ರಾಜ್ಯದಲ್ಲಿ ಲಾಕ್‌ಡೌನ್‌ನಿಂದ ಮುಚ್ಚಲಾಗಿದ್ದ ಸಿನಿಮಾ ಮಂದಿರಗಳು ಶೀಘ್ರದಲ್ಲೇ ರಾಜ್ಯದಲ್ಲಿ ತೆರೆಯುವ ನಿರೀಕ್ಷೆ ಇದೆ. 

ಬೆಂಗಳೂರು (ಸೆ.10):  ಅಕ್ಟೋಬರ್‌ 1ರಿಂದಲೇ ಚಿತ್ರಮಂದಿರಗಳ ಆರಂಭಕ್ಕೆ ಅನುಮತಿ ಕೊಡುವಂತೆ ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಯ ಚಿತ್ರರಂಗದ ಗಣ್ಯರು ಒತ್ತಾಯ ಮಾಡಿದ್ದಾರೆ.

ಲಾಕ್‌ಡೌನ್‌ ಮುಕ್ತಾಯ ಆಗುತ್ತಿರುವ ಹಿನ್ನೆಲೆಯಲ್ಲಿ ಒಂದೊಂದೇ ಕ್ಷೇತ್ರವನ್ನು ಅನ್‌ಲಾಕ್‌ ಮಾಡುತ್ತಿರುವ ಕೇಂದ್ರ ಗೃಹ ಸಚಿವಾಲಯ, ಚಿತ್ರಮಂದಿರಗಳ ಆರಂಭಕ್ಕೆ ಸಂಬಂಧಿಸಿದಂತೆ ಸೆ.8ರಂದು ಚಿತ್ರರಂಗದ ಗಣ್ಯರ ಜತೆ ಸಭೆ ನಡೆಸಿತು. ಈ ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಮಾರ್ಚ್ ತಿಂಗಳಲ್ಲಿ ಬಾಗಿಲು ಮುಚ್ಚಿದ ಚಿತ್ರಮಂದಿರಗಳು ಇದುವರೆಗೂ ತೆರೆದಿಲ್ಲ. ಬಹುತೇಕ ಎಲ್ಲ ಕ್ಷೇತ್ರಗಳು ಆರಂಭವಾಗಿವೆ. ಈ ನಿಟ್ಟಿನಲ್ಲಿ ಚಿತ್ರಮಂದಿರಗಳ ಆರಂಭಕ್ಕೂ ಅನುಮತಿ ಕೊಡಬೇಕು. ಸಾಧ್ಯವಾದರೆ ಅಕ್ಟೋಬರ್‌ 1ರಿಂದಲೇ ಥಿಯೇಟರ್‌ ಬಾಗಿಲು ತೆರೆಯಲು ಅವಕಾಶ ಮಾಡಿಕೊಡುವಂತೆ ಕನ್ನಡ ಚಿತ್ರರಂಗದ ಪರವಾಗಿ ಅಧ್ಯಕ್ಷ ಜೈರಾಜ್‌ ಮನವಿ ಮಾಡಿದರು.

ಈ ಕುರಿತು ಮಾತನಾಡಿದ ಜೈರಾಜ್‌, ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರ ಬೇಡಿಕೆ ಅ.1ರಿಂದಲೇ ಚಿತ್ರಮಂದಿರಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು ಎಂಬುದೇ ಆಗಿದೆ. ಚಿತ್ರೋದ್ಯಮ ಹಲವು ರೀತಿಯಲ್ಲಿ ಈಗಾಗಲೇ ನಷ್ಟಅನುಭವಿಸಿದೆ. ಚಿತ್ರರಂಗ ನಿಂತಿರುವುದೇ ಥಿಯೇಟರ್‌ಗಳ ಮೇಲೆ. ಹೀಗಾಗಿ ಎಲ್ಲ ಕ್ಷೇತ್ರಗಳಂತೆ ಚಿತ್ರಮಂದಿರಗಳನ್ನೂ ಆರಂಭಿಸಲು ಅನುಮತಿ ಕೊಡಬೇಕು ಎಂದು ಸಭೆಯಲ್ಲಿ ನಾನು ಬೇಡಿಕೆ ಇಟ್ಟಿದ್ದೇನೆ. ನಾನು ಮಾತ್ರವಲ್ಲ, ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರ ಬೇಡಿಕೆಯೂ ಇದೇ ಆಗಿತ್ತು. ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಅ.1ರಿಂದ ಚಿತ್ರಮಂದಿರಗಳ ಆರಂಭಕ್ಕೆ ಅನುಮತಿ ಸಿಕ್ಕರೆ ಶೇ.75 ಭಾಗ ಸೀಟುಗಳ ಭರ್ತಿಗೆ ಅವಕಾಶ ಕೊಡಬೇಕು. ಸೀಟುಗಳ ಭರ್ತಿಯಲ್ಲಿ ಕಠಿಣ ನಿಯಮಗಳನ್ನು ಮಾರ್ಗಸೂಚಿಗಳನ್ನು ಹಾಕಬಾರದು ಎಂದು ಒತ್ತಾಯಿಸಿರುವ ಜೈರಾಜ್‌, ಆದಷ್ಟುಬೇಗ ಚಿತ್ರಮಂದಿರಗಳ ಆರಂಭಕ್ಕೆ ಕೇಂದ್ರ ಸರ್ಕಾರ ಮನಸ್ಸು ಮಾಡಬೇಕು ಎಂದರು.