ಹೆತ್ತವರ ಕಳೆದುಕೊಂಡು ಅನಾಥರಾಗಿದ್ದ ಮೂವರು ಮಕ್ಕಳು| ಸೋನು ಸೂದ್‌ ಅಂಕಲ್‌ ಅವರಂತೆ ಯಾರಾದರೂ ನಮ್ಮ ನೆರವಿಗೆ ಬಂದ್ರೆ ಡಾಕ್ಟರ್ ಆಗಿ ಬಡವರ ಆರೈಕೆ ಮಾಡುತ್ತೇನೆಂದ ಪುಟ್ಟ ಬಾಲಕ| ವಿಡಿಯೋ ನೋಡಿ ಮಕ್ಕಳ ದತ್ತು ಪಡೆದ ಸೋನು ಸೂದ್

ಹೈದರಾಬಾದ್(ಆ.01): ಲಾಕ್‌ಡೌನ್ ಸಂದರ್ಭದಲ್ಲಿ ಅಲ್ಲಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರ ತವರುನಾಡಿಗೆ ಸುರಕ್ಷಿತವಾಗಿ ತಲುಪಿಸಿದ, ಅನಾಥ ಹಾಗೂ ಬಡವರ ಹಸಿವು ನೀಗಿಸಿದ ರಿಯಲ್ ಲೈಫ್ ಹೀರೋ ಸೋನು ಸೂದ್ ಇದೀಗ ಮತ್ತೆ ಸದ್ದು ಮಾಡಿದ್ದಾರೆ. ಕಳೆದೆರಡು ದಿನಗಳ ಹಿಂದಷ್ಟೇ ಉದ್ಯೋಗ ಕಳೆದುಕೊಂಡು ತರಕಾರಿ ಮಾರಾಟ ಮಾಡುತ್ತಿದ್ದ ಇಂಜಿನಿಯರಿಂಗ್ ಕಲಿತಿದ್ದ ಯುವತಿಗೆ ಕೆಲಸ ಕೊಡಿಸಿದ್ದ ಸೋನು, ಇದೀಗ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಮೂವರು ಮಕ್ಕಳನ್ನು ದತ್ತು ಪಡೆದಿದ್ದಾರೆ.

ತರಕಾರಿ ವ್ಯಾಪಾರಕ್ಕಿಳಿದಿದ್ದ ಇಂಜಿನಿಯರ್‌ಗೆ ಸೋನು ಸೂದ್‌ ಜಾಬ್ ಆಫರ್

ತೆಲಂಗಾಣದ ಯಾದಾದ್ರಿ ಜಿಲ್ಲೆಯ ಆತ್ಮಕೂರ್ ಗ್ರಾಮದ ಮೂವರು ಮಕ್ಕಳು ಕೊರೋನಾತಂಕದ ನಡುವೆ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಈ ಅನಾಥರಿಗೆ ಹೇಗಾದರೂ ಸಹಾಯ ಮಾಡಿ ಎಂದು ಟ್ವಿಟರ್‌ ಮೂಲಕ ವ್ಯಕ್ತಿಯೊಬ್ಬರು ಆಗ್ರಹಿಸಿದ್ದರು. ಈ ವಿಚಾರವನ್ನು ಗಮನಿಸಿದ ಸೋನು ಸೂದ್ ಈ ಮಕ್ಕಳು ಇನ್ಮುಂದೆ ಅನಾಥರಲ್ಲ. ಇವರ ಜವಾಬ್ದಾರಿ ನನ್ನದು ಎಂದಿದ್ದಾರೆ. ಈ ಮೂಲಕ ತೆರೆ ಮೇಲಿನ ಖಳನಟ ಮತ್ತೆ ತಮ್ಮ ಹೃದಯ ಶ್ರೀಮಂತಿಕೆಯಿಂದ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ರಾಜೇಶ್ ಕರಣಂ ಹೆಸರಿನ ವ್ಯಕ್ತಿಯೊಬ್ಬರು ಸೋನು ಸೂದ್‌ರನ್ನು ಟ್ಯಾಗ್‌ ಮಾಡಿ ಟ್ವೀಟ್‌ ಒಂದನ್ನು ಮಾಡಿದ್ದರು. ಇದರಲ್ಲಿ ಅವರು 'ಸೋನು ಸೂದ್‌ರವರೇ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಮೂವರು ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ. ಈ ಮಕ್ಕಳಿಗೆ ಯಾರೂ ಇಲ್ಲ. ಸದ್ಯ ಹಿರಿಯ ಮಗು ಉಳಿದಿಬ್ಬರ ಆರೈಕೆ ಮಾಡುತ್ತಿದ್ದಾನೆ. ಅವರೀಗ ಅನಾಥರಾಗಿದ್ದಾರೆ. ಅವರು ನಿಮ್ಮ ಸಹಾಯ ಬಯಸುತ್ತಾರೆ. ದಯವಿಟ್ಟು ಅವರಿಗೆ ಸಹಾಯ ಮಾಡಿ' ಎಂದು ಕೆಳಿಕೊಂಡಿದ್ದರು.

Scroll to load tweet…

ಈ ಟ್ವೀಟ್ ಜೊತೆ ಅವರು ವಿಡಿಯೋ ಒಂದನ್ನೂ ಶೇರ್ ಮಾಡಿಕೊಂಡಿದ್ದರು. ಇದರಲ್ಲಿರುವ ಮೂವರು ಪುಟ್ಟ ಮಕ್ಕಳು ವರ್ಷದ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ಆದರೆ ಕಳೆದ ವಾರ ತಾಯಿಯೂ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು. ಅಲ್ಲದೇ ಹಿರಿಯ ಮಗು ತಮಗ್ಯಾರೂ ಇಲ್ಲ, ದಯವಿಟ್ಟು ಸಹಾಯ ಮಾಡಿ ಎಂದು ಸೋನ್ ಸೂದ್ ಬಳಿ ಆಗ್ರಹಿಸುತ್ತಿರುವ ದೃಶ್ಯಗಳೂ ಇವೆ.

'ಸೋನು ಸೂದ್‌ ಅಂಕಲ್ ಅಗತ್ಯವಿದ್ದವರಿಗೆ ಸಹಾಯ ಮಾಡುವ ಅನೇಕ ವಿಡಿಯೋಗಳನ್ನು ನೋಡಿದ್ದೇನೆ. ಅಂತಹ ಅಂಕಲ್ ನಮ್ಮ ನೆರವಿಗೆ ಬಂದರೆ ನಾನು ಮುಂದೆ ಡಾಕ್ಟರ್ ಆಗಿ ಬಡವರ ಆರೈಕೆ ಮಾಡಲು ಬಯಸುತ್ತೇನೆ' ಎಂದೂ ಬಾಲಕ ವಿಡಿಯೋದಲ್ಲಿ ಹೇಳಿದ್ದಾನೆ. 

Scroll to load tweet…

ಮಕ್ಕಳ ಈ ಭಾವನಾತ್ಮಕ ವಿಡಿಯೋ ನೋಡಿದ ಮರುಕ್ಷಣವೇ ಟ್ವೀಟ್ ಮಾಡಿರುವ ಸೋನು ಸೂದ್ ಇನ್ಮುಂದೆ ಈ ಮಕ್ಕಳು ಅನಾಥರಲ್ಲ, ಅವರೆಲ್ಲರೂ ನನ್ನ ಜವಾಬ್ದಾರಿ ಎಂದು ಘೋಷಿಸಿದ್ದಾರೆ.