ತಿರುವನಂತಪುರ[ಡಿ.14]: ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ಅನುಮತಿ ನೀಡಿದ ಬಳಿಕ ಕೇರಳದಲ್ಲಿ ನಡೆದ ಹಿಂಸಾ ಪ್ರಕರಣ ಇದೀಗ ಮೊದಲ ಬಲಿಯನ್ನು ಪಡೆದಿದೆ. ಶಬರಿಮಲೆ ದೇಗುಲ ಸುತ್ತಮುತ್ತ ಪೊಲೀಸರು ಹೇರಿರುವ ನಿರ್ಬಂಧ ಕ್ರಮಗಳ ತೆರವಿಗೆ ಒತ್ತಾಯಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ವ್ಯಕ್ತಿಯೊಬ್ಬ ಆತ್ಮಾಹುತಿ ಮಾಡಿಕೊಂಡಿದ್ದಾನೆ.

ಮೃತ ವ್ಯಕ್ತಿಯನ್ನು ಮುತ್ತಡ ಮೂಲದ ಆಟೋ ಚಾಲಕ ವೇಣುಗೋಪಾಲನ್‌ ನಾಯರ್‌ (55) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ತನ್ನ ಪಕ್ಷಕ್ಕೆ ಸೇರಿದ ವ್ಯಕ್ತಿಯಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದ್ದರೂ, ಅಯ್ಯಪ್ಪ ಭಕ್ತನ ಸಾವಿಗೆ ರಾಜ್ಯ ಸರ್ಕಾರ ಮತ್ತು ಪೊಲೀಸರೇ ಕಾರಣ ಎಂದು ಆರೋಪಿಸಿರುವ ಬಿಜೆಪಿ, ಶುಕ್ರವಾರ ರಾಜ್ಯವ್ಯಾಪಿ ಬಂದ್‌ಗೆ ಕರೆದೊಟ್ಟಿದೆ. ಆದರೆ ಈ ಬಂದ್‌ನಿಂದ ಅಯ್ಯಪ್ಪ ಭಕಾಧಿಗಳು ಮತ್ತು ಅತ್ಯಗತ್ಯ ಸೇವೆಗಳಿಗೆ ವಿನಾಯ್ತಿ ನೀಡಲಾಗಿದೆ.

ಪ್ರತಿಭಟನೆ: ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ವಿವಿಧ ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿ ಶಬರಿಮಲೆ ಸುತ್ತಮತ್ತಲೂ ಹಲವು ದಿನಗಳ ಕಾಲ ಭಾರೀ ಪ್ರತಿಭಟನೆ ನಡೆಸಿತ್ತು. ಅಲ್ಲದೆ ದೇಗುಲ ಪ್ರವೇಶಕ್ಕೆ ಆಗಮಿಸಿದ್ದ ಹಲವು 10-50ರ ವಯೋಮಾನದ ಹಲವು ಮಹಿಳೆಯರನ್ನು ಹಿಂದಕ್ಕೆ ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದೇಗುಲ ಸುತ್ತಮುತ್ತಲೂ ಭಾರೀ ಭದ್ರತೆ ಒದಗಿಸಿತ್ತು. ಅಯ್ಯಪ್ಪ ಭಕ್ತರನ್ನು ವಿವಿಧ ರೀತಿಯ ತಪಾಸಣೆಗೆ ಗುರಿಪಡಿಸುತ್ತಿತ್ತು.

ಈ ಹಿನ್ನೆಲೆಯಲ್ಲಿ ಇಂಥ ನಿರ್ಬಂಧಗಳನ್ನು ತೆರವು ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ನಾಯಕ ಸಿ.ಕೆ.ಪದ್ಮನಾಭನ್‌ ರಾಜ್ಯ ವಿಧಾನಸಭೆಯ ಸಮೀಪವೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಗುರುವಾರ ಮುಂಜಾನೆ 2 ಗಂಟೆ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ವೇಣುಗೋಪಾಲನ್‌, ಅಲ್ಲಿ ಬಿಜೆಪಿ ಕಾರ್ಯಕರ್ತರ ಬಳಿ, ತಾನು ಅಯ್ಯಪ್ಪನ ಪರಮ ಭಕ್ತನಾಗಿದ್ದು, ದೇವರಿಗೋಸ್ಕರ ಪ್ರಾಣಬಿಡಲೂ ಸಿದ್ಧ ಎಂದು ಹೇಳಿಕೊಂಡಿದ್ದಾರೆ. ಆದರೆ ಈತನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಇದಾದ ಕೆಲವೇ ಕ್ಷಣಗಳಲ್ಲಿ ಆತ ಮೈಮೇಲೆ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿಕೊಂಡು, ವಿಧಾನಸೌಧದ ಕಡೆ ಓಡಿ ಬಂದಿದ್ದಾನೆ. ಈ ವೇಳೆ ಆತನನ್ನು ಬಿಜೆಪಿ ಕಾರ್ಯಕರ್ತರು ತಡೆಯುವ ಯತ್ನ ಮಾಡಿದ್ದಾರೆ. ಆದರೂ ಆತ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾನೆ. ಬಳಿಕ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾದ ಬಿಜೆಪಿ ಕಾರ್ಯಕರ್ತರು, ಬೆಂಕಿ ನಂದಿಸಿ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಶೇ.90ರಷ್ಟುಸುಟ್ಟಗಾಯದೊಂದಿಗೆ ದಾಖಲಾಗಿದ್ದ ವೇಣುಗೋಪಾಲನ್‌, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮಧ್ಯಾಹ್ನ ಸಾವನ್ನಪ್ಪಿದ್ದಾನೆ.