನಾಗರಿಕ ನೋಂದಣಿಯ ರಿಜಿಸ್ಟ್ರರ್‌ ಜನರಲ್‌ ಮತ್ತು ಜನಗಣತಿ ಆಯುಕ್ತ ವಿವೇಕ್‌ ಜೋಶಿ ಹೊರಡಿಸಿದ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

ಹೇಗೆ ನಡೆಯುತ್ತೆ?:

ರಾಷ್ಟ್ರೀಯ ಜನಸಂಖ್ಯಾ ನೋಂದಣಿಯು ಪ್ರತಿ ಗ್ರಾಮ ಅಥವಾ ಹೋಬಳಿಯಲ್ಲಿ ಕಳೆದ 6 ತಿಂಗಳಿನಿಂದ ವಾಸವಿರುವ ಅಥವಾ ಮುಂದಿನ 6 ತಿಂಗಳು ವಾಸವಿರುವ ನಾಗರಿಕರ ನೋಂದಣಿ ಪಟ್ಟಿಯಾಗಿದೆ. ಈ ಪಟ್ಟಿಯನ್ನು ಸ್ಥಳೀಯ, ಉಪವಿಭಾಗ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ 1955ರ ಪೌರತ್ವ ಕಾಯ್ದೆಯಡಿ ನಡೆಸಲಾಗುತ್ತದೆ. ದೇಶದ ಪ್ರತಿಪ್ರಜೆಯೂ ಈ ಪಟ್ಟಿಗೆ ತಮ್ಮ ಹೆಸರು ಸೇರಿಸುವುದು ಕಡ್ಡಾಯವಾಗಿರುತ್ತದೆ. ನೋಂದಣಿ ವೇಳೆ ಪ್ರತಿ ವ್ಯಕ್ತಿಯ ಪೂರ್ಣ ಮಾಹಿತಿ ಜೊತೆಗೆ ಬಯೋಮೆಟ್ರಿಕ್‌ ಕೂಡಾ ಪಡೆದುಕೊಳ್ಳಲಾಗುವುದು.

ಹೀಗೆ ಸಿದ್ದವಾಗುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌)ಯನ್ನು ಮೂಲವಾಗಿಟ್ಟುಕೊಂಡು ಬಳಿಕ ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ ಪಟ್ಟಿ(ಎನ್‌ಆರ್‌ಐಸಿ)ಯನ್ನು ಸಿದ್ಧಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಂದರೆ ಎನ್‌ಪಿಆರ್‌ ದೇಶದಲ್ಲಿ ಹಾಲಿ ವಾಸಿಸುತ್ತಿರುವ ಪ್ರತಿಯೊಬ್ಬ ಪ್ರಜೆಯ ಹೆಸರನ್ನು ಒಳಗೊಂಡಿರಲಿದ್ದರೆ, ಬಳಿಕ ಪ್ರಕಟಿಸಲಾಗುವ ಎನ್‌ಆರ್‌ಐಸಿಯ, ಅರ್ಹ ಭಾರತೀಯರನ್ನು ಮಾತ್ರ ಪಟ್ಟಿಯಲ್ಲಿ ಒಳಗೊಂಡಿರಲಿದೆ.

ಜನಸಂಖ್ಯಾ ಮಾಹಿತಿ ಸಂಗ್ರಹಿಸುವುದು ಹೇಗೆ?

- 2020ರ ಏ.1ರಿಂದ 2020 ಸೆ.30ರವರೆಗೆ ಮನೆಗೆ ಅಧಿಕಾರಿಗಳ ಆಗಮನ

- ಅಧಿಕಾರಿಗಳಿಂದ ಪ್ರತಿ ಪ್ರಜೆಯ ಪೂರ್ಣ ಮಾಹಿತಿ, ಬಯೋಮೆಟ್ರಿಕ್‌ ಸಂಗ್ರಹ

- ಪ್ರತಿ ಪ್ರಜೆ ತನ್ನ ಹೆಸರು ನೊಂದಾಯಿಸಿಕೊಳ್ಳುವುದು ಕಡ್ಡಾಯ

- ಯಾವುದೇ ಸ್ಥಳದಲ್ಲಿ 6 ತಿಂಗಳನಿಂದ ವಾಸವಿರುವ, ಮುಂದೆ 6 ತಿಂಗಳ ಇರುವ ವ್ಯಕ್ತಿ ಆ ಪ್ರದೇಶದಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು.

ಮೊದಲು ಜನಸಂಖ್ಯಾ ಮಾಹಿತಿ ಸಂಗ್ರಹ

ಸರ್ಕಾರ ಮೊದಲ ಹಂತದಲ್ಲಿ ನಡೆಸುತ್ತಿರುವುದು ಎನ್‌ಪಿಆರ್‌. ಅಂದರೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ. ಇದರಲ್ಲಿ ದೇಶದಲ್ಲಿ ಇರುವ ಎಲ್ಲಾ ಜನತೆ ತಮ್ಮ ಹೆಸರು ಸೇರಿಸಬಹುದು. ಯಾವುದೇ ಸ್ಥಳದಲ್ಲಿ 6 ತಿಂಗಳನಿಂದ ವಾಸ ಮಾಡುತ್ತಿರುವವರು, ಇಲ್ಲವೇ ಮುಂದೆ 6 ತಿಂಗಳು ಅದೇ ಸ್ಥಳದಲ್ಲಿ ವಾಸ ಮಾಡುವವರು ಅಧಿಕಾರಿಗಳ ಬಳಿ ತಮ್ಮ ಹೆಸರು ನೊಂದಾಯಿಸಬಹುದು. ಇದನ್ನೇ ಮೂಲವಾಗಿಟ್ಟುಕೊಂಡ ಸರ್ಕಾರ ರಾಷ್ಟ್ರೀಯ ನಾಗರಿಕ ಪಟ್ಟಿ(ಎನ್‌ಆರ್‌ಸಿ) ರಚಿಸುತ್ತದೆ.

ಅಂತಿಮವಾಗಿ ಅರ್ಹ ನಾಗರಿಕರ ನೋಂದಣಿ

ಎನ್‌ಆರ್‌ಸಿ ಎಂದರೆ ರಾಷ್ಟ್ರೀಯ ನಾಗರಿಕ ನೋಂದಣಿ. ಅರ್ಹ ನಾಗರಿಕರನ್ನು ಗುರುತಿಸಿ, ಅಕ್ರಮ ವಲಸಿಗರನ್ನು ಭಾರತದಿಂದ ಹೊರದಬ್ಬಲು, ಇದನ್ನು ಅಸ್ಸಾಂನಲ್ಲಿ ಜಾರಿಗೊಳಿಸಲಾಗಿದೆ. ಕೆಲ ನಿರ್ದಿಷ್ಟದಾಖಲೆ ಹೊಂದಿದವರಿಗೆ ಮಾತ್ರ ಇಂಥ ಪಟ್ಟಿಯಲ್ಲಿ ಹೆಸರು ಸೇರಿಸುವ ಅವಕಾಶ ಇರುತ್ತದೆ. ಉಳಿದವರನ್ನು ಅಕ್ರಮ ವಲಸಿಗರು ಎಂದು ಘೋಷಿಸಲಾಗುತ್ತದೆ. ಅವರಿಗೆ ಸರ್ಕಾರಿ ಸವಲತ್ತು ನಿರಾಕರಿಸಲಾಗುತ್ತದೆ.