ಚಿರಂಜೀವಿಗೆ ನ್ಯಾಷನಲ್ ಅವಾರ್ಡ್ ಮಿಸ್ ಆಗಿದ್ದೇಕೆ? ಕೊನೆಗೂ ಈ ಸೀಕ್ರೆಟ್ ಹೇಳಿಯೇ ಬಿಟ್ಟ ತೆಲುಗು ಚಿತ್ರರಂಗದ ಘಟಾನುಘಟಿ ನಿರ್ಮಾಪಕರ ಮಗ ಶ್ರೀರಾಮ್. ಜೊತೆಗೆ, ‘ಉತ್ತರ ಭಾರತದವರಿಂದಲ್ಲ, ನಮ್ಮ ದಕ್ಷಿಣ ಭಾರತೀಯರಿಂದಲೇ ರಾಜಕೀಯ’ ಆಗಿದ್ದು ಎಂದಿದ್ದಾರೆ. ಯಾರವರು? ಈ ಸ್ಟೋರಿ ನೋಡಿ..

ಚಿರಂಜೀವಿ ತಮ್ಮ ವೃತ್ತಿಜೀವನದಲ್ಲಿ ನೋಡದ ಯಶಸ್ಸೇ ಇಲ್ಲ. ನಟನಾಗಿ ಅವರು ಅದ್ಭುತ ಪಾತ್ರಗಳನ್ನು ಮಾಡಿದ್ದಾರೆ. ಟಾಲಿವುಡ್‌ನಲ್ಲಿ ಯಾರಿಗೂ ಸಾಧ್ಯವಾಗದ ಕಮರ್ಷಿಯಲ್ ಸಕ್ಸಸ್ ಕಂಡಿದ್ದಾರೆ. ಅತಿ ಹೆಚ್ಚು ಇಂಡಸ್ಟ್ರಿ ಹಿಟ್ ಕೊಟ್ಟ ಹೀರೊ ಕೂಡ ಅವರೇ. ಆದರೆ, ಚಿರಂಜೀವಿಗೆ ಈವರೆಗೂ ಒಂದೇ ಒಂದು ನ್ಯಾಷನಲ್ ಅವಾರ್ಡ್ ಸಿಕ್ಕಿಲ್ಲ. ಭಾರತ ಸರ್ಕಾರದಿಂದ ಪದ್ಮಭೂಷಣ, ಪದ್ಮವಿಭೂಷಣದಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದರೂ, ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಮಾತ್ರ ಅವರಿಗೆ ಒಲಿಯಲಿಲ್ಲ.

ಹಾಗಾದರೆ ಚಿರಂಜೀವಿ ನ್ಯಾಷನಲ್ ಅವಾರ್ಡ್ ಗೆಲ್ಲುವಂತಹ ಸಿನಿಮಾಗಳನ್ನೇ ಮಾಡಿಲ್ಲವಾ ಎಂಬ ಪ್ರಶ್ನೆ ಬರಬಹುದು. ಖಂಡಿತ ಮಾಡಿದ್ದಾರೆ. ರುದ್ರವೀಣ, ಸ್ವಯಂ ಕೃಷಿ, ಆಪದ್ಬಾಂಧವುಡು, ಪುನ್ನಮಿ ನಾಗು, ಖೈದಿ ಮುಂತಾದ ಸಿನಿಮಾಗಳಲ್ಲಿ ಚಿರಂಜೀವಿ ಅವರ ನಟನಾ ವಿಶ್ವರೂಪವನ್ನೇ ನಾವು ನೋಡಬಹುದು.

ನಿರ್ಮಾಪಕ ಏಡಿಧ ನಾಗೇಶ್ವರ ರಾವ್ ಅವರು ಚಿರಂಜೀವಿ ಜೊತೆ 'ಸ್ವಯಂ ಕೃಷಿ', 'ಆಪದ್ಬಾಂಧವುಡು' ನಂತಹ ಕಲಾತ್ಮಕ ಸಿನಿಮಾಗಳನ್ನು ನಿರ್ಮಿಸಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರ ಮಗ ಏಡಿಧ ಶ್ರೀರಾಮ್, 'ಆಪದ್ಬಾಂಧವುಡು' ಸಿನಿಮಾದ ಬಗ್ಗೆ ಆಸಕ್ತಿದಾಯಕ ವಿಚಾರ ಹಂಚಿಕೊಂಡಿದ್ದಾರೆ. ಈ ಚಿತ್ರದ ನಟನೆಗಾಗಿ ಚಿರಂಜೀವಿಗೆ ನ್ಯಾಷನಲ್ ಅವಾರ್ಡ್ ಬರಬೇಕಿತ್ತು ಎಂದು ಶ್ರೀರಾಮ್ ಹೇಳಿದ್ದಾರೆ.

ಆಪದ್ಬಾಂಧವುಡು ಸಿನಿಮಾಗೆ ಚಿರಂಜೀವಿಗೆ ರಾಷ್ಟ್ರ ಪ್ರಶಸ್ತಿ ಬಹುತೇಕ ಖಚಿತ ಎಂಬ ಮಾಹಿತಿ ನಮಗೆ ಮೊದಲೇ ಸಿಕ್ಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ನ್ಯಾಷನಲ್ ಅವಾರ್ಡ್ ಜ್ಯೂರಿ ರಾಜಕೀಯ ಮಾಡಿತು. ಈ ರಾಜಕೀಯ ಮಾಡಿದ್ದು ನಾರ್ತ್‌ನವರಲ್ಲ, ಬದಲಾಗಿ ಸೌತ್‌ನವರೇ. ಉತ್ತರ ಭಾರತದ ತಮಗೆ ಬೇಕಾದವರಿಗೆ ಪ್ರಶಸ್ತಿ ಕೊಡಿಸಲು ಚಿರಂಜೀವಿ ಹೆಸರನ್ನು ಕೈಬಿಟ್ಟರು ಎಂದು ಏಡಿಧ ಶ್ರೀರಾಮ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಅಲ್ಲಿ ರಾಜಕೀಯ ಮಾಡಿದ್ದು ತಮಿಳಿನವರು ಎಂದು ಶ್ರೀರಾಮ್ ತಿಳಿಸಿದ್ದಾರೆ. ಏನೇ ಆದರೂ ಚಿರಂಜೀವಿ ಅವರಿಗೆ ಪ್ರಶಸ್ತಿಗಳ ಅಗತ್ಯವಿಲ್ಲ. ಅವರು ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಜೊತೆಗೆ ಪದ್ಮಭೂಷಣ, ಪದ್ಮವಿಭೂಷಣದಂತಹ ಅತ್ಯುನ್ನತ ಪ್ರಶಸ್ತಿಗಳೇ ಅವರನ್ನು ಹುಡುಕಿಕೊಂಡು ಬಂದಿವೆ ಎಂದು ಅವರು ಹೇಳಿದ್ದಾರೆ.