ತಿರುವನಂತಪುರ[ಡಿ.23]: ಕೇರಳದ ಪ್ರಸಿದ್ಧ ಪುಣ್ಯ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ವಿವಿಧ ವಯೋಮಾನದ ಮಹಿಳೆಯರು ಪ್ರವೇಶಿಸಲು ಯತ್ನಿಸಿ ವಿಫಲರಾದ ಬೆನ್ನಲ್ಲೇ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 40ಕ್ಕೂ ಅಧಿಕ ಮಹಿಳೆಯರು ಅಯ್ಯಪ್ಪ ಯಾತ್ರೆಗೆ ಸಜ್ಜಾಗಿದ್ದಾರೆ. ಈ ತಂಡ ಭಾನುವಾರ ಕೇರಳದ ಕೊಟ್ಟಾಯಂ ತಲುಪಿ, ಅಲ್ಲಿಂದ ಪಂಪಾ ಕಡೆಗೆ ಪ್ರಯಾಣ ಬೆಳೆಸಲಿದೆ ಎಂದು ಹೇಳಲಾಗಿದೆ.

ಒಟ್ಟಾಗಿ ಹೊರಟರೆ ಅಯ್ಯಪ್ಪ ಭಕ್ತರು ತಮಗೆ ತಡೆಯೊಡ್ಡಬಹುದು ಎಂದು ಊಹಿಸಿರುವ ಈ ತಂಡ, ಸಣ್ಣ ಸಣ್ಣ ಗುಂಪುಗಳಾಗಿ ಕೇರಳದತ್ತ ಹೊರಟಿದೆ ಎಂದು ವರದಿಗಳು ತಿಳಿಸಿವೆ. ಕರ್ನಾಟಕ, ತಮಿಳುನಾಡು ಮಾತ್ರವೇ ಅಲ್ಲದೇ ಒಡಿಶಾ, ಮಧ್ಯಪ್ರದೇಶ ಹಾಗೂ ಕೇರಳದ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸುವ ತಂಡದಲ್ಲಿದ್ದಾರೆ ಎಂದು ಹೇಳಲಾಗಿದೆ.

4 ಹಿಜಡಾಗಳಿಗೆ ಅಯ್ಯಪ್ಪ ದರ್ಶನಕ್ಕೆ ಸಿಕ್ಕಿತು ಅವಕಾಶ

ತಮಿಳುನಾಡಿನ ಮನಿಥಿ (ತಮಿಳಿನಲ್ಲಿ ಮಹಿಳೆ ಎಂದರ್ಥ) ಎಂಬ ಸಂಘಟನೆ ಮಹಿಳೆಯರ ಅಯ್ಯಪ್ಪ ದೇಗುಲ ಯಾತ್ರೆ ನೇತೃತ್ವ ಹೊತ್ತುಕೊಂಡಿದೆ. ವಿವಿಧ ಭಾಗಗಳಿಂದ ಬರುವ ಸುಮಾರು 40 ಮಹಿಳೆಯರು ಕೊಟ್ಟಾಯಂನಲ್ಲಿ ಗುಂಪುಗೂಡಲಿದ್ದಾರೆ. ಅಲ್ಲಿಂದ ಶಬರಿಮಲೆಯ ತಪ್ಪಲಿನಲ್ಲಿರುವ ಪಂಪಾ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ. ಈಗಾಗಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೂ ಈ ಕುರಿತು ಮಾಹಿತಿ ನೀಡಿದ್ದಾರೆ. ಅಗತ್ಯ ಭದ್ರತೆ ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಹೇಳಲಾಗಿದೆ.

ಶಬರಿಮಲೆ ಅಯ್ಯಪ್ಪ ದೇಗುಲ ಹೋರಾಟಕ್ಕೆ ಮೊದಲ ಬಲಿ?

ಮನಿಥಿ ಎಂಬುದು ಚೆನ್ನೈನ ಮಹಿಳಾ ಸಂಘಟನೆಯಾಗಿದ್ದು, ಮಹಿಳೆಯರು ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈ ಸಂಘಟನೆಯ ನೇತೃತ್ವದಲ್ಲಿ ಅಯ್ಯಪ್ಪ ದೇಗುಲಕ್ಕೆ ತೆರಳುತ್ತಿರುವ ಗುಂಪಿನಲ್ಲಿ 50 ವರ್ಷದೊಳಗಿನ 15 ಮಹಿಳೆಯರಿದ್ದಾರೆ ಎಂದು ಹೇಳಲಾಗಿದೆ.

ಕೊನೆಗೂ ಶಬರಿಮಲೆಯತ್ತ ಮುಖಮಾಡಿದ ಭಕ್ತರು!

ಶಬರಿಮಲೆ ಅಯ್ಯಪ್ಪ ಬ್ರಹ್ಮಚಾರಿಯಾಗಿರುವ ಕಾರಣ 10ರಿಂದ 50 ವರ್ಷದೊಳಗಿನ ಮಹಿಳೆಯರು ದೇಗುಲ ಪ್ರವೇಶಿಸುವುದಕ್ಕೆ ಶಬರಿಮಲೆಯಲ್ಲಿ ಶತಮಾನಗಳಿಂದ ನಿರ್ಬಂಧವಿದೆ. ಕಳೆದ ಸೆಪ್ಟೆಂಬರ್‌ 28ರಂದು ಇದನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿತ್ತು. ಆನಂತರ ದೇಗುಲ ಪ್ರವೇಶಿಸಲು ಸಾಕಷ್ಟುಸಂಖ್ಯೆಯಲ್ಲಿ ಮಹಿಳೆಯರು ಪ್ರಯತ್ನ ನಡೆಸಿದ್ದರಾದರೂ, ಅಯ್ಯಪ್ಪ ಭಕ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ವಾಪಸಾಗಿದ್ದರು.