ಬೆಂಗಳೂರು(ಜೂ.08): ಸ್ಯಾಂಡಲ್‌ವುಡ್‌ ಖ್ಯಾತ ನಟ ಚಿರಂಜೀವಿ ಸರ್ಜಾ ಭಾನುವಾರ ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಿರು ಸರ್ಜಾ ಸಾವಿಗೆ ರಾಜಕೀಯ ಗಣ್ಯರು ಹಾಗೂ ಸಿನಿ ತಾರೆಯವರು ಸೇರಿ  ಅನೇಕ ಮಂದಿ ಸಂತಾಪ ಸೂಚಿಸಿದ್ದಾರೆ. ಆದರೆ ಈ ನಡುವೆ ಖ್ಯಾತ ಲೇಖಕಿಯೊಬ್ಬರ ಟ್ವೀಟ್ ಒಂದು ಭಾರೀ ಟೀಕೆಗೊಳಗಾಗಿದೆ. ಚಿರು ಸಾವಿಗೆ ಸಂತಾಪ ಸೂಚಿಸುವ ಭರದಲ್ಲಿ ಈ ಲೇಖಕಿ ಟಾಲಿವುಡ್​ ನಟ ಚಿರಂಜೀವಿಗೆ ಶ್ರದ್ಧಾಂಜಲಿ ಸಲ್ಲಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.

'ಏನಾದ್ರೂ ಮಾಡಿ ಆದ್ರೆ ಚಿರು ಕೈಯಲ್ಲಿರೋ ಭಾರತದ ಧ್ವಜ, ತ್ರಿಶೂಲ ತೆಗೆಯಬೇಡಿ'

ಹೌದು ಚಿರಂಜೀವಿ ಸರ್ಜಾ ಅಕಾಲಿಕ ಸಾವು ಎಲ್ಲರಿಗೂ ಶಾಕ್ ಕೊಟ್ಟಿದೆ. ಶನಿವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸದ ಚಿರು, ಭಾನುವಾರ ತಪಾಸಣೆಗಾಗಿ ವೈದ್ಯರ ಅಪಾಯಿಂಟ್ಮೆಂಟ್ ಪಡೆದಿದ್ದರು. ಆದರೆ ಆಸ್ಪತ್ರೆಗೆ ಹೋಗುವುದಕ್ಕೂ ಮೊದಲೇ ಮತ್ತೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದಾರೆ. ಇವರ ಅಗಲುವಿಕೆ ಸ್ಯಾಂಡಲ್‌ವುಡ್‌ಗೆ ಭುದೊಡ್ಡ ಆಘಾತ ನೀಡಿದೆ. 

ಚಿರು ಸರ್ಜಾ ಸಾವಿನ ಸುದ್ದಿ ಲಭಿಸುತ್ತಿದ್ದಂತೆಯೇ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಆದರೆ ಈ ನಡುವೆ ಸೆಲೆಬ್ರಿಟಿ ಲೇಖಕಿ ಶೋಭಾ ಡೇ ಬಹುದೊಡ್ಡ ಎಡವಟ್ಟು ಮಾಡಿದ್ದಾರೆ. ಚಿರು ಸರ್ಜಾ ಬದಲು ಟಾಲಿವುಡ್​ ನಟ ಚಿರಂಜೀವಿ ಫೋಟೋ ಹಾಕಿ 'ಮತ್ತೋರ್ವ ಶೈನಿಂಗ್​ ಸ್ಟಾರ್​ನನ್ನು ನಾವು ಕಳೆದುಕೊಂಡಿದ್ದೇವೆ. ಎಂತ ಟ್ರೆಜಡಿ ಲಾಸ್​. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ' ಸಂತಾಪ ಸೂಚಿಸುವ ಟ್ವೀಟ್ ಮಾಡಿದ್ದಾರೆ. ಆದರೆ ಬಳಿಕ ಈ ಟ್ವೀ​ಟ್​ ಡಿಲೀಟ್​ ಮಾಡಿದ್ದಾರೆ. ಅವರ ಈ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದು, ಕ್ಷಮೆ ಯಾಚಿಸಬೇಕೆಂಬ ಕೂಗು ಕೇಳಿ ಬಂದಿದೆ.