ನವದೆಹಲಿ, (ಮೇ. 31) : ನಿನ್ನೆ (ಗುರುವಾರ) ಪ್ರಮಾಣ ವಚನ ಸ್ವೀಕರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

ಕ್ಯಾಬಿನೆಟ್, ರಾಜ್ಯ ಖಾತೆ ಸೇರಿದಂತೆ ಒಟ್ಟು 58 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.  25 ಕ್ಯಾಬಿನೆಟ್, 9 ಸ್ವತಂತ್ರ ರಾಜ್ಯ ಖಾತೆ ಹಾಗೂ 24 ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮೋದಿ ಸಂಪುಟದಲ್ಲಿ ಕರ್ನಾಟಕಕ್ಕೆ ಒಲಿದ ನಾಲ್ಕು ಸಚಿವ ಸ್ಥಾನ

ಈ ಪೈಕಿ ಕರ್ನಾಟಕದಿಂದ ನಾಲ್ವರು ನರೇಂದ್ರ ಮೋದಿ ಅವರ ಸಂಪುಟ ಸೇರಿದ್ದರು, ಗುರುವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಇಂದು (ಶುಕ್ರವಾರ) ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

ಪ್ರಹ್ಲಾದ್ ಜೋಶಿ, ಡಿ.ವಿ.ಸದಾನಂದ ಗೌಡ, ನಿರ್ಮಲಾ ಸೀತರಾಮನ್ ಅವರು ಕ್ಯಾಬಿನೆಟ್ ಸಚಿವರಾಗಿದ್ದರೆ,  ಸುರೇಶ್ ಅಂಗಡಿ  ಅವರು ರಾಜ್ಯ ಖಾತೆ ಸಚಿವರಾಗಿದ್ದಾರೆ.

ಟೀಂ ಮೋದಿ: ಯಾರಿಗೆ ಯಾವ ಖಾತೆ? ಇಲ್ಲಿದೆ ಫುಲ್ ಲಿಸ್ಟ್

ಹಾಗಾದ್ರೆ ರಾಜ್ಯದ ನೂತನ ಸಚಿವರಿಗೆ ಯಾವ-ಯಾವ ಖಾತೆ?'

#1. ಡಿ.ವಿ.ಸದಾನಂದಗೌಡ-ಕ್ಯಾಬಿನೆಟ್

ಈ ಹಿಂದಿನ ಮೋದಿ ಸಂಪುಟದಲ್ಲಿ ರೈಲ್ವೆ, ಸಾಂಖ್ಯಿಕ ಖಾತೆಯನ್ನು ನಿರ್ವಹಿಸಿದ್ದ  ಬೆಂಗಳೂರು ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಿ.ವಿ.ಸದಾನಂದಗೌಡ ಅವರಿಗೆ ಈ ಬಾರಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನೀಡಲಾಗಿದೆ. ಈ ಹಿಂದಿನ ಸರ್ಕಾರದಲ್ಲಿ ಇದೇ ಖಾತೆಯನ್ನು ಅನಂತ್ ಕುಮಾರ್ ಅವರು ನಿಭಾಹಿಸಿದ್ದರು. 

#2. ಪ್ರಹ್ಲಾದ್ ಜೋಶಿ-ಕ್ಯಾಬಿನೆಟ್

57 ವರ್ಷದ ಧಾರವಾಡ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಹೊಣೆಯನ್ನು ನೀಡಲಾಗಿದೆ. ಧಾರವಾಡ ಕ್ಷೇತ್ರದಿಂದ 4 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಜೋಶಿ ಅವರು, ಇದೇ ಮೊದಲ ಬಾರಿಗೆ ಮೋದಿ ಸಂಪುಟ ಸೇರಿದ್ದಾರೆ.

#3. ನಿರ್ಮಾಲಾ ಸೀತರಾಮನ್-ಕ್ಯಾಬಿನೆಟ್

ಕಳೆದ ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವೆಯಾಗಿದ್ದ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತರಾಮನ್ ಅವರಿಗೆ ಈ ಬಾರಿ ಹಣಕಾಸು ಖಾತೆ ಹೊಣೆ ನೀಡಲಾಗಿದೆ. ಈ ಹಿಂದೆ ಅರುಣ್ ಜೇಟ್ಲೆ ಅವರು ಹಣಕಾಸು ಸಚಿವರಾಗಿದ್ದರು.  ನಿರ್ಮಲಾ ಸೀತಾರಾಮನ್ ಅವರು ನಿರ್ವಹಿಸಿದ್ದ ರಕ್ಷಣಾ ಖಾತೆಯನ್ನು ರಾಜನಾಥ್ ಸಿಂಗ್ ಅವರಿಗೆ ನೀಡಲಾಗಿದೆ.

#4.ಸುರೇಶ್ ಅಂಗಡಿ-ರಾಜ್ಯ ಖಾತೆ


ಬೆಳಗಾವಿಯಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸುರೇಶ್ ಅಂಗಡಿ ಅವರು ಇದೇ ಮೊದಲ ಬಾರಿಗೆ ಮೋದಿ ಟೀಂನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದು, ಅವರಿಗೆ ರಾಜ್ಯ ರೈಲ್ವೆ ಖಾತೆ ನೀಡಲಾಗಿದೆ.